ಕನ್ನಡ ವಾರ್ತೆಗಳು

ಸಾಲ ಮರುಪಾವತಿಗೆ ಕಿರುಕುಳ ನೀಡದಂತೆ ಹಣಕಾಸು ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಸೂಚನೆ

Pinterest LinkedIn Tumblr

Dc_meet_photo_1

ಮಂಗಳೂರು, ಜು.17: ದ.ಕ. ಜಿಲ್ಲೆಯಲ್ಲಿ ಇದುವರೆಗೂ ಸಾಲ ಬಾಧೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದಾಖಲಾಗಿಲ್ಲ. ಹಾಗಿದ್ದರೂ ಯಾವುದೇ ಬ್ಯಾಂಕ್‌ಗಳು, ಸಹ ಕಾರಿ ಸಂಸ್ಥೆಗಳು ಸೇರಿದಂತೆ ಹಣಕಾಸು ಸಂಸ್ಥೆಗಳು ಸಾಲ ಪಡೆದುಕೊಂಡವರಿಗೆ ಮರು ಪಾವತಿಗೆ ಕಿರುಕುಳ, ಹಿಂಸೆ, ಒತ್ತಡ ಹೇರುವುದಾಗಲಿ, ಪ್ರಕರಣಗಳನ್ನು ದಾಖಲಿಸುವುದಾಗಿ ಮಾಡಬಾರದು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಸಾಲಬಾಧೆಯಿಂದ ರೈತರ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಈ ಕುರಿತ ಪ್ರಕರಣಗಳ ಪರಿಶೀಲನೆಯ ಸಂಬಂಧ ಇಂದು ನಡೆದ ಸಭೆಯಲ್ಲಿ ಅವರು ಈ ನಿರ್ದೇಶನ ನೀಡಿದರು. ಪುತ್ತೂರು ವ್ಯಾಪ್ತಿಯಲ್ಲಿ ಇತ್ತೀಚೆಗೆ 3 ಆತ್ಮಹತ್ಯಾ ಪ್ರಕರಣ ಗಳು ದಾಖಲಾಗಿದ್ದು, ಎರಡು ಪ್ರಕರಣಗಳಲ್ಲಿ ತನಿಖೆಯ ವೇಳೆ ಅದು ಸಾಲಬಾಧೆಯಿಂದ ನಡೆದ ಆತ್ಮಹತ್ಯೆ ಅಲ್ಲ ಎಂದು ದೃಢಗೊಂಡಿದೆ.

ಜು.12ರಂದು ಉಪ್ಪಿಂಗಡಿಯಲ್ಲಿ ನಡೆದ ಆತ್ಮಹತ್ಯೆ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟು 320 ಹಣಕಾಸು ಒದಗಿಸುವ ಸಂಸ್ಥೆ ಗಳಿದ್ದು, ಇವುಗಳಲ್ಲಿ 50 ಸಂಸ್ಥೆಗಳು ಪರವಾನಿಗೆ ನವೀಕರಣ ಮಾಡಿಲ್ಲದಿರುವುದು ಗಮನಕ್ಕೆ ಬಂದಿದೆ. ಪುತ್ತೂರಿನಲ್ಲಿ 2 ಸಂಸ್ಥೆಗಳಿಗೆ ದಾಳಿ ನಡೆಸಿದಾಗ ಶೇ.18ರ ಬಡ್ಡಿದರಲ್ಲಿ ಸಾಲ ನೀಡಿರುವುದು ಪತ್ತೆಯಾಗಿದ್ದು, ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಬಿ.ಕೆ.ಸಲೀಂ ಮಾಹಿತಿ ನೀಡಿದರು.

Dc_meet_photo_2 Dc_meet_photo_3 Dc_meet_photo_4 Dc_meet_photo_5 Dc_meet_photo_6

ಜಿಲ್ಲೆಯಲ್ಲಿ ರೈತರು ಹೆಚ್ಚಾಗಿ ಸಾಲ ಪಡೆಯುತ್ತಿಲ್ಲ. ಬದಲಾಗಿ ಇಲ್ಲಿ ದಿನನಿತ್ಯದ ವ್ಯವಹಾರ ಹಾಗೂ ಮೀನುಗಾರಿಕೆಗೆ ಸಣ್ಣ ಪ್ರಮಾಣದಲ್ಲಿ ಸಾಲ ಒದಗಿಸುವುದು ಕಂಡುಬಂದಿದೆ. ಸಾಲ ನೀಡಿದ ವ್ಯಕ್ತಿಗೆ ಕಿರುಕುಳ ಅಥವಾ ಹಿಂಸೆಗೆ ಒಳಗಾಗಿ ಯಾವುದೇ ಸಾಲಗಾರ ಅಥವಾ ಆ ವ್ಯಕ್ತಿಯ ಕುಟುಂಬ ಸದಸ್ಯರು ಆತ್ಮಹತ್ಯೆ ಮಾಡಿಕೊಂಡಲ್ಲಿ ಅದು ಸಾಲ ನೀಡಿದ ವ್ಯಕ್ತಿಯೇ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಆತ್ಮಹತ್ಯೆ ಪರಿಶೀಲನಾ ಸಮಿತಿ ಅಸ್ತಿತ್ವದಲ್ಲಿದೆ ಎಂದು ಬಿ.ಕೆ.ಸಲೀಂ ತಿಳಿಸಿದರು.

ರೈತರು ಹಾಗೂ ಸಾರ್ವಜನಿಕರ ಸಹಕಾರಕ್ಕಾಗಿ 24X7 ಕಂಟ್ರೋಲ್ ರೂಂ : ಎಸ್ಪಿ

Sp_press_meet_3

ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಮುಖ್ಯಸ್ಥರ ನಿರ್ದೇಶನದ ಮೇರೆಗೆ ತಕ್ಷಣ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ದ.ಕ. ಜಿಲ್ಲೆಯಲ್ಲಿ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಸಭೆ ಕರೆದು ನಿರ್ದಿಷ್ಟ ಸೂಚನೆಗಳನ್ನು ನೀಡಲಾಗಿದೆ. ರೈತರು ಹಾಗೂ ಸಾರ್ವಜನಿಕರ ಸಹಕಾರಕ್ಕಾಗಿ 24X7 ಕಂಟ್ರೋಲ್ ರೂಂ ತೆರೆಯಲಾಗಿದ್ದು, ಹಣಕಾಸು ಸಂಸ್ಥೆಗಳಿಂದ ಸಾಲ ಮರುಪಾವತಿಗೆ ಒತ್ತಡ, ಹಿಂಸೆಯ ಕುರಿತಂತೆ ದೂ.ಸಂ. 0824- 2440284 ಅಥವಾ 2220500 ಸಂಖ್ಯೆಗೆ ಕರೆ ಮಾಡಿ ದೂರು ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಎಸ್ಪಿ ಡಾ.ಶರಣಪ್ಪಎಸ್.ಡಿ. ತಿಳಿಸಿದರು.

ಕರ್ನಾಟಕ ಲೇವಾದೇವಿ ಅಧಿನಿಯಮ ಕಲಂ 28(1)ರಡಿ ಹೊರಡಿಸಲಾದ ಅಧಿಸೂಚನೆಯಂತೆ ಭದ್ರತಾ ಸಾಲಗಳಿಗೆ ಗರಿಷ್ಠ ವಾರ್ಷಿಕ ಶೇ.14 ಹಾಗೂ ಭದ್ರತಾರಹಿತ ಸಾಲಗಳಿಗೆ ಗರಿಷ್ಠ ವಾರ್ಷಿಕ ಶೇ. 16ರಷ್ಟು ಬಡ್ಡಿಯನ್ನು ವಿಧಿಸಲು ಮಾತ್ರ ಅವಕಾಶವಿದೆ. ಮಿತಿಮೀರಿದ ಬಡ್ಡಿ ವಿಧಿಸುವಿಕೆ, ಹಿಂಸೆ, ದೌರ್ಜನ್ಯಗಳಿಗೆ ಆರು ತಿಂಗಳ ಸಜೆ ಅಥವಾ 5 ಸಾವಿರ ರೂ. ದಂಡ ಅಥವಾ ಎರಡೂ ಶಿಕ್ಷೆ ವಿಧಿಸಲು ಅವಕಾಶವಿರುತ್ತದೆ ಎಂದವರು ಸ್ಪಷ್ಟಪಡಿಸಿದರು.

Write A Comment