ಕನ್ನಡ ವಾರ್ತೆಗಳು

ಸಫಿಯಾ ಕೊಲೆ ಪ್ರಕರಣ : ಕಾಸರಗೋಡು ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ಪ್ರಕಟ – ಪ್ರಮುಖ ಅಪರಾಧಿಗೆ ಗಲ್ಲು ; ಇಬ್ಬರಿಗೆ ಮೂರು ವರ್ಷ ಕಠಿಣ ಶಿಕ್ಷೆ

Pinterest LinkedIn Tumblr

safiya_murder_case_1

ಕಾಸರಗೋಡು, ಜು.17: ಭಾರೀ ಕೋಲಾಹಲವೆ ಬ್ಬಿಸಿದ್ದ ಮಡಿಕೇರಿ ಅಯ್ಯಂಗೇರಿಯ ಬಾಲಕಿ ಸಫಿಯಾ(14) ಕೊಲೆ ಪ್ರಕರಣದ ಪ್ರಮುಖ ಅಪರಾಧಿಗೆ ಕಾಸರಗೋಡು ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪ್ರಕರಣದ ಪ್ರಮುಖ ಅಪರಾಧಿ ಕೆ.ಸಿ.ಹಂಝ (58)ನಿಗೆ ಗಲ್ಲುಶಿಕ್ಷೆ ವಿಧಿಸಿರುವ ನ್ಯಾಯಾಲಯವು ಕೃತ್ಯದಲ್ಲಿ ಭಾಗಿಯಾಗಿದ್ದ ಹಂಝನ ಪತ್ನಿ ಮೈಮೂನಾ(42)ಳಿಗೆ ಆರು ವರ್ಷ ಸಜೆ ಮತ್ತು ಐದು ಸಾವಿರ ರೂ. ದಂಡ ಹಾಗೂ ಮೈಮೂನಾಳ ಸಹೋದರ ಕುಂಬಳೆ ಆರಿಕ್ಕಾಡಿಯ ಎಂ.ಅಬ್ದುಲ್ಲಾ(58)ನಿಗೆ ಮೂರು ವರ್ಷ ಕಠಿಣ ಸಜೆ ಮತ್ತು ಐದು ಸಾವಿರ ರೂ. ದಂಡ ವಿಧಿಸಿದೆ.

ಹಂಝನಿಗೆ ಗಲ್ಲು ಶಿಕ್ಷೆ ಅಲ್ಲದೆ 10 ಲಕ್ಷ ರೂ. ದಂಡವನ್ನೂ ವಿಧಿಸಿದ್ದು, ಇದರಲ್ಲಿ ಎಂಟು ಲಕ್ಷ ರೂ.ನ್ನು ಸಫಿಯಾಳ ಕುಟುಂಬಕ್ಕೆ ನೀಡುವಂತೆ ನ್ಯಾಯಾಲಯ ಆದೇಶಿ ಸಿದೆ. ಪ್ರಕರಣದ 2ನೆ ಆರೋಪಿಯಾಗಿದ್ದ ಮೊಯ್ದು ಹಾಜಿ ಮತ್ತು ಐದನೆ ಆರೋಪಿ ಆದೂರು ಠಾಣಾ ಎಎಸ್ಸೈ ಗೋಪಾಲಕೃಷ್ಣರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

safiya_murder_case_3

ಜುಲೈ 14ರಂದು ಕೊಲೆ ಪ್ರಕರಣದ ತೀರ್ಪು ಪ್ರಕಟಿಸಿದ್ದ ನ್ಯಾಯಾಲಯ ಮೂವರು ಆರೋಪಿಗಳು ತಪ್ಪಿತಸ್ಥರೆಂದು ಘೋಷಿಸಿತ್ತು.

ಕೊಲೆ ಕೃತ್ಯ ಮತ್ತು ಕೃತ್ಯವನ್ನು ಮುಚ್ಚಿ ಹಾಕಿದ ಅಪರಾಧದಲ್ಲಿ ಮೈಮೂನಾಳಿಗೆ ತಲಾ ಮೂರು ವರ್ಷದಂತೆ ಹಾಗೂ ಅಬ್ದುಲ್ಲಾನಿಗೆ ಕೊಲೆ ಕೃತ್ಯ ಮುಚ್ಚಿ ಹಾಕಿದ್ದ ಪ್ರಕರಣಕ್ಕಾಗಿ ಮೂರು ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗಿದೆ.

ಯಾರೂ ಸಾಕ್ಷಿಗಳಿಲ್ಲದ ಈ ಪ್ರಕರಣವನ್ನು ವೈಜ್ಞಾನಿಕ ಪರೀಕ್ಷೆಯಿಂದ ಬಯಲಿಗೆ ತರಲಾಗಿತ್ತು. ಬಡ ಹಾಗೂ ಅಪ್ರಾಪ್ತ ಬಾಲಕಿಯನ್ನು ಕ್ರೂರವಾಗಿ ಕೊಲೆಗೈದ ಆರೋಪಿ ಸಮಾಜದಲ್ಲಿ ಬದುಕಿರುವುದು ಅಪಾಯಕಾರಿ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ನ್ಯಾಯಾಧೀಶ ಎಂ.ಜೆ.ಶಕ್ತಿಧರನ್ ಶಿಕ್ಷೆ ಘೋಷಿಸಿದರು.

safiya_murder_case_2

ಅಪ್ರಾಪ್ತ ಬಾಲಕಿಯರನ್ನು ಅಪಹರಿಸುವವರಿಗೆ ಈ ಶಿಕ್ಷೆ ಪಾಠವಾಗಬೇಕು ಎಂದು ತೀರ್ಪು ನೀಡುವ ಸಂದರ್ಭ ಹೇಳಿದ ನ್ಯಾಯಾಧೀಶರು, ಹೆಣ್ಣು ಮಕ್ಕಳು ನಾಪತ್ತೆಯಾಗುತ್ತಿರುವ ಘಟನೆಗಳು ಸಾಕಷ್ಟು ನಡೆಯುತ್ತಿದ್ದು, ಹಲವು ಪ್ರಕರಣಗಳು ಮುಚ್ಚಿ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ಸಫಿಯಾ ಪ್ರಕರಣವನ್ನು ಬಯಲಿಗೆ ತಂದಿರುವ ಅಪರಾಧ ಪತ್ತೆ ದಳದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಅಪರಾಧಿಯನ್ನು ಬಿಗು ಪೊಲೀಸ್ ಬಂದೋ ಬಸ್ತ್‌ನಲ್ಲಿ ಕಣ್ಣೂರು ಸೆಂಟ್ರಲ್ ಜೈಲಿಗೆ ಕೊಂಡೊಯ್ಯಲಾಯಿತು. ಉಳಿದಿಬ್ಬರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆಯನ್ನು ಆಗಸ್ಟ್ 16ರಂದು ನ್ಯಾಯಾಲಯವು ಕೈಗೆತ್ತಿಕೊಳ್ಳಲಿದೆ. ಶಿಕ್ಷೆ ಘೋಷಣೆ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.

ಮಗಳನ್ನು ಕೊಂದವರಿಗೆ ತಕ್ಕ ಶಿಕ್ಷೆ : ತಂದೆ ಹಾಗೂ ತಾಯಿ

ನ್ಯಾಯಾಲಯ ಆವರಣದಲ್ಲಿ ಸಫಿಯಾಳನ್ನು ನೆನೆದು ಕಣ್ಣೀರಿಟ್ಟ ತಾಯಿ ಆಯಿಷಾ ಹಾಗೂ ತಂದೆ ಮೊಯ್ದು, ಈ ತೀರ್ಫು ನಮ್ಮ ಮಗಳನ್ನು ಕೊಂದವರಿಗೆ ಲಭಿಸಿದ ತಕ್ಕ ಶಿಕ್ಷೆಯಾಗಿದೆ. ನಮ್ಮ ಮಗಳಿಗಾದ ಸ್ಥಿತಿ ಬೇರೆ ಯಾರಿಗೂ ಬರಬಾರದು ಎಂದು ಪ್ರತಿಕ್ರಿಯಿಸಿದರು. ತನಿಖೆ ನಡೆಸಿ ಕೃತ್ಯವನ್ನು ಬಯಲಿಗೆ ತಂದ ಪೊಲೀಸ್ ಇಲಾಖೆ ಮತ್ತು ಹೋರಾಟ ಹಾಗೂ ಇನ್ನಿತರ ರೂಪದಲ್ಲಿ ಸಹಕರಿಸಿದವರನ್ನು ಅವರು ಈ ವೇಳೆ ಸ್ಮರಿಸಿದರು.

ಬಿಸಿನೀರು ಬಿದ್ದು ಬೆಂದ ಬಾಲಕಿಯ ದೇಹವನ್ನು ಮೂರು ತುಂಡು ಮಾಡಿ ಹೂತು ಹಾಕಲಾಗಿತ್ತು :

ಎಂಟು ವರ್ಷಗಳ ಹಿಂದೆ (2006ರಲ್ಲ್ಲಿ) ಕಾಸರಗೋಡನ್ನು ಬೆಚ್ಚಿ ಬೀಳಿಸಿದ್ದ ಸಫಿಯಾ(14) ಕೊಲೆ ಪ್ರಕರಣವನ್ನು ಸುಮಾರು ಒಂದೂವರೆ ವರ್ಷಗಳ ಬಳಿಕ ಅಂದರೆ 2008ರ ಜುಲೈಯಲ್ಲಿ ಪೊಲೀಸರು ಭೇದಿಸಿದ್ದರು.

ಮಡಿಕೇರಿಯ ಭಾಗಮಂಡಲದ ಸಮೀಪದ ಅಯ್ಯಂಗೇರಿಯ ಮೊಯ್ದು ಮತ್ತು ಆಯಿಷಾ ದಂಪತಿಯ ಹಿರಿಯ ಪುತ್ರಿಯಾಗಿದ್ದ ಸಫಿಯಾಳನ್ನು 2006 ರಲ್ಲಿ ಮುಳಿಯಾರು ಮಾಸ್ತಿಕುಂಡುವಿನ ಕೆ.ಸಿ.ಹಂಝನ ಮನೆಯಲ್ಲಿ ಕೆಲಸಕ್ಕೆ ಸೇರಿಸಲಾಗಿತ್ತು. ಗುತ್ತಿಗೆದಾರನಾಗಿದ್ದ ಹಂಝ ಗೋವಾದಲ್ಲಿ ಪತ್ನಿ ಮೈಮೂನಾ ಹಾಗೂ ಮಗುವಿನೊಂದಿಗೆ ವಾಸವಿದ್ದು, ಸಫಿಯಾಳನ್ನು ಅಲ್ಲಿಗೆ ಕರೆದೊಯ್ದಿದ್ದನು.

ಈ ನಡುವೆ 2006ರ ಡಿಸೆಂಬರ್ 26ರಂದು ಹಂಝ ಕುಟುಂಬ ಸಮೇತ ಮುಳಿಯಾರಿನಲ್ಲಿರುವ ಮನೆಗೆ ಮರಳಿದ್ದ. ಸುದ್ದಿ ತಿಳಿದು ಮಡಿಕೇರಿಯಿಂದ ಸಫಿಯಾಳ ಹೆತ್ತವರು ಮಾಸ್ತಿಕುಂಡುವಿಗೆ ಆಗಮಿಸಿದಾಗ ಸಫಿಯಾ ಇಲ್ಲದಿರುವುದು ತಿಳಿದುಬಂತು. ವಿಚಾರಿಸಿದಾಗ ಆಕೆ ನಾಪತ್ತೆಯಾಗಿರುವುದಾಗಿ ಹಂಝ ಹೇಳಿದ್ದ. ಈ ಹಿನ್ನೆಲೆಯಲ್ಲಿ ಡಿ.29ರಂದು ಆದೂರು ಪೊಲೀಸ್ ಠಾಣೆಯಲ್ಲಿ ಸಫಿಯಾ ನಾಪತ್ತೆಯಾಗಿರುವುದಾಗಿ ಮೊಯ್ದು ದೂರು ನೀಡಿದ್ದರು. ದೂರು ನೀಡುವ ವೇಳೆ ಹಂಝ ಕೂಡಾ ಜೊತೆಗಿದ್ದ.

ಆದರೆ ದೂರು ನೀಡಿ ತಿಂಗಳುಗಳೇ ಕಳೆದರೂ ಪೊಲೀಸರು ಯಾವುದೇ ತನಿಖೆ ನಡೆಸದೆ ಪ್ರಕರಣ ಮುಚ್ಚಿ ಹಾಕಲುಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ನಾಗರಿಕರು ಸಫಿಯಾ ಹೋರಾಟ ಸಮಿತಿ ರಚಿಸಿ ಹೋರಾಟ ಆರಂಭಿಸಿದ್ದರು. ಸಫಿಯಾಳ ಪೋಷಕರು ಕೂಡಾ ಇದರಲ್ಲಿ ಪಾಲ್ಗೊಂಡಿದ್ದರು. 82 ದಿನಗಳ ಕಾಲ ಉಪವಾಸ ಧರಣಿ ನಡೆಸಲಾಗಿತ್ತು. ಬಳಿಕ ಒತ್ತಡಕ್ಕೆ ಮಣಿದ ಸರಕಾರ 2008ರ ಜೂನ್‌ನಲ್ಲಿ ಪ್ರಕರಣವನ್ನು ಅಪರಾಧ ಪತ್ತೆ ದಳಕ್ಕೆ ಹಸ್ತಾಂತರಿಸಿತ್ತು.

ತನಿಖೆ ಕೈಗೆತ್ತಿಕೊಂಡ ಅಪರಾಧ ಪತ್ತೆ ದಳದ ಪೊಲೀಸರು ಹಂಝ ಮತ್ತು ಮನೆಯವರನ್ನು ವಿಚಾರಣೆಗೊಳಪಡಿಸಿದಾಗ ಈ ಅಮಾನವೀಯ ಕೊಲೆ ಕೃತ್ಯ ಬಯಲಾಗಿತ್ತು.

ಗೋವಾದ ಫ್ಲಾಟ್‌ನಲ್ಲಿ ತಂಗಿದ್ದ ವೇಳೆ ಆಕಸ್ಮಿಕವಾಗಿ ಮೈಮೇಲೆ ಬಿಸಿನೀರು ಬಿದ್ದು ಗಂಭೀರ ಸುಟ್ಟ ಗಾಯಗಳಾಗಿದ್ದ ಸಫಿಯಾಳನ್ನು ಕೊಲೆಗೈದು ದೇಹವನ್ನ  ತುಂಡರಿಸಿ ಗೋವಾದ ಮುಗಿಲಿ ಎಂಬಲ್ಲಿ ಅಣೆಕಟ್ಟು ನಿರ್ಮಾಣದ ಸ್ಥಳದಲ್ಲಿ ಹೂತು ಹಾಕಿರುವುದಾಗಿ ಹಂಝ ಮತ್ತು ಇನ್ನಿಬ್ಬರು ಅಪರಾಧಿಗಳು ತಪ್ಪೊಪ್ಪಿಕೊಂಡಿದ್ದರು.

ವರದಿ ಕೃಪೆ : ವಾಭಾ

Write A Comment