ಕುಂದಾಪುರ: ಇಂದು ಪಾಶ್ಚಾತ್ಯ ಸಂಸ್ಕ್ರತಿಗೆ ಮಾರುಹೋಗಿ ಹಳೆ ಕಾಲದ ಗ್ರಾಮೀಣ ಭಾಗದಲ್ಲಿನ ವಸ್ತುಗಳು ಮನೆಯಲ್ಲಿ ಮಾಯವಾಗಿದೆ. ಪುರಾತನ ವಸ್ತುಗಳ ಹೆಸರು ತಿಳಿದಿಲ್ಲ, ನೋಡಲಂತೂ ಕಾಣ ಸಿಗದ ಪರಿಸ್ಥಿತಿ ಬಂದಿದೆ. ಯುವ ಜನಾಂಗಕ್ಕಂತೂ ಪ್ರಾಚೀನ ವಸ್ತುಗಳು ಚಿತ್ರಪಟದಲ್ಲಿ ನೋಡಲು ಸಿಗುವಂತಾಗಿರುವ ಕಾಲಘಟ್ಟದಲ್ಲಿ ಇಲ್ಲೊಬ್ಬರು ಶಿಕ್ಷಕರು ಪುರಾತನ ವಸ್ತುಗಳ ಸಂರಕ್ಷಣೆಯಲ್ಲಿ ತಮ್ಮನ್ನು ತಾವೂ ತೊಡಗಿಸಿಕೊಂಡಿದ್ದಾರೆ. ಇವರ ಬಳಿ ಬರೋಬ್ಬರಿ 300 ಕ್ಕೂ ಅಧಿಕ ವಿಭಿನ್ನ, ವಿಶಿಷ್ಟ, ಪುರಾತನ ಸಾಮಾಗ್ರಿಗಳು ಇದೆ.
ಇವರೇ ಶ್ರೀನಿವಾಸ ಸೂರ್ಗೋಳಿ. ವೃತ್ತಿಯಲ್ಲಿ ಸಹಶಿಕ್ಷಕರಾಗಿರುವ ಇವರು ಸೂರ್ಗೋಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಶಿಕ್ಷಕರು.
ಏನೇನು ಪರಿಕರಗಳು: ಕೃಷಿಗೆ ಉಪಯೋಗಿಸುವ ಪರಿಕರಗಳು, ಮೀನು ಹಿಡಿಯಲು ಉಪಯೋಗಿಸುವ ವಸ್ತುಗಳು, ವಿವಿಧ ಬಗೆಯ ಚಾಪೆಗಳು, ಬುಟ್ಟಿಗಳು ಚರಕ, ಗಡಿಯಾರ, ಅಡುಗೆಗಾಗಿ ಬಳಸುವ ವಸ್ತುಗಳು , ಮಣ್ಣಿನ ಪಾತ್ರೆಗಳು, ಫೋನು, ಹಳೆಕಾಲದ ರೆಡಿಯೋ, ಲ್ಯಾಟಿನುಗಳು ಹೀಗೆ 300ಕ್ಕೂ ಹೆಚ್ಚು ಪರಿಕರಗಳು ಮೈ ರೋಮಾಂಚನ ಗೊಳಿಸುತ್ತದೆ
ತನ್ನ ಅಜ್ಜಿಯ ಪ್ರೇರಣೆ ಹಾಗೂ ಸ್ಪೂರ್ತಿಯಿಂದ ಈ ರೀತಿಯಾಗಿ ಪುರಾತನ ವಸ್ತುಗಳ ಸಂಗ್ರಹಣೆಯ ಆಸಕ್ತಿಯನ್ನು ಬೆಳೆಸಿಕೊಂಡ ಇವರು ಕಳೆದ ೨ ವರ್ಷಗಳ ಹಿಂದೆ ತಮ್ಮ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವದ ಸಂದರ್ಭ ಅದನ್ನು ಪ್ರದರ್ಶನಕಿಡುವ ಮೂಲಕ ಜನರು ಅವುಗಳನ್ನು ನೋಡಿ ಅದರ ಬಗ್ಗೆ ತಿಳಿದುಕೊಳ್ಳುವಂತೆ ಮಾಡಿದರು. ಅಲ್ಲಿನಿಂದ ಇವರು ಸಂಗ್ರಹಿಸಿದ ಗ್ರಾಮೀಣ ಭಾಗದ ಪರಿಕರಗಳನ್ನು ಕುಂದಾಪುರ ತಾಲೂಕಿನ ಹಲವೆಡೆ ನಡೆಯುವ ಕಾರ್ಯಕ್ರಮಗಳಲ್ಲಿ ಪ್ರದರ್ಶನಕ್ಕಿಟ್ಟು ಜನರಿಗೆ ಅವುಗಳ ಬಗ್ಗೆ ತಿಳಿಸುವ ಕಾರ್ಯ ಮಾಡಿಕೊಂಡು ಬಂದಿದ್ದಾರೆ.
ಹಲವೆಡೆ ನಡೆಯುವ ಈ ಪ್ರದರ್ಶನ ಕಾರ್ಯಕ್ರಮದಲ್ಲಿ ಕಂಡು ಕೇಳರಿಯದ ನೂರಾರು ಪರಿಕರಗಳನ್ನು ಹತ್ತಿರದಿಂದ ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡು ಆಶ್ಚರ್ಯ ಪಡುತ್ತಾರೆ ಜನರು. ಹಾಗೆಯೇ ಇವರ ಈ ಸಂಗ್ರಹಣೆಗೆ ಉತ್ತಮ ರೆಸ್ಫಾನ್ಸ್ ಕೂಡ ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿದೆ.
ಇನ್ನು ಇವರ ಕಾರ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಲವರು ತಮ್ಮ ಬಳಿಯಿರುವ ಪ್ರಾಚೀನ ವಸುಗಳನ್ನು ಶ್ರೀನಿವಾಸ ಮಾಸ್ಟರಿಗೆ ನೀಡುವ ಮೂಲಕ ಇವರ ಬತ್ತಳಿಕೆಯಲ್ಲಿ ವಸ್ತುಗಳ ಸಂಖ್ಯೆಯೂ ಜಾಸ್ಥಿಯಾಗುತ್ತಿದೆ. ಮನೆಯಲ್ಲೂ ಕೂಡ ಇವರ ಕಾರ್ಯಕ್ಕೆ ಉತ್ತಮವಾಗಿ ಸ್ಪಂದಿಸುತ್ತಾರಂತೆ. ಇನ್ನು ಗ್ರಾಮೀಣ ಭಾಗದ ಪುರಾತನ ವಸ್ತುಗಳ ಬಗ್ಗೆ ಹಿರಿಯರಿಂದ ಮಾಹಿತಿ ಪಡೆದು ಅದನ್ನು ಅಧ್ಯಯನ ನಡೆಸುವ ಮೂಲಕ ಪ್ರದರ್ಶನದ ಸಮಯದಲ್ಲಿ ಆಗಮಿಸುವ ವೀಕ್ಷಕರಿಗೂ ವಸ್ತುಗಳ ಬಗ್ಗೆ ಮಾಹಿತಿಯನ್ನು ತಾವೇ ನೀಡುತ್ತಾರೆ ಶ್ರೀನಿವಾಸ ಮಾಸ್ಟರ್.
ಗ್ರಾಮೀಣ ಸಂಸ್ಕ್ರತಿಯನ್ನು ಯುವಜನಾಂಗಕ್ಕೆ ಮತ್ತು ಮುಂದಿನ ತಲೆಮಾರಿಗೆ ಪರಿಚಯಿಸಬೇಕು ಹಾಗೂ ಆ ವಸ್ತುಗಳು ನಶಿಸಬಾರದು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ಕೆ ಕೈಹಾಕಿದ್ದು ಇನ್ನು ಕೂಡ ಹೆಚ್ಚು ವಸ್ತುಗಳ ಸಂಗ್ರಹಣೆಯನ್ನು ಮಾಡುವ ಬಯಕೆಯಿದೆ ಎನ್ನುತ್ತಾರೆ ಶ್ರೀನಿವಾಸ ಸುರ್ಗೋಳಿ. ವಿವಾಹಿತರಾಗಿರುವ ಶ್ರೀನಿವಾಸ ಅವರಿಗೆ ಓರ್ವ ಮಗನಿದ್ದು ಈ ವಸ್ತು ಸಂಗ್ರಹಣೆ ಹಾಗೂ ಗ್ರಾಮೀಣ ಪರಿಕರಗಳ ಬಗ್ಗೆ ಟಚ್ ಕೊಡುವ ಕಾರ್ಯವನ್ನು ಇವರು ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ನಮ್ಮ ಪೂರ್ವಿಕರು ಉಪಯೋಗಿಸುತ್ತಿದ್ದ ಆದರೇ ಪ್ರಸ್ತುತ ಕಾಲಘಟ್ಟದಲ್ಲಿ ನಶಿಸುತ್ತಿರುವ , ಕಾಣಲು ಸಿಗದ ಪರಿಕರ ಸಂಗ್ರಹಣೆ ಮತ್ತು ಅದರ ಮಾಹಿತಿಯನ್ನು ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿರುವ ಶಿಕ್ಷಕರಾದ ಶ್ರೀನಿವಾಸ ಸುರ್ಗೋಳಿಯವರ ಶ್ರಮ ನಿಜಕ್ಕೂ ಶ್ಲಾಘನೀಯವಾಗಿದೆ.
ವರದಿ- ಯೋಗೀಶ್ ಕುಂಭಾಸಿ