ಕನ್ನಡ ವಾರ್ತೆಗಳು

ಜು.25, 26 : ಪಿಲಿಕುಳದಲ್ಲಿ ‘ಸಂಗಮ-ಸಂಭ್ರಮ-2015’ / ರಾಜ್ಯಮಟ್ಟದ ಕಲಾ ಶಿಬಿರಕ್ಕೆ ಚಾಲನೆ

Pinterest LinkedIn Tumblr

pilkl_sangama_sambrma_1

ಮಂಗಳೂರು, ಜು.22: ಕರ್ನಾಟಕ ಬ್ಯಾರಿ, ಕೊಂಕಣಿ ಹಾಗೂ ತುಳು ಸಾಹಿತ್ಯ ಅಕಾಡಮಿಯ ಸಂಯುಕ್ತ ಆಶ್ರಯದಲ್ಲಿ ಜು.25, 26ರಂದು ನಡೆಯುವ ‘ಸಂಗಮ-ಸಂಭ್ರಮ-2015’ ರಾಜ್ಯ ಸಮ್ಮೇಳನದ ಪೂರ್ವಭಾವಿಯಾಗಿ ಆಯೋಜಿಸಿರುವ ಕಲಾ ಶಿಬಿರಕ್ಕೆ ಬುಧವಾರ ಚಾಲನೆ ದೊರೆಯಿತು.

ಪಿಲಿಕುಳ ನಿಸರ್ಗಧಾಮದಲ್ಲಿ ಜು.22ರಿಂದ 26ರವರೆಗೆ ನಡೆಯಲಿರುವ ರಾಜ್ಯ ಮಟ್ಟದ ಕಲಾ ಶಿಬಿರ ಸಂಗಮ ಸಂಭ್ರಮಕ್ಕೆ ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಕ್ಯಾನ್‌ವಾಸ್‌ನಲ್ಲಿ ಚಿತ್ರ ಬಿಡಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಎರಡು ಶತಮಾನಗಳಿಗೂ ದೀರ್ಘಕಾಲದ ಇತಿಹಾಸವಿರುವ ದಕ್ಷಿಣ ಕನ್ನಡ ಜಿಲ್ಲೆಯ ಸೌಹಾರ್ದ ಪರಂಪರೆಯನ್ನು ಉಳಿಸಿಕೊಳ್ಳಲು ಪೂರಕವಾದ ಧನಾತ್ಮಕ ಚಿಂತನೆಯ ಕಾರ್ಯಕ್ರಮಗಳು ಜಿಲ್ಲೆಯ ವಿವಿಧೆಡೆಗಳಲ್ಲಿ ನಡೆಯಬೇಕಾಗಿದೆ. ಇಂತಹ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ ನಿರಂತರವಾಗಿ ಸಹಕಾರ ನೀಡುತ್ತಿದೆ ಎಂದು ಹೇಳಿದರು.

pilkl_sangama_sambrma_6

pilkl_sangama_sambrma_4 pilkl_sangama_sambrma_3 pilkl_sangama_sambrma_2

ಸಂಸ್ಕೃತಿ, ಕಲೆಗಳಿಗಾಗಿ ಕರ್ನಾಟಕದಲ್ಲಿ ಗರಿಷ್ಠ ಅನುದಾನ

ರಾಜ್ಯ ಲಲಿತ ಕಲಾ ಅಕಾಡಮಿಯ ಅಧ್ಯಕ್ಷ ಎಂ.ಎಸ್.ಮೂರ್ತಿ ಮಾತನಾಡಿ, ದೇಶದಲ್ಲೇ ಸಂಸ್ಕೃತಿ, ಕಲೆಗಳಿಗಾಗಿ ಪ್ರಸಕ್ತ ಕರ್ನಾಟಕ ಸರಕಾರದಿಂದ 300 ಕೋ.ರೂ.ಗೂ ಅಧಿಕ ಅನುದಾನ ನೀಡಲಾಗುತ್ತಿದೆ. ಈ ರೀತಿ ದೇಶದ ಇತರ ರಾಜ್ಯದಲ್ಲಿ ಅನುದಾನ ನೀಡುತ್ತಿರುವ ಉದಾಹರಣೆಗಳಿಲ್ಲ. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಅಕಾಡಮಿಗಳಿಗೆ ಸಾಹಿತಿಗಳು ಕಲಾವಿದರನ್ನು ಆಯ್ಕೆ ಮಾಡಿ ನೇಮಿಸುವ ಪ್ರಕ್ರಿಯೆ ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಆದರೆ ಅಕಾಡಮಿಗಳಿಗೆ ನೇಮಕವಾದವರು ತಮ್ಮ ಜವಾಬ್ದಾರಿಯನ್ನು ಮರೆಯದೆ ಎಚ್ಚರದಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದರು.

ಕಲಾ ಶಿಬಿರದಲ್ಲಿ ರಾಜ್ಯದ ಖ್ಯಾತ ಕಲಾವಿದರಾದ ರಮೇಶ್ ರಾವ್, ಎಂ.ಎಸ್.ಪತ್ತಾರ್, ಪುರುಷೋತ್ತಮ ಅಡ್ವೆ, ಜೀವನ್ ಎ. ಸಾಲ್ಯಾನ್, ಅನಿಲ್ ದೇವಾಡಿಗ, ವಿಶ್ವಾಸ್ ಎಂ. ಕಾಸರಗೋಡು, ಸ್ವಪ್ನಾ ನರೊನ್ಹ, ಸಂತೋಷ್ ಅಂದ್ರಾದೆ, ಕಂದನ್ ಜಿ., ಹರೀಶ್ ಕೊಡಿಯಾಲ್‌ಬೈಲ್, ರಾಜೇಂದ್ರ ಕೇದಿಗೆ, ವಿಲ್ಸ್‌ನ್ ಜೆ.ಪಿ. ಡಿಸೋಜ, ಪಿ.ಎನ್.ಆಚಾರ್ಯ, ಗಣೇಶ್ ಸೋಮಯಾಜಿ, ರಮೇಶ್ ತೆರ್‌ದಾಳ್, ರವಿ ಎಂ.ಆರ್. ಸಹಿತ 16 ಕಲಾವಿ ದರು ಚಿತ್ರ ರಚಿಸಲಿದ್ದಾರೆ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಸ್ವಾಗತಿಸಿದರು. ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ ಸಂಗಮ ಸಂಭ್ರಮ ಕಾರ್ಯಕ್ರಮದ ಬಗ್ಗೆ ವಿವರಿಸಿದರು.

pilkl_sangama_sambrma_5 pilkl_sangama_sambrma_7

ಜು.25, 26ರಂದು ಕಲಾಶಿಬಿರದ ಚಿತ್ರಗಳ ಪ್ರದರ್ಶನ :

ಜು.25, 26ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೇತೃತ್ವದಲ್ಲಿ ವಿವಿಧ ಅಕಾಡಮಿ ಹಾಗೂ ಪ್ರಾಧಿಕಾರ, ಅಧ್ಯಯನ ಕೇಂದ್ರಗಳ ಸಹಯೋಗದಲ್ಲಿ ಪಿಲಿಕುಳದಲ್ಲಿ ನಡೆಯಲಿರುವ ಸಂಗಮ ಸಂಭ್ರಮ ರಾಜ್ಯ ಸಮ್ಮೇಳನದಲ್ಲಿ ಕಲಾಶಿಬಿರದ ಚಿತ್ರಗಳ ಪ್ರದರ್ಶನ ನಡೆಯಲಿದೆ.

ಕೊಂಕಣಿ, ಬ್ಯಾರಿ ಹಾಗೂ ತುಳು ಅಕಾಡಮಿಗಳ ರಿಜಿಸ್ಟ್ರಾರ್‌ಗಳಾದ ಡಾ.ಬಿ.ದೇವದಾಸ ಪೈ, ಉಮರಬ್ಬ, ಚಂದ್ರಹಾಸ ರೈ, ಪಿಲಿಕುಳ ನಿಸರ್ಗ ಧಾಮದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ವಿ.ಪ್ರಭಾಕರ್ ಶರ್ಮ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಘವೇಂದ್ರ ಆರ್.ಕೆ. ವಂದಿಸಿದರು. ಗಣೇಶ್ ಸೋಮಯಾಜಿ ಕಾರ್ಯಕ್ರಮ ನಿರೂಪಿಸಿದರು. ರೂಪಶ್ರೀ ನಾಗರಾಜ್ ಪ್ರಾರ್ಥಿಸಿದರು.

Write A Comment