ಮುಲ್ಕಿ, ಆ.8: ಕಟೀಲಿನಿಂದ ಕಿನ್ನಿಗೋಳಿ ಮಾರ್ಗವಾಗಿ ಸಂಚಾರಿಸುತ್ತಿದ್ದ ಬಸ್ಸಿನಲ್ಲಿ ಮಹಿಳೆಯೋರ್ವಳು ಮಗುವಿನ ಸರ ಕದಿಯಲು ಯತ್ನಿಸಿದ ಘಟನೆ ನಡೆದಿದ್ದು, ಆರೋಪಿ ಮಹಿಳೆಯನ್ನು ಪ್ರಯಾಣಿಕರು ಹಿಡಿದು ಮುಲ್ಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸುರತ್ಕಲ್ ನಿವಾಸಿ ಚಿತ್ರಾ ತನ್ನ ಮಗಳು ಧಾತ್ರಿ ಹಾಗೂ ಮನೆ ಮಂದಿಯೊಂದಿಗೆ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ಕಿನ್ನಿಗೋಳಿ ಮಾರ್ಗವಾಗಿ ಮಂಗಳೂರಿಗೆ ಸಂಚರಿಸುವ ಸರ್ವಾಣಿ ಬಸ್‍ನಲ್ಲಿ ಹಿಂದಿರುಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.
ಅದೇ ಬಸ್ಸಿನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಪ್ರಯಾಣಿಸುತ್ತಿದ್ದ ತಮಿಳುನಾಡು ಮೂಲದ ಮಹಿಳೆಯೊಬ್ಬಳು ಮಗುವಿನ ಕುತ್ತಿಗೆಗೆ ಕೈಹಾಕಿ ಸರ ಎಳೆಯುತ್ತಿದ್ದುದನ್ನು ಪಕ್ಕದಲ್ಲಿದ್ದ ಕುಟುಂಬಸ್ಥರೊಬ್ಬರು ಗಮನಿಸಿ ಬಸ್ ನಿರ್ವಾಹಕನ ಗಮನಕ್ಕೆ ತಂದಿದ್ದಾರೆ.
ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ಮಹಿಳೆಯನ್ನು ಬಸ್ ನಿಂದ ಕೆಳಗಿಳಿಸಿ ಮುಲ್ಕಿ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಮುಲ್ಕಿ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

