ಕನ್ನಡ ವಾರ್ತೆಗಳು

ವಸತಿ ಯೋಜನೆ ಷರತ್ತು ಉಲ್ಲಂಘಿಸಿರುವ ಪ್ರಕರಣಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಮಂಜೂರಾತಿ ಆದೇಶ ರದ್ದು : ಕೆಡಿಪಿ ಸಭೆಯಲ್ಲಿ ತೀರ್ಮಾನ.

Pinterest LinkedIn Tumblr

Zp_kalama_tribut_3

ಮಂಗಳೂರು, ಜುಲೈ. 29: ದ.ಕ. ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ವಸತಿ ಯೋಜನೆಯಡಿ ಜಮೀನು ಪಡೆದು ಆ ಜಮೀನಿನಲ್ಲಿ ವಾಸ್ತವ್ಯ ಹೊಂದಿರದೆ, ಯೋಜನೆಯ ಷರತ್ತು ಉಲ್ಲಂಘಿಸಿರುವ ಪ್ರಕರಣಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಮಂಜೂರಾತಿ ಆದೇಶವನ್ನು ರದ್ದುಪಡಿಸಲು ದ.ಕ. ಜಿಲ್ಲಾ ಪಂಚಾಯತ್‌ನ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ(ಕೆಡಿಪಿ)ಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆ ಹಾಗೂ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಉಪಸ್ಥಿತಿಯಲ್ಲಿ ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಈ ನಿರ್ಣಯ ಮಾಡಲಾಗಿದೆ.

ವಸತಿ ಯೋಜನೆಯಡಿ ನಿಗದಿತ ಅವಧಿಯಲ್ಲಿ ಮನೆ ಕಟ್ಟಿ ವಾಸ್ತವ್ಯ ಹೂಡುವಲ್ಲಿ ವಿಫಲವಾಗಿರುವ ಅಥವಾ ಬೇರೆಯವರಿಗೆ ಮಾರಾಟ ಮಾಡಿರುವ ಪ್ರಕರಣಗಳಿಗೆ ಸಂಬಂಧಿಸಿ ನೋಟಿಸ್ ನೀಡಿ ಅವರಿಗೆ ನೀಡಲಾದ ಮಂಜೂರಾತಿ ಆದೇಶವನ್ನು ರದ್ದುಪಡಿಸತಕ್ಕದ್ದು. ಮಾತ್ರವಲ್ಲದೆ, ಪ್ರಸ್ತುತ ಆ ನಿವೇಶನದಲ್ಲಿ ವಾಸವಾಗಿರುವವರು 94 ಸಿಯಡಿ ಅರ್ಜಿ ನೀಡಿದ್ದಲ್ಲಿ ಅವರಿಗೆ ಆ ಜಮೀನಿನ ಹಕ್ಕನ್ನು ವರ್ಗಾಯಿಸುವ ಕಾರ್ಯವನ್ನು ಮಾಡುವಂತೆ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸಭೆಯಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಕಾರ್ಯ ಕೇವಲ ಆಶ್ವಾಸನೆಯಾಗಿ ಉಳಿಯದೆ, ಮುಂದಿನ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ಪ್ರಗತಿ ವರದಿಯನ್ನು ಒಪ್ಪಿಸಬೇಕು ಎಂದು ಕ್ರೀಡಾ ಸಚಿವ ಅಭಯಚಂದ್ರ ಜೈನ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

Zp_kalama_tribut_4

94 ಸಿ ಯೋಜನೆಯಡಿ ಅರ್ಜಿ ಸ್ವೀಕರಿಸುವ ದಿನಾಂಕ ವಿಸ್ತರಣೆ ಕುರಿತಂತೆ ಚರ್ಚೆಯ ಸಂದರ್ಭ, ವಸತಿ ಯೋಜನೆಯಡಿ ಮಂಜೂರಾದ ನಿವೇಶನದಲ್ಲಿ ಸಂಬಂಧಪಟ್ಟ ಫಲಾನುಭವಿ ನಿಗದಿತ ಅವಧಿಯಲ್ಲಿ ಷರತ್ತು ಪೂರೈಸದಿದ್ದಲ್ಲಿ ಯಾವ ಕ್ರಮ ಕೈಗೊಳ್ಳಬಹುದು ಎಂದು ಸಭೆಯಲ್ಲಿ ಸಚಿವ ರೈ ಅಧಿಕಾರಿಗಳನ್ನು ಪ್ರಶ್ನಿಸಿದರು. ಜಮೀನು ನೀಡಿ ನಿಗದಿತ ಅವಧಿಯಲ್ಲಿ ಮನೆ ಕಟ್ಟಬೇಕೆಂಬ ನಿಯಮವಿರುತ್ತದೆ. ಆದರೆ ಫಲಾನುಭವಿ ಷರತ್ತು ಉಲ್ಲಂಘಿಸಿದ್ದಲ್ಲಿ ನೇರವಾಗಿ ಮಂಜೂರಾತಿ ಆದೇಶ ರದ್ದುಪಡಿಸಲು ಸಾಧ್ಯವಾಗುವುದಿಲ್ಲ. ಆತ ಮತ್ತೆ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಇರುವುದರಿಂದ ನೋಟಿಸು ಜಾರಿ ಮಾಡಿ ಆದೇಶ ರದ್ದುಪಡಿಸಬಹುದು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದರು. ಯೋಜನೆಗಳಡಿ ನಿವೇಶನ ಪಡೆದುಕೊಂಡು ಸುಮಾರು 15 ವರ್ಷಗಳ ಕಾಲವೂ ಷರತ್ತು ಉಲ್ಲಂಘಿಸಿರುವವರ ವಿರುದ್ಧ ಕ್ರಮ ಅಗತ್ಯವಾಗಿದೆ. ಮಾತ್ರವಲ್ಲದೆ ಆ ಜಮೀನನ್ನು ಅರ್ಹರಿಗೆ ನೀಡುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ತುರ್ತಾಗಿ ಮಾಡಬೇಕೆಂದು ಸಚಿವ ರೈ ಅಧಿಕಾರಿಗಳಿಗೆ ಸೂಚಿಸಿದರು.

ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ: 

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ ಮತ್ತು ಅಗಲೀಕರಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಹಿರಿಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಮುಖ್ಯಮಂತ್ರಿಯನ್ನೊಳಗೊಂಡ ಉನ್ನತ ಮಟ್ಟದ ಸಭೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆಗೆ ಸಂಬಂಧಿಸಿ 84.87 ಎಕರೆ ಜಮೀನಿನ ಬಗ್ಗೆ ಕೋರಿಕೆ ಸಲ್ಲಿಸಿದ್ದು, ಒಟ್ಟು 61.47 ಎಕರೆ ಖಾಸಗಿ ಜಮೀನನ್ನು ಭೂಸ್ವಾಧೀನ ಪಡಿಸಬೇಕಾಗಿದೆ ಎಂದು ಸಭೆಯಲ್ಲಿ ವಿಷಯಕ್ಕೆ ಸಂಬಂಧಿಸಿ ಟಿಪ್ಪಣಿ ಮಂಡಿಸಲಾಯಿತು. ಆದರೆ ವಿಧಾನ ಪರಿಷತ್‌ನಲ್ಲಿ ಈ ಬಗ್ಗೆ ತಾವು ಕೇಳಿದ ಪ್ರಶ್ನೆಗೆ, ನಾವು ಜಾಗ ನೀಡುವ ಪ್ರಶ್ನೆಯೇ ಇಲ್ಲ. ಕೇಂದ್ರ ಸರಕಾರವೇ ಭೂಸ್ವಾಧೀನ ಮಾಡಬೇಕು ಎಂಬ ಉತ್ತರವನ್ನು ರಾಜ್ಯ ಸರಕಾರದ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವರು ನೀಡಿದ್ದಾರೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಗಮನ ಸೆಳೆದರು.

ಈ ಸಂದರ್ಭ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ರನ್‌ವೇಯನ್ನು 8,000 ಚದರ ಅಡಿಯಿಂದ 11,000 ಚದರ ಅಡಿಯೇ ಅಥವಾ 13,000 ಚದರ ಅಡಿಯೇ ಎಂಬ ಬಗ್ಗೆ ಪ್ರಥಮವಾಗಿ ನಿರ್ಧಾರವಾಗಬೇಕಿದೆ. 11,000 ಚದರ ಅಡಿಗೆ 60 ಎಕರೆ ಜಮೀನು ಭೂಸ್ವಾಧೀನ ಮಾಡಬೇಕಾಗುತ್ತದೆ. 13,000 ಚದರ ಅಡಿಗೆ ಸುಮಾರು 200 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಬೇಕಾಗಿದೆ ಎಂದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿಯೇ ಉನ್ನತ ಮಟ್ಟದ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಸೂಚಿಸಿದರು.

ಸಭೆಯಲ್ಲಿ ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಕಲಾ, ಶಾಸಕರಾದ ಜೆ.ಆರ್. ಲೋಬೊ, ಮೊಯ್ದಿನ್ ಬಾವ ಉಪಸ್ಥಿತರಿದ್ದರು.

Write A Comment