ಉಡುಪಿ: ಹೊಟ್ಟೆ ಪಾಡಿಗೆ ಊರೂರು ಅಲೆಯುವ ಪೋಷಕರು, ತಮಗೂ ಬದುಕುವ ಹಕ್ಕಿದೆ ಎಂದು ಅರಿಯದ ಮಕ್ಕಳು. ವಲಸೆ ಕಾರ್ಮಿಕರ ಮಕ್ಕಳೆಂದರೆ ಮೂಗು ಮುರಿಯೋರೇ ಹೆಚ್ಚು. ಆದರೆ ವಿದೇಶದಿಂದ ಬಂದ ತರುಣಿಯರಿಬ್ಬರು ಬೀದಿ ಮಕ್ಕಳ ಕಾಳಜಿ ಮಾಡುತ್ತಾ, ಅವರಿಗೆ ಜೀವನ ಪಾಠ ಕಲಿಸುತ್ತಾ, ತಮ್ಮ ಭಾರತದ ಬೇಟಿಯನ್ನು ಸಾರ್ಥಕಗೊಳಿಸಿದ್ದಾರೆ. ಈ ಬಗ್ಗೆ ಒಂದು ಒಳ್ಳೆ ಸುದ್ದಿ ಇಲ್ಲಿದೆ ನೋಡಿ.
ಪ್ರೀತಿಗೆ ಬಣ್ಣ, ಭಾಷೆ, ದೇಶದ ಹಂಗಿಲ್ಲ ಅಂತಾರೆ, ಈ ದೃಶ್ಯ ನೋಡಿ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಅಂತ ಬಂದಿರುವ ಆಂಧ್ರಪ್ರದೇಶ ಮೂಲದ ಕಾರ್ಮಿಕರ ಮಕ್ಕಳು ಇವರು. ಮಕ್ಕಳನ್ನು ಈ ಪರಿಯಾಗಿ ಮುದ್ದು ಮಾಡುತ್ತಿರುವ ಹುಡುಗಿಯರಲ್ಲಿ ಈಂಗಾ ಎಂಬ ಒಬ್ಬಾಕೆ ಜರ್ಮಿನ್ ದೇಶದವಳಾದರೆ, ಇನ್ನೊಬ್ಬಳು ಅಂಜಲಾ ಎನ್ನುವಾಕೆ ಸ್ಪೈನ್ ನಿಂದ ಬಂದವಳು. ಹೊಟ್ಟೆ ಪಾಡಿನ ಉದ್ಯೋಗದ ನಡುವೆ ಹೆತ್ತವರಿಂದಲೇ ಉಪೇಕ್ಷೆ ಒಳಗಾಗಿ ಬೀದಿ ಮಕ್ಕಳಾಗಿಯೇ ಬೆಳೆಯುತ್ತಾರೆ. ಇಂತಹಾ ಮಕ್ಕಳ ಜೀವನದಲ್ಲಿ ಏನಾದರೂ ಪರಿವರ್ತನೆ ಮಾಡುವ ಉದ್ದೇಶದಿಂದ ಈ ತರುಣಿಯರು ಭಾರತ ದೇಶಕ್ಕೆ ಬಂದಿದ್ದಾರೆ. ಪ್ರತಿದಿನವೂ ಜೋಪಡಿಗಳಿಗೆ ತೆರಳಿ, ಮಕ್ಕಳಿಗೆ ಸ್ವಚ್ಛತೆ ಮತ್ತು ಶಿಕ್ಷಣದ ಪಾಠ ಹೇಳುತ್ತಾರೆ.
ಕುಂದಾಪುರದಲ್ಲಿ ಕಾರ್ಯಾಚರಸುತ್ತಿರುವ ಇಂಟರ್ ಕಲ್ಚರ್ ಲರ್ನಿಂಗ್ ಎಂಬ ಎನ್ ಜಿ ಒ ಕಳೆದ 10 ವರ್ಷಗಳಿಂದ ಸದ್ದಿಲ್ಲದೆ ಬೀದಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಕಾಯಕದಲ್ಲಿ ನಿರತವಾಗಿದೆ. ಸಂಸ್ಥೆಯ ಆಶ್ರಯದಲ್ಲಿ ಈ ವಿದೇಶಿ ಪ್ರಜೆಗಳು ಯಡ್ತಾಡಿಯಲ್ಲಿ ಟೆಂಟ್ ಶಾಲೆ ಆರಂಭಿಸಿದ್ದಾರೆ. ಪೋಷಕರ ಮನವೊಲಿಸಿ ಈ ಮಕ್ಕಳಿಗೆ ವಿದ್ಯಾಭ್ಯಾಸ ನೀಡೋದು ಸುಲಭದ ಮಾತಲ್ಲ. ಈ ವಿದೇಶಿ ಹುಡುಗಿಯರು ಅತ್ಯಂತ ಪ್ರೀತಿಯಿಂದ ಮಕ್ಕಳ ಕಾಳಜಿ ಮಾಡುತ್ತಾರೆ. ಜೋಪಡಿ ಆವರಣದಲ್ಲೇ ಟೆಂಟ್ ಕಟ್ಟಿ ಆಟ, ಪಾಠ ಕಲಿಸುತ್ತಾರೆ. ದೈಹಿಕ ಸ್ವಚ್ಛತೆಯ ಜೊತೆಗೆ ಬೌದ್ಧಿಕ ಕಸರತ್ತುಗಳನ್ನು ಮಾಡಿಸುತ್ತಾರೆ. ವರ್ಷದ ನಾಲ್ಕಾರು ತಿಂಗಳ ಕಾಲ ಇಲ್ಲಿಯೇ ಇದ್ದು ಮಕ್ಕಳಿಗೆ ಜೀವನ ಪಾಠ ಕಲಿಸುತ್ತಾರೆ.
ಇಲ್ಲಿ ಕಳೆದ 4 ವರ್ಷದಿಂದ ಕುಂದಾಪುರ ಖಾರ್ವಿಕೇರಿಯ ಶಾಲಿನಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪ್ರಕಾರ, ಇಲ್ಲಿ ಕನ್ನಡ ತಿಳಿದಿರುವ ಮಕ್ಕಳು ಇಲ್ಲ. ಹಿಂದಿ , ತೆಲುಗು ಭಾಷೆ ಮಾತ್ರ ಈ ಮಕ್ಕಳಿಗೆ ಗೊತ್ತು. ಹಾಗಾಗಿ ಸಂವಹನ ಸ್ವಲ್ಪ ಕಷ್ಟವಾದರೂ ನಾವು ಅದಕ್ಕೆ ಹೊಂದಿಕೊಂಡು, ಇಂಗ್ಲಿಷ್ನಲ್ಲಿ ಹೆಚ್ಚು ತಿಳುವಳಿಕೆ ನೀಡಲು ಪ್ರಯತ್ನಿಸುತ್ತಿದ್ದೇವೆ. ಚಿತ್ರ ಬಿಡಿಸುವುದು, ಬರವಣಿಗೆಯ ಜೊತೆಯಲ್ಲಿ ಸ್ವಚ್ಛತೆಯ ಬಗ್ಗೂ ತಿಳಿಸಲಾಗುತ್ತಿದೆ. ಮುರ್ಡೆಶ್ವರ, ಮಂಗಳೂರು ಮೊದಲಾದ ಹೊರ ಪ್ರದೇಶಗಳಿಗೂ ಕರೆದುಕೊಂಡು ಹೋಗಲಾಗುತ್ತದೆ. ವೈದ್ಯಕೀಯ ತಪಾಸಣೆ ನಡೆಸಿ, ಪೋಷಕರಿಗೂ ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ ಎನ್ನುತ್ತಾರೆ ಶಾಲಿನಿ.
ಇವರೆಲ್ಲಾ ತೆಲುಗು ಮಾತನಾಡುವ ಮಕ್ಕಳು, ಇಲ್ಲಿನ ಶಾಲೆಗಳಿಗೆ ಇವರನ್ನು ಸೇರಿಸೋಕೆ ಸಾಧ್ಯವಿಲ್ಲ. ಭಾಷೆಗಿಂತಲೂ ಪ್ರೀತಿ ಮುಖ್ಯ ಅನ್ನೋ ನೆಲೆಯಲ್ಲಿ ಕಾರ್ಯಾಚರಿಸುತ್ತಿರುವ ಈ ಹುಡುಗಿಯರು ನಿಜಕ್ಕೂ ಈ ಮಕ್ಕಳ ಜೀವನದಲ್ಲಿ ಮಹತ್ವದ ಬದಲಾವಣೆ ತರಬಲ್ಲರು.
ವರದಿ- ಯೋಗೀಶ್ ಕುಂಭಾಸಿ