ಮಂಗಳೂರು,ಆಗಸ್ಟ್.14: ಮಾನವ ಸಮುದಾಯಕ್ಕಾಗಿ ನಿಸ್ವಾರ್ಥ ಸೇವೆ, ಸಾಮಾಜಿಕ ಕಾರ್ಯ ಮತ್ತು ಸಮಾಜಕ್ಕಾಗಿ ನಿಂರತರವಾಗಿ ದುಡಿಯುತ್ತಿರುವ ನಗರದ ರೆ.ಫಾ.ರೊನಿ ಪ್ರಭು. ಎಸ್.ಜೆ, ಸಚಿತಾ ನಂದಗೋಪಾಲ್ ಮತ್ತು ಜೋ ಗೋನ್ಸಾಲ್ವಿಸ್ ಅವರನ್ನು ಇಂಟರನೇಶನಲ್ ಇನ್ಸಿಟಿಟ್ಯೂಟ್ ಆಫ್ ಪಬ್ಲಿಕ್ ಪಾಲಿಸಿ (ಐಐಪಿಪಿ) ನೀಡುವ ಮಂಗಳೂರು ಅತ್ಯುತ್ತಮ ಸಮುದಾಯ ಮುಖಂಡರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಅಂತಾರಾಷ್ಟ್ರೀಯ ಓರಿಯಂಟೇಶನ್ ಸೆಂಟರ್ ಮತ್ತು ಐಐಪಿಪಿ ಸಂಸ್ಥಾಪಕರಾದ ಅಮೆರಿಕಾ ಟೆಕ್ಸಾಸ್ ನಲ್ಲಿರುವ ಮ್ಯಾಕ್ಸ್ ರಸ್ಕೀನಾ ಮತ್ತು ಜೆಸ್ಸೀ ರಸ್ಕೀನಾ ಅವರು ಪ್ರಶಸ್ತಿ ವಿಜೇತರ ಘೋಷಣೆ ಮಾಡಿದ್ದಾರೆ. ಸಾಮಾನ್ಯವಾಗಿ ಪ್ರಶಸ್ತಿ ವಿಜೇತರ ಪ್ರಕಟಣೆಯನ್ನು ಭಾರತದ ಸ್ವಾತಂತ್ರೋತ್ಸವ ದಿನಾಚರಣೆ ಮುನ್ನ ದಿನ ಮಾಡಲಾಗುತ್ತದೆ.
ಪ್ರಶಸ್ತಿಯು ಐವತ್ತು ಸಾವಿರ ರೂಪಾಯಿ ನಗದು ಬಹುಮಾನ ಮತ್ತು ಸ್ಪಟಿಕ ನಿರ್ಮಿತ ಪ್ರಶಸ್ತಿ ಫಲಕವನ್ನು ಹೊಂದಿರುತ್ತದೆ. ವಿವಿಧ ಸಮಾಜ ಸೇವಾ ಕ್ಷೇತ್ರದಲ್ಲಿ ಪ್ರಶಂಸನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಪ್ರತಿವರ್ಷ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಪ್ರಶಸ್ತಿ ಸ್ಥಾಪನೆ ಮಾಡಿರುವ ಅಮೆರಿಕಾ ನಿವಾಸಿ ಮ್ಯಾಕ್ಸ್ ರಸ್ಕೀನಾ ಅವರು ಮಂಗಳೂರಿಗರಾಗಿದ್ದು ತಮ್ಮ ತಾಯ್ನಾಡಿನಲ್ಲಿ ಸಮಾಜದ ಏಳಿಗೆಗಾಗಿ ದುಡಿಯುತ್ತಿರುವ ಮಹನೀಯರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದ್ದಾರೆ. ಕಳೆದ ಐವತ್ತು ವರ್ಷಗಳಿಂದ ಅಮೆರಿಕಾದಲ್ಲಿ ನೆಲೆಸಿರುವ ಅವರು ತಾಯ್ನಾಡಿಗೆ ಭೇಟಿ ನೀಡಿದಾಗ ಪ್ರಶಸ್ತಿ ಪ್ರದಾನ ಮಾಡುವರು.
ನಮ್ಮೊಂದಿಗೆ ಸಾಕಷ್ಟು ಮಂದಿ ಸಮಾಜಕ್ಕಾಗಿ ದುಡಿಯುವ ಜನರಿದ್ದು, ಎಲ್ಲರನ್ನು ಗುರುತಿಸಿ ಗೌರವಿಸಲು ಅರ್ಹರಾದವರ ಪಟ್ಟಿ ನಮ್ಮಲ್ಲಿದ್ದು, ಪ್ರತಿ ವರ್ಷ ಕೆಲವು ಮಂದಿಯನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ರಸ್ಕೀನಾ ತಿಳಿಸಿದ್ದಾರೆ.ಇದುವರೆಗೆ ಲೋಕಾಯುಕ್ತರಾಗಿದ್ದ ಜ.ಸಂತೋಷ್ ಹೆಗ್ಡೆ, ಮಂಗಳೂರು ಬಿಷಪ್ ಅಲೋಷಿಯಸ್ ಡಿ ಸೋಜ, ಶಿಕ್ಷಣ ತಜ್ಞರಾದ ಡಾ.ಒಲಿಂಡಾ ಪಿರೇರಾ, ರೆ.ಮ್ಯಾ.ಫ್ರೆಡ್ ಪಿರೇರಾ, ವಿಲ್ಫಿ ರೆಬಿಂಬಸ್, ವಾಲ್ಟರ್ ನಂದಳಿಕೆ ಮತ್ತಿತರರಿಗೆ ಪ್ರಶಸ್ತಿ ನೀಡಲಾಗಿದೆ.
ರೆ.ಫಾ.ರೆನ್ನಿ ಪ್ರಭು, ಎಸ್.ಜೆ. ಅವರು ಬಹುಮುಖ ಪ್ರತಿಭಾವಂತರಾಗಿದ್ದು, ಆಧ್ಯಾತ್ಮ, ಶಿಕ್ಷಣ, ಸಲಹೆ, ಆಡಳಿತ, ಧಾರ್ಮಿಕ ಸೌಹಾರ್ದ, ನಾಯಕತ್ವ ತರಬೇತಿ ಇತ್ಯಾದಿ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ. ಫ್ರಭು ಅವರು ಸಂತಅಲೋಷಿಯಸ್ ಕಾಲೇಜಿನಲ್ಲಿ ಶಿಕ್ಷಣ ಪಡೆದು ಅನಂತರ 1957 ರಲ್ಲಿ ಸೊಸೈಟಿಗೆ ಆಫ್ ಜೀಸಸ್ ಗೆ ಸೇರ್ಪಡೆಗೊಂಡರು. ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಮೂಲಕ ತೇರ್ಗಡೆಯಾದ ಅವರು ಸಮಾಜದ ಸೇವೆಗಾಗಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡವರು.
ಸಚಿತಾ ನಂದಗೋಪಾಲ್ ಅವರು ಪತ್ರಿಕೋದ್ಯಮ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿ ಸೇವಾ ಸಂಸ್ಥೆಯೊಂದರ ಮುಖ್ಯಸ್ಥೆಯಾಗಿ ಸಮಾಜದ ಕಟ್ಟಕಡೆಯ ಜನಕ ಒಳಿತಿಗಾಗಿ ಕೆಲಸ ಮಾಡುತ್ತಿದ್ದಾರೆ. ಸಿಐಎಲ್ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿರುವ ಸಚಿತಾ ಅವರು ಬೆಸೆಂಟ್ ಮಹಿಳಾ ಕಾಲೇಜು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆಯಾಗಿ ಮತ್ತು ಬೆಂಗಳೂರು ಸಿಎಂಆರ್ ಸಂಸ್ಥೆಯ ಮಾಧ್ಯಮ ಅಧ್ಯಯನ ಸ್ನಾತಕೋತ್ತರ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುವ ಮೂಲಕ ಯುವಜನಾಂಗದ ಮಾರ್ಗದರ್ಶಕಿಯಾಗಿ ದುಡಿದಿದ್ದಾರೆ.
ಜೋ ಗೋನ್ಸಾಲಿಸ್ 1922 ಜನವರಿ 1ರಂದು ಹುಟ್ಟಿದವರಾಗಿದ್ದು, ಮುಂಬಯಿ, ದೆಹಲಿ,ಕೊಲ್ಕಾತ್ತಾ, ಚೆನ್ನೈ ಮುಂತಾದ ಮಹಾನಗರಗಳಲ್ಲಿ ವ್ಯವಸ್ಥಾಪಕರಾಗಿ ಪ್ರತಿಷ್ಠಿತ ಕಂಪೆನಿಗಳಿಗಾಗಿ ದುಡಿದು ಅಪಾರ ಅನುಭವ ಹೊಂದಿದವರು.1983 ರ ಅನಂತರ ಅವರು ಸಮಾಜ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿ ಕೊಂಡಿದ್ದಾರೆ. ಹಲವು ಸಂಘ ಸಂಸ್ಥೆಗಳಿಗೆ ತಮ್ಮ ಆಡಳಿತ ಅನುಭವವನ್ನು ಧಾರೆ ಎರೆದು ಪೋಷಿಸಿದ ಅವರು ಸಂಕಷ್ಟ ಎದುರಿಸುತ್ತಿದ್ದ ಹಲವಾರು ಮಂದಿಗೆ ಸಾಂತ್ವನ ನೀಡುವ ಮೂಲಕ ಬದುಕಿನ ದಾರಿ ತೋರಿಸಿದ್ದಾರೆ.