ಮಂಗಳೂರು,ಜುಲೈ .10: ಕಳೆದ ಹದಿನೈದು ದಿನಗಳಿಂದ ವಸ್ತುಶ: ಬೇಸಗೆಯಂತೆ ಸುಡುತ್ತಿದ್ದ ಕರಾವಳಿಯಲ್ಲಿ ಗುರುವಾರ ಮತ್ತೆ ಮಳೆಗಾಲದ ಅನುಭವ. ಮುಂಜಾನೆಯೇ ದಟ್ಟೈಸಿದ ಕಾರ್ಮೋಡಗಳು ಇಡೀ ದಿನ ವರ್ಷಧಾರೆ ಸುರಿಸಿದವು. ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಬಹುತೇಕ ಎಲ್ಲ ಭಾಗಗಳಲ್ಲಿ ಮಳೆ ಏಕಪ್ರಕಾರವಾಗಿ ಬಿದ್ದಿದ್ದು, ನದಿ, ತೊರೆಗಳು ತುಂಬಿ ಹರಿದವು. ಇದೇ ವೇಳೆ, ಮಳೆಯಿಂದಾಗಿ ಕೆಲವೆಡೆ ವಾಹನ ಅಪಘಾತದಂತ ಅನಾಹುತಗಳೂ ಸಂಭವಿಸಿದವು.
ದಿನವಿಡೀ ಮಳೆ: ಈ ಮಳೆ ಋತುವಿನಲ್ಲಿ ಇದೇ ಮೊದಲ ಬಾರಿಗೆ ದಿನವಿಡೀ ಮಳೆ ಸುರಿದದ್ದು ಗುರುವಾರದ ವಿಶೇಷ. ದ.ಕ. ಜಿಲ್ಲೆಯ ಮಂಗಳೂರು, ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಸುಳ್ಯ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಬುಧವಾರ ರಾತ್ರಿಯೇ ಮಳೆ ಶುರುವಾಗಿದ್ದರೆ, ಎಲ್ಲ ಕಡೆ ಬೆಳಗ್ಗೆ ಬಿರುಸು ಪಡೆಯಿತು. ಮಧ್ಯಾಹ್ನ ಒಂದಷ್ಟು ಹೊತ್ತು ವಿರಾಮದಂತೆ ಕಂಡರೂ ಸಂಜೆ ಮತ್ತೆ ತೀವ್ರಗೊಂಡಿತು. ರಾತ್ರಿಯೂ ಮುಂದುವರಿದಿದೆ.
ವಿರಾಮದ ಬಳಿಕ: ಬಹು ದಿನಗಳ ವಿರಾಮದ ಬಳಿಕ ಮಳೆ ಬಿದ್ದಿರುವುದರಿಂದ ಕೃಷಿಕರು ಸಂತಸಗೊಂಡಿದ್ದಾರೆ. ಮಳೆ ಇಲ್ಲದೆ ನಾಟಿ ಕಾರ್ಯ ಸ್ಥಗಿತಗೊಂಡಿತ್ತು ಮತ್ತು ತೋಟಗಾರಿಕಾ ಬೆಳೆಗಳಿಗೆ ನೀರುಣಿಸಬೇಕಾದ ಸ್ಥಿತಿ ಕೆಲವು ಕಡೆ ನಿರ್ಮಾಣಗೊಂಡಿತ್ತು.
ದೊಡ್ಡ ಹಾನಿ ಇಲ್ಲ: ಮಳೆ ಒಮ್ಮೆಗೇ ಧಾರಾಕಾರವಾಗಿ ಸುರಿಯದೆ ನಿಧಾನ ಗತಿಯಲ್ಲಿ ದಿನವಿಡೀ ಸುರಿದಿದ್ದರಿಂದ ದೊಡ್ಡ ಮಟ್ಟದ ಹಾನಿ ಸಂಭವಿಸಿಲ್ಲ. ಆದರೆ, ಕುಂದಾಪುರ ತಾಲೂಕಿನ ಕೆಲವೆಡೆ ಬಾವಿ ಕುಸಿತ, ರಸ್ತೆಯಲ್ಲಿ ನೆರೆ ಉಂಟಾಯಿತು.
ಮಳೆ ಪ್ರಮಾಣ: ದ.ಕ. ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಇದುವರೆಗೆ 140.9 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ 138.1 ಮಿ.ಮೀ. ಮಳೆ ಬಿದ್ದಿತ್ತು. ಈ ಬಾರಿ ಬಿಸಿಲಿನ ದಿನಗಳು ಜಾಸ್ತಿ ಇದ್ದರೂ ಹವಾಮಾನ ಇಲಾಖೆ ಪ್ರಕಾರ, ಈ ವರ್ಷ ಜನವರಿಯಿಂದ ಜು. 9ರವರೆಗೆ 1130.9 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 939 ಮಿ.ಮೀ. ಮಳೆಯಾಗಿತ್ತು. ತುಂಬಿ ಹರಿದ ಶಾಂಭವಿ: ಸಚ್ಚೇರಿಪೇಟೆ: ಎಡೆಬಿಡದೆ ಸುರಿದ ಭಾರಿ ಮಳೆಯಿಂದಾಗಿ ಸಚ್ಚೇರಿಪೇಟೆ ಕಡಂದಲೆ ಭಾಗದಲ್ಲಿ ಶಾಂಭವಿ ನದಿ ತುಂಬಿ ಹರಿಯುತ್ತಿದೆ.
ಸಚ್ಚೇರಿಪೇಟೆ ಹಾಗೂ ಕಡಂದಲೆ ಗ್ರಾಮದ ಸಂಪರ್ಕ ಕೊಂಡಿಯಾದ ಕಿಂಡಿ ಅಣೆಕಟ್ಟಿನಲ್ಲಿ ಭಾರಿ ಗಾತ್ರದ ಮರಮಟ್ಟುಗಳು ಸಿಲುಕಿಕೊಂಡಿದ್ದು ಅಣೆಕಟ್ಟಿನ ಕಂಬಗಳಿಗೆ ಅಪಾವಾಗುವ ಸಾಧ್ಯತೆ ಇದೆ. ಮೊದಲೇ ಕಿಂಡಿ ಅಣೆಕಟ್ಟಿನ ಕಂಬಗಳು ಬಿರುಕು ಬಿಟ್ಟಿದ್ದು, ಮರಳೂ ಜಮಾವಣೆಗೊಂಡಿದೆ. ರಾತ್ರಿ ಹೊತ್ತು ನಿರಂತರ ಮಳೆ ಬಂದರೆ ಎರಡು ಗ್ರಾಮದ ಕೊಂಡಿಯಾದ ಅಣೆಕಟ್ಟು ಮುಳುಗುವ ಸಾಧ್ಯತೆ ಇದೆ ಮತ್ತು ಎರಡು ಗ್ರಾಮದ ನದಿ ಪಕ್ಕ ಮನೆಗಳು ಸಂಪರ್ಕ ಕಡಿದುಕೊಳ್ಳುವ ಅಪಾಯವಿದೆ.
ಮಂಗಳೂರು: ಹಲವೆಡೆ ನೆರೆ, ಸಂಚಾರ ಅಸ್ತವ್ಯಸ್ತ: ದಿನವಿಡೀ ಸುರಿದ ಮಳೆಯಿಂದಾಗಿ ಮಂಗಳೂರು ನಗರ ಮತ್ತು ಹೊರವಲಯದ ಹಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದ್ದು, ಕೃತಕ ನೆರೆ ಉಂಟಾಗಿದೆ.
ಧಾರಾಕಾರ ಮಳೆಯಿಂದಾಗಿ ನಗರದ ಕೊಟ್ಟಾರ, ಕೊಡಿಯಾಲ್‌ಬೈಲ್, ಎಮ್ಮೆಕೆರೆ, ಜೆಪ್ಪಿನಮೊಗರು ಸಹಿತ ನಾನಾ ಕಡೆಗಳ ತಗ್ಗು ಪ್ರದೇಶದಲ್ಲಿ ಕೃತಕ ನೆರೆ ಉಂಟಾಗಿದೆ. ಮಳೆ ನೀರು ಹರಿದು ಹೋಗುವ ದೊಡ್ಡ ಚರಂಡಿಗಳು ಕೂಡಾ ತುಂಬಿ ಹರಿಯುತ್ತಿದ್ದು, ಕೊಟ್ಟಾರ ಚೌಕಿ ಬಳಿ ಅಡ್ಡ ರಸ್ತೆ ಮಾತ್ರವಲ್ಲದೆ ರಾಷ್ಟ್ರೀಯ ಹೆದ್ದಾರಿಗೂ ನೆರೆ ನೀರು ನುಗ್ಗಿತ್ತು. ಬಲ್ಲಾಳ್‌ಭಾಗ್, ಕೊಟ್ಟಾರ ಬಳಿ ತೋಡಿನಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗದೆ ಸಮೀಪದ ಮನೆಗಳಿಗೆ ನುಗ್ಗಿದೆ.
ತಡೆಗೋಡೆ ಕುಸಿತ: ಮೂಡುಶೆಡ್ಡೆ ಬಳಿ ತಡೆಗೋಡೆ ಕುಸಿದ ಪರಿಣಾಮ ಮನೆಯ ಹೊರಭಾಗದಲ್ಲಿ ಕುಳಿತಿದ್ದ ಲೋಕಯ್ಯ(62) ಮತ್ತು ಅರುಣ್ ಕುಮಾರ್(32) ಗಾಯಗೊಂಡಿದ್ದಾರೆ. ಬೆಂದೂರಿನ ಸೈಂಟ್ ಆ್ಯಗ್ನೆಸ್ ಕಾಲೇಜಿನ ಬಳಿ ಮರವೊಂದು ರಸ್ತೆಗೆ ಬಿದ್ದು ಸಂಚಾರಕ್ಕೆ ತೊಂದರೆಯಾಯಿತು.
ಸಂಚಾರಕ್ಕೆ ಕಿರಿಕಿರಿ: ನಗರದ ರಾವ್ ಆ್ಯಂಡ್ ರಾವ್ ವೃತ್ತ, ಪಿವಿಎಸ್, ನವಭಾರತ್, ಬಲ್ಮಠ, ಅಂಬೇಡ್ಕರ್, ಬಂಟ್ಸ್ ಹಾಸ್ಟೆಲ್, ಲಾಲ್‌ಭಾಗ್, ಕೆಎಸ್‌ಆರ್‌ಟಿಸಿ, ನಂತೂರು, ಪಂಪ್‌ವೆಲ್ ವೃತ್ತಗಳಲ್ಲಿ ಸಂಚಾರ ಆಗಾಗ ಅಸ್ತವ್ಯಸ್ತಗೊಳ್ಳುತ್ತಿತ್ತು
ಪ್ರಮುಖ ರಸ್ತೆಗಳಲ್ಲಿ ಚರಂಡಿ ವ್ಯವಸ್ಥೆ ಸೂಕ್ತವಿಲ್ಲದ ಕಾರಣ ರಸ್ತೆಯಲ್ಲೇ ಮಳೆ ನೀರು ಹರಿಯುತ್ತಿದ್ದು, ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಸಂಕಟಕ್ಕೆ ಒಳಗಾದರು. ಇತ್ತೀಚೆಗೆ ಒಳಚರಂಡಿ ದುರಸ್ತಿಗಾಗಿ ಅಗೆಯಲಾದ ಗಣಪತಿ ಹೈಸ್ಕೂಲು ರಸ್ತೆ ನಡು ಭಾಗವನ್ನು ಮುಚ್ಚಿ, ಡಾಮರೀಕರಣ ಮಾಡದ ಹಿನ್ನೆಲೆಯಲ್ಲಿ ಮಳೆ ನೀರಿನ ರಭಸಕ್ಕೆ ಮತ್ತಷ್ಟು ಹೊಂಡವಾಗಿ ದ್ವಿಚಕ್ರ ವಾಹನ ಸವಾರರು ಕಷ್ಟಪಡುವಂತಾಗಿದೆ. ಬಹುತೇಕ ಭಾಗಗಳಲ್ಲಿ ಮ್ಯಾನ್‌ಹೋಲ್‌ಗಳಿಗೆ ಮಳೆ ನೀರು ತುಂಬಿದ ಪರಿಣಾಮ ರಸ್ತೆಗಳಲ್ಲಿ ಒಳಚರಂಡಿಯ ಕೊಚ್ಚೆ ನೀರು ರಸ್ತೆಯಲ್ಲೇ ಹರಿಯುತ್ತಿತ್ತು.












