ಕನ್ನಡ ವಾರ್ತೆಗಳು

ಕುಂಭದ್ರೋಣ ಮಳೆಗೆ ಕುಂದಾಪುರ ತತ್ತರ; ರಸ್ತೆ, ಮನೆಗಳು ಜಲಾವೃತ

Pinterest LinkedIn Tumblr

ಕುಂದಾಪುರ: ಮಂಗಳವಾರ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಕುಂದಾಪುರ ತಾಲೂಕಿನ ಹಲವೆಡೆ ರಸ್ತೆಗಳು, ಮನಗೆಳು ಹಾಗೂ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದೆ. ಮೀನುಗಾರಿಕಾ ಬಂದರು ಪ್ರದೇಶವಾಗಿರುವ ಗಂಗೊಳ್ಳಿ ತತ್ತರಿಸಿ ಹೋಗಿದ್ದು ಹಲವೆಡೆ ಮಳೆಯಿಂದ ಬಾರೀ ಸಮಸ್ಯೆಯಾಗಿದೆ.

ಕುಂದಾಪುರ ತಾಲೂಕಿನಲ್ಲಿ ಹೆದ್ದಾರಿ ಚತುಷ್ಪತ ಕಾಮಗಾರಿ ನಡೆಯುತ್ತಿರುವ ಬೆನ್ನಲ್ಲೇ ಚರಂಡಿ ಸಮಸ್ಯೆಯಿಂದಾಗಿ ನೀರು ಹರಿಯಲು ಸ್ಥಳವಾಕಾಶ ಕೊರತೆಯಿಂದಾಗಿ ಹಲವಡೆ ಕೃತಕ ನೆರೆ ಸೃಷ್ಟಿಯಾಗಿತ್ತು. ಕುಂದಾಪುರದ ಶಾಸ್ತ್ರೀ ವೃತ್ತದ ಸಮೀಪ ಹಲವು ಮೀಟರು ದೂರ ಮಲೇ ನೀರು ನಿಂತು ವಾಹನ ಸವಾರರು ಹಾಗೂ ಪಾದಾಚಾರಿಗಳು ಸಮಸ್ಯೆ ಅನುಭವಿಸುವಂತಾಗಿತ್ತು. ಕೋಟೇಶ್ವರ, ಕುಂಭಾಸಿ, ತೆಕ್ಕಟ್ಟೆ, ಬೈಂದೂರಿನ ನಾವುಂದ, ಉಪ್ಪುಂದ, ಮರವಂತೆ ಮೊದಲಾದೆಡೆ ಹೆದ್ದಾರಿ ಸಮೀಪ ಕೃತಕ ನೆರೆ ಸೃಷ್ಟಿಯಾಗಿತ್ತು.

Heavy_Rain Problem_Kundapur (21) Heavy_Rain Problem_Kundapur (25) Heavy_Rain Problem_Kundapur (19) Heavy_Rain Problem_Kundapur (18) Heavy_Rain Problem_Kundapur (17) Heavy_Rain Problem_Kundapur (20) Heavy_Rain Problem_Kundapur (23) Heavy_Rain Problem_Kundapur (24) Heavy_Rain Problem_Kundapur (15) Heavy_Rain Problem_Kundapur (16) Heavy_Rain Problem_Kundapur (14) Heavy_Rain Problem_Kundapur (11) Heavy_Rain Problem_Kundapur (12) Heavy_Rain Problem_Kundapur (10) Heavy_Rain Problem_Kundapur (6) Heavy_Rain Problem_Kundapur (5) Heavy_Rain Problem_Kundapur (2) Heavy_Rain Problem_Kundapur Heavy_Rain Problem_Kundapur (26) Heavy_Rain Problem_Kundapur (4) Heavy_Rain Problem_Kundapur (3) Heavy_Rain Problem_Kundapur (1)

ಇನ್ನು ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಬೀಜಾಡಿ ದೊಡ್ಮನೆಬೆಟ್ಟು ಎಂಬಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ ಘಟನೆ ವರದಿಯಾಗಿದ್ದು ಇಲ್ಲಿನ ಸ್ಥಳೀಯರು ಈ ಬಗ್ಗೆ ಪರಿತಪಿಸುವಂತಾಗಿತ್ತು. ಇಲ್ಲಿನ ನಿವಾಸಿಗಳಾದ ಕೂಸ ನಾಯ್ಕ್ ಮತ್ತು ಮುತ್ತಮ್ಮ ದಂಪತಿಗಳ ಮನೆ ಸಂಪೂರ್ಣ ಜಲಾವೃತಗೊಂಡಿದ್ದು ಮನೆಯೊಳಕ್ಕು ನೀರು ಹೊಕ್ಕು ದಂಪತಿಗಳು ಸಮಸ್ಯೆ ಎದುರಿಸುವಂತಾಗಿದೆ. ಸ್ಥಳೀಯ ಗ್ರಾ.ಪಂ. ಸದಸ್ಯ ರವೀಂದ್ರ ದೊಡ್ಮನೆ ಹಾಗೂ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಟೇಶ್ವರ, ಕಟ್ಕೆರೆ, ಕೋಣಿ, ಕೆದೂರು, ಕುಂಭಾಸಿ, ಕೊರವಡಿ, ತೆಕ್ಕಟ್ಟೆ ಮೊದಲಾದೆಡೆ ಮಳೆ ಸಮಸ್ಯೆಯಿಂದಾಗಿ ಮನೆ ಹಾಗೂ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿತ್ತು.

ಗಂಗೊಳ್ಳಿಯಲ್ಲಿ ನೆರೆ ಅಬ್ಬರ: ಎಡೆಬಿಡದೆ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಗಂಗೊಳ್ಳಿಯ ಮುಖ್ಯರಸ್ತೆ ಸೇರಿದಂತೆ ಹಲವು ರಸ್ತೆಗಳ ಮೇಲೆ ಭಾರಿ ಪ್ರಮಾಣದಲ್ಲಿ ನೀರು ನಿಂತುಕೊಂಡಿದೆ. ಸ್ಥಳೀಯ ಗ್ರಾಮ ಪಂಚಾಯತ್ ಚರಂಡಿ ಶುಚಿಗೊಳಿಸದ ಹಾಗೂ ಚರಂಡಿ ಒತ್ತುವರಿಯನ್ನು ತೆರವುಗೊಳಿಸದ ಮತ್ತು ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡದ ಹಿನ್ನಲೆಯಲ್ಲಿ ಮಳೆ ನೀರು ರಸ್ತೆ ಮೇಲೆ ಶೇಖರಣೆಗೊಂಡಿದೆ. ಹೀಗಾಗಿ ಮುಖ್ಯರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಡಕುಂಟಾಗಿದೆ. ಗಂಗೊಳ್ಳಿಯ ಅರೆಕಲ್ಲು ಸಮೀಪದ ನಿವಾಸಿ ಶಾಂತಾರಾಮ ಶೆಣೈ ಎಂಬುವರ ಹೊಟೇಲ್ ಹಾಗೂ ಮನೆಗೆ ಮಳೆ ನೀರು ಮನೆಗಳಿಗೆ ನುಗ್ಗಿ ಅಪಾರ ಹಾನಿ ಉಂಟಾಗಿದೆ ಅಲ್ಲದೆ ಸುತ್ತಮುತ್ತಲಿನ ಅಂಗಡಿ ಹಾಗೀ ಮನೆಗಳಿಗೂ ಕೂಡ ನೀರು ನುಗ್ಗಿದೆ. ಮೊಣಕಾಲಿನ ತನಕ ಮಳೆ ನೀರು ನಿಂತಿದ್ದರಿಂದ ಕೆಲಕಾಲ ವಾಹನ ಸಂಚಾರ ಕೂಡ ಸ್ಥಗಿತಗೊಂಡಿತ್ತು.

ಗಂಗೊಳ್ಳಿಯ ಶ್ರೀ ವಿಜಯವಿಠಲ ಮಂಟಪದ ಬಳಿಯಿಂದ ಕಲೈಕಾರ್ ಮಠದ ತನಕ ಮುಖ್ಯರಸ್ತೆಯಲ್ಲಿ ಮಳೆ ನೀರು ನಿಂತುಕೊಂಡಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡುವಂತಾಯಿತು. ಗಂಗೊಳ್ಳಿಯ ಮಲ್ಯರಬೆಟ್ಟು, ದಾಕುಹಿತ್ಲು, ದುರ್ಗಿಕೇರಿ, ಖಾರ್ವಿಕೇರಿ ಮೊದಲಾದ ಕಡೆಗಳಲ್ಲಿ ಭಾರಿ ಮಳೆಯಿಂದ ಜನರು ತೊಂದರೆ ಅನುಭವಿಸುವಂತಾಯಿತು. ಸ್ಥಳೀಯಾಡಳಿತ ದಿವ್ಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಜನರು ಆರೋಪಿಸಿದ್ದು, ಪ್ರತಿ ಮಳೆಗಾಲದ ಸಮಯದಲ್ಲಿ ಉದ್ಭವಿಸುವ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಪಂಚಾಯತ್‌ಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಗಂಗೊಳ್ಳಿ ಸಮೀಪದ ಕಂಚುಗೋಡು, ಹೊಸಾಡು ಮೊದಲಾದ ಕಡೆಗಳಲ್ಲಿ ಕೂಡ ಮಳೆಯಿಂದ ಭಾರಿ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ. ಮಳೆ ನೀರು ಮನೆಗಳಿಗೆ ನುಗ್ಗಿದ ಹಾಗೂ ತಗ್ಗುಪ್ರದೇಶಗಳು ಜಲಾವೃತಗೊಂಡಿರುವುದು ವರದಿಯಾಗಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Write A Comment