ಕನ್ನಡ ವಾರ್ತೆಗಳು

ಕೇಂದ್ರ ಸರ್ಕಾರದ ರೈತ ವಿರೋದಿ ಕ್ರಮ ವಿರೋಧಿಸಿ ರೈತರಿಂದ ಬೃಹತ್ ಜಾಥಾ – ಪ್ರತಿಭಟನೆ

Pinterest LinkedIn Tumblr

Farmar_protest_1

ಮಂಗಳೂರು,ಆಗಸ್ಟ್. 04: ಕೇಂದ್ರ ಭೂಸ್ವಾಧೀನ ಸುಗ್ರೀವಾಜ್ಞೆ, ಕುಮಾರ ಧಾರಾ ಕಿರು ಜಲ ವಿದ್ಯುತ್ ಯೋಜನೆ, ತುಂಬೆ ಅಣೆಕಟ್ಟು ಮತ್ತು ರೈತರ ಸಾಲ ವಸೂಲಾತಿ ದಾವೆ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದ.ಕ.ಜಿಲ್ಲಾ ಸಮಿತಿ ನೇತ್ರತ್ವದಲ್ಲಿ ಮಂಗಳವಾರ ರೈತರ ಬೃಹತ್ ಜಾಥಾ ಮತ್ತು ಡಿಸಿ ಕಚೇರಿಗೆ ಮುತ್ತಿಗೆ ಚಳವಳಿ ನಡೆಯಿತು.

Farmar_protest_2 Farmar_protest_3 Farmar_protest_4 Farmar_protest_5 Farmar_protest_6 Farmar_protest_7a Farmar_protest_9 Farmar_protest_10 Farmar_protest_11 Farmar_protest_8

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು, ರಾಜ್ಯದಲ್ಲಿ ರೈತರಿಗೆ ಭದ್ರತೆ ನೀಡುವ ಕೆಲಸ ಆಗಬೇಕು. ರೈತರಿಗೆ ಪುಕ್ಕಟೆ ಅಕ್ಕಿ ನೀಡುವ ಬದಲು ಜೀವನಾಂಶ, ಆರ್ಥಿಕ ಚೈತನ್ಯ ವನ್ನು ನೀಡಬೇಕು. ರೈತರ ಆತ್ಮಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಶ್ವತ ಪರಿಹಾರವನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ರೈತರಿಗೆ ಮರುಚೈತನ್ಯ ನೀಡುವ ನಿಟ್ಟಿನಲ್ಲಿ ಸರಕಾರ ಅವರನ್ನು ಸಾಲಮುಕ್ತರನ್ನಾಗಿಸಬೇಕು. ರೈತರಿಗೆ ಮತ್ತೆ ಬಡ್ಡಿರಹಿತ ಸಾಲ ನೀಡಿ ಅವರಲ್ಲಿ ಆರ್ಥಿಕ ಚೈತನ್ಯ ಮೂಡಿಸಬೇಕು ಎಂದವರು ಆಗ್ರಹಿಸಿದರು. ಖಾಸಗಿ ಬಡ್ಡಿ ವ್ಯವಹಾರ ನಡೆಸುತ್ತಿರುವವರಿಂದ ರೈತ ಸಮುದಾಯ ನಲುಗುತ್ತಿದೆ. ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಖಾಸಗಿ ಬಡ್ಡಿ ವ್ಯವಹಾರ ನಿಯಂತ್ರಣ ಕಾಯ್ದೆಗಳನ್ನು ಜಾರಿಗೆ ತಂದಿದ್ದರು. ಈಗಿರುವ ಕಾಯ್ದೆಗಳಿಗೆ ಬಲ ತುಂಬುವ ಮತ್ತು ಹೊಸ ಕಾಯ್ದೆಗಳನ್ನು ಜಾರಿಗೆ ತರುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಮಾಡಬೇಕು ಎಂದು ಕೋಡಿಹಳ್ಳಿ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಮಾತನಾಡಿ, ಜಿಲ್ಲೆಯಲ್ಲಿ ಅಣೆಕಟ್ಟುಗಳನ್ನು ಎತ್ತರ ಮಾಡುವ ಯೋಜನೆಗಳನ್ನು ಜಾರಿಗೆ ತರುವ ಮೂಲಕ, ಅಣೆಕಟ್ಟಿನ ಜಲಾನಯನ ಪ್ರದೇಶದ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಕೃಷಿ ಸಚಿವರು ರೈತರ ಆತ್ಮಹತ್ಯೆಗೆ ಪ್ರೇಮ ಪ್ರಕರಣಗಳು ಕಾರಣ ಎಂದು ಹೇಳುವ ಮೂಲಕ ತಮ್ಮ ಮೂರ್ಖತನವನ್ನು ಪ್ರದರ್ಶಿಸಿದ್ದಾರೆ. ಕೇಂದ್ರ ಸಚಿವರ ಹೇಳಿಕೆ ರೈತರನ್ನು ಅವಮಾನ ಮಾಡುವಂತಹದ್ದಾಗಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಸ್.ಪಿ.ಚೆಂಗಪ್ಪಮಾತನಾಡಿ, ಮೊದಲು ರೈತರಿಗೆ ಜಯಕಾರ ಹಾಕುತ್ತಿದ್ದ ಸರಕಾಗಳು ಇಂದು ಬಂಡ ವಾಳಶಾಹಿಗಳಿಗೆ ಜಯಕಾರ ಹಾಕುತ್ತಿರುವುದು ವಿಷಾದನೀಯ ಎಂದರು. ಪ್ರತಿಭಟನೆಗೂ ಮುನ್ನ ರೈತರು ನಗರದ ಅಂಬೇಡ್ಕರ್ ವೃತ್ತದಿಂದ (ಜ್ಯೋತಿ) ಜಿಲ್ಲಾಧಿಕಾರಿ ಕಚೇರಿಯವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಸೇರಿದ ಪ್ರತಿಭಟನಕಾರರು ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಶ್ರೀಧರ ಶೆಟ್ಟಿ, ಗೌರವ ಸಲಹೆಗಾರ ಮುರುವ ಮಹಾಬಲ ಭಟ್, ಜಿಲ್ಲಾ ಸಮಿತಿಯ ಜತೆ ಕಾರ್ಯದರ್ಶಿ ರಾಘವ ಪೂಜಾರಿ ಹಿತ್ತಿಲು, ತುಂಬೆ ಸಂತ್ರಸ್ತ ರೈತರ ಹೋರಾಟ ಸಮಿಯ ಕಾರ್ಯದರ್ಶಿ ಎನ್.ಕೆ.ಇದಿನಬ್ಬ ಮೊದಲಾದವರು ಉಪಸ್ಥಿತರಿದ್ದರು.

ವಸೂಲಾತಿಗೆ ಬರುವ ಅಧಿಕಾರಿಗಳನ್ನು ಕಟ್ಟಿ ಹಾಕಿ

ಕೃಷಿಗಾಗಿ ಅಲ್ಪಸ್ವಲ್ಪಸಾಲ ಮಾಡಿದ ರೈತರ ಮನೆಗೆ ಸಾಲ ವಸೂಲಾತಿಗೆ ಬರುವ ಬ್ಯಾಂಕ್ ಅಧಿಕಾರಿಗಳನ್ನು ಕಟ್ಟಿ ಹಾಕಿ ಎಂದು ಕೋಡಿಹಳ್ಳಿ ಚಂದ್ರಶೇಖರ್ ರೈತರಿಗೆ ಕರೆ ನೀಡಿದರು.

ಉದ್ಯಮಿ ವಿಜಯ್ ಮಲ್ಯರಂತಹವರು 4 ಸಾವಿರ ಕೋ.ರೂ.ಸಾಲ ಪಡೆದು ಸುಸ್ತಿ ದಾರರಾಗಿದ್ದಾರೆ. ಅಂಥವರ ಮೇಲೆ ಕ್ರಮ ಕೈಗೊಳ್ಳದ ಅಧಿಕಾರಿಗಳು ಅಲ್ಪ ಮೊತ್ತದ ಸಾಲ ಪಡೆಯುವ ರೈತರಿಗೆ ಕಿರುಕುಳ ನೀಡುತ್ತಾರೆ. ಇದರಿಂದ ಭಯಗೊಂಡು ರೈತರು ಆತ್ಮಹತ್ಯೆಯ ಹಾದಿಯನ್ನು ತುಳಿಯುತ್ತಿದ್ದಾರೆ ಎಂದವರು ವಿಷಾದಿಸಿದರು.

Write A Comment