ಮಂಗಳೂರು: ಮೀಡಿಯಾ ಅಲೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ ಇದರ ನೂತನ ಅಧ್ಯಕ್ಷರಾಗಿ ಫ್ಲೋರಿನ್ ರೋಚ್ ಆಯ್ಕೆಯಾಗಿದ್ದಾರೆ. ಮಾಮ್ ಕಚೇರಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮಾಮ್ ನಿಕಟಪೂರ್ವ ಅಧ್ಯಕ್ಷ ವೇಣುಶರ್ಮ ಮಾತನಾಡಿ, ಮಾಮ್ ಆರಂಭಗೊಂಡ ಕೆಲ ತಿಂಗಳಲ್ಲಿ ಅಭಿನಂದನೆಕಾರ್ಯಕ್ರಮ ಮತ್ತು ಪ್ರದೇಶಾಭಿವೃದ್ಧಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪಾತ್ರ ಕುರಿತ ವಿಚಾರಗೋಷ್ಠಿಯನ್ನು ಹಲವರ ಸಹಕಾರದಿಂದ ಯಶಸ್ವಿಯಾಗಿ ಪೂರೈಸಲಾಗಿದೆ.
ಮಾಧ್ಯಮ ವಿದ್ಯಾರ್ಥಿಗಳ ಪುರಸ್ಕಾರಕ್ಕಾಗಿ 1 ಲಕ್ಷ ರೂ. ಹಣವನ್ನು ದತ್ತಿನಿಧಿಯಾಗಿ ಇಡಲು ನಿರ್ಧರಿಸಲಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಮಾಮ್ ವತಿಯಿಂದ ರಕ್ತದಾನ ಶಿಬಿರ ಇನ್ನಿತರ ಸಮಾಜಮುಖಿ ಕಾರ್ಯಗಳನ್ನು ನಡೆಸಲಾಗುವುದೆಂದು ಮಾಹಿತಿ ನೀಡಿದರು.
ಮಾಮ್ ವಾರ್ಷಿಕ ಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಫ್ಲೋರಿನ್ ರೋಚ್, ಗೌರವಾಧ್ಯಕ್ಷರಾಗಿ ವೇಣುಶರ್ಮ, ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಮೋಹನ ತಲೆಂಗಳ, ಉಪಾಧ್ಯಕ್ಷರಾಗಿ ಡಾ.ರೊನಾಲ್ಡ್ ಅನಿಲ್ ಫೆರ್ನಾಂಡಿಸ್, ಶರತ್ ಹೆಗ್ಡೆ ಕಡ್ತಲ ಮತ್ತು ದೀಪಕ್, ಖಜಾಂಚಿಯಾಗಿ ಯೋಗೀಶ್ ಹೊಳ್ಳ, ಕಾರ್ಯದರ್ಶಿಗಳಾಗಿ ವೇಣುವಿನೋದ್ ಕೆ.ಎಸ್, ಸ್ಮಿತಾ ಶೆಣೈ, ನವೀನ್ ಅಮ್ಮೆಂಬಳ, ಕಾರ್ಯಕ್ರಮ ಸಂಘಟಕರಾಗಿ ಕೃಷ್ಣ ಕಿಶೋರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುರೇಂದ್ರ ಶೆಟ್ಟಿ, ಹರೀಶ್ ಕುಲ್ಕುಂದ, ಹರೀಶ್ ಮೋಟುಕಾನ, ಶ್ರವಣ್ ಕುಮಾರ್ ನಾಳ, ರವಿರಾಜ್ ಕಟೀಲು, ಪರಶುರಾಮ ಕಾಮತ್, ರವಿ ಪ್ರಸಾದ್ ಕಮಿಲ, ಸುರೇಶ್ ಡಿ.ಪಳ್ಳಿ, ವಿದ್ಯಾ ಇರ್ವತ್ತೂರು, ಸುಪ್ರಭಾ, ಪ್ರಶಾಂತ ರೈ, ಬಾಲಕೃಷ್ಣ ಹೊಳ್ಳ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಮಂಗಳಗಂಗೋತ್ರಿ ಹಳೆ ವಿದ್ಯಾರ್ಥಿಗಳ ಸಂಘ (ಮಾ) ಇದರ ಪ್ರತಿನಿಧಿ ಮಂಗಳೂರು ವಿವಿ ರಾಜಕೀಯ ವಿಭಾಗ ಉಪನ್ಯಾಸಕ ಡಾ.ಪಿ.ಎಲ್.ಧರ್ಮ ಪಾಲ್ಗೊಂಡು ಮಾ ಮತ್ತು ಮಾಮ್ ಸಹಯೋಗದ ಕಾರ್ಯಕ್ರಮಗಳ ಕುರಿತು ಮಾತನಾಡಿದರು. ಮಂಗಳೂರು ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಡಾ.ಜಿ.ಪಿ.ಶಿವರಾಂ ಉಪಸ್ಥಿತರಿದ್ದರು. ವೇಣು ವಿನೋದ್ ಕೆ.ಎಸ್.ವಂದಿಸಿದರು.
