ಕನ್ನಡ ವಾರ್ತೆಗಳು

ಬಾಲಕನಿಗೆ ಬಿಸಿ ಸೌಟಿನಿಂದ ಬರೆ ಪ್ರಕರಣ : ಆರೋಪಿ ಸಿಬ್ಬಂದಿ ವಿರುದ್ದ ದೂರು ನೀಡಲು ನಿಕೇಶ್ ಶೆಟ್ಟಿ ಆದೇಶ.

Pinterest LinkedIn Tumblr

hot_spoon_bare

ಮಂಗಳೂರು,ಜುಲೈ.07 :ನಗರದ ಪಂಪ್‌ವೆಲ್ ಸಮೀಪದ ಕಾರ್ಟ್ಸ್ ಸಂವೇದನಾ ಎಂಬ ವಿಶೇಷ ಚಿಕಿತ್ಸೆಯ ಅಗತ್ಯವಿರುವ ಮಕ್ಕಳ ಪೋಷಣೆ ಕೇಂದ್ರದಲ್ಲಿ ಬಾಲಕನೊಬ್ಬನ ಕುತ್ತಿಗೆಗೆ ಅಲ್ಲಿಯ ಅಡುಗೆಯಾತ ಬಿಸಿ ಸೌಟಿನಿಂದ ಸುಟ್ಟು ಗಾಯಗೊಳಿಸಿದ ಅಮಾನವೀಯ ಘಟನೆ ಸೋಮವಾರ ನಡೆದಿದೆ.

ಸಂವೇದನಾ ಸಂಸ್ಥೆಯಲ್ಲಿ ಹಲವು ಮಕ್ಕಳು ವಾಸಿಸುತ್ತಿದ್ದು, ಹೆಚ್ಚಿನವರು ಶಾಲೆಗೆ ಹೋಗುತ್ತಿದ್ದಾರೆ. ಸೋಮವಾರ ಬೆಳಗ್ಗೆ 7.30ರ ವೇಳೆಗೆ ಬಾಲಕರನ್ನು ಯೋಗ ಮಾಡಲು ಬಿಡಲಾಗಿತ್ತು. ಆಗ ಮೂಲ್ಕಿ ಸಮೀಪದ 10ರ ಹರೆಯದ ಮತ್ತು ಬಾಗಲಕೋಟೆ ಮೂಲದ ಒಂಬತ್ತರ ಹರೆಯದ ಬಾಲಕ ಪರಸ್ಪರ ಜಗಳ ಮಾಡುತ್ತಿದ್ದರು.

ಈ ಸಂದರ್ಭದಲ್ಲಿ ಅಲ್ಲೇ ಅಡುಗೆ ಮಾಡುತ್ತಿದ್ದ ಲಿಂಗಪ್ಪ ಎಂಬಾತ ಸಾಂಬಾರಿಗೆ ಈರುಳ್ಳಿ ಕಾಯಿಸುತ್ತಿದ್ದ ಬಿಸಿ ಸೌಟಿನಿಂದ 10ರ ಹರೆಯದ ಆ ಹುಡುಗನ ಕುತ್ತಿಗೆಯ ಬಲ ಭಾಗಕ್ಕೆ ಬರೆ ಎಳೆದಿದ್ದಾನೆ ಎಂದು ದೂರಲಾಗಿದೆ. ಇದರಿಂದ ಉರಿ ತಾಳಲಾರದೆ ಹುಡುಗ ಸಂಸ್ಥೆಯ ಆವರಣ ದಾಟಿ ಕಂಕನಾಡಿ ಬೈಪಾಸ್ ರಸ್ತೆಯ ಎಂವಿ ಶೆಟ್ಟಿ ಲೇಡಿಸ್ ಹಾಸ್ಟೆಲ್ ಬಳಿ ಬಂದು, ಚೈಲ್ಡ್‌ಲೈನ್- 1098ಗೆ ಕರೆ ಮಾಡಲು ಟೆಲಿಫೋನ್ ಬೂತ್ ಹುಡುಕಾಟ ನಡೆಸುತ್ತಿದ್ದ. ಹುಡುಗ ಅಳುತ್ತಿರುವುದನ್ನು ಗಮನಿಸಿದ ಸ್ಥಳೀಯ ನಿವಾಸಿ ಚಂಚಲಾಕ್ಷಿ ಎಂಬವರು ಆತನನ್ನು ಕರೆಸಿ, ವಿಷಯ ಕೇಳಿಸಿಕೊಂಡು, ತಕ್ಷಣ ಹೋಮ್‌ಗಾರ್ಡ್ ಆಗಿರುವ ತನ್ನ ತಂಗಿ ಭವಾನಿ ಅಮೀನ್ ಅವರಿಗೆ ಮಾಹಿತಿ ತಿಳಿಸಿದರು. ಭವಾನಿ ಅವರು ಚೈಲ್ಡ್‌ಲೈನ್‌ಗೆ ಫೋನ್ ಮಾಡಿ ಕಾರ್ಯಕರ್ತರನ್ನು ಕರೆಸಿದ ಭವಾನಿ, ತಂಡದ ಜತೆ ಸಂವೇದನಾ ಸಂಸ್ಥೆಗೆ ತೆರಳಿದರು. ತಕ್ಷಣ ಬಾಲಕನನ್ನು ಚೈಲ್ಡ್‌ಲೈನ್‌ನ ವಾಹನ ಮೂಲಕ ವೆನ್ಲಾಕ್ ಆಸ್ಪತ್ರೆಗೆ ಕರೆ ತಂದು, ಮಕ್ಕಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಯಿತು. ಆತನ ಜತೆ ಜಗಳ ಮಾಡಿದ್ದ ಬಾಲಕ ಘಟನೆಗೆ ಪ್ರತ್ಯಕ್ಷದರ್ಶಿಯಾಗಿದ್ದು, ಆತನನ್ನೂ ಆಸ್ಪತ್ರೆಗೆ ಕರೆತರಲಾಗಿತ್ತು. ಆತ ಘಟನೆ ಬಗ್ಗೆ ವಿವರಿಸಿದ. ಬಳಿಕ ಇಬ್ಬರನ್ನೂ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಯಿತು. ಸಮಿತಿ ಆದೇಶದಂತೆ ಬಾಲಕರನ್ನು ಸ್ನೇಹ ಸದನದಲ್ಲಿ ತಾತ್ಕಾಲಿಕ ನೆಲೆ ಕಲ್ಪಿಸಲಾಗಿದೆ. ವಿಚಾರಣೆಗೆ ತೆರಳಿದ ಚೈಲ್ಡ್‌ಲೈನ್ ಕಾರ್ಯಕರ್ತರ ಜತೆ ಮಾತನಾಡಿದ ಸಂವೇದನಾ ಸಂಸ್ಥೆ ಸಿಬ್ಬಂದಿ, ಹುಡುಗರಿಬ್ಬರ ಜಗಳ ಬಿಡಿಸುವ ಸಂದರ್ಭದಲ್ಲಿ ಘಟನೆ ನಡೆದಿದೆಯೇ ವಿನಃ, ಉದ್ದೇಶಪೂರ್ವಕ ಬಿಸಿ ಮುಟ್ಟಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.

‘ಮಕ್ಕಳು ಜಗಳಾಡಿದರೂ ಹೊಡೆಯುವ, ಸುಟ್ಟು ಗಾಯಗೊಳಿಸುವ ಅಧಿಕಾರ ಯಾರಿಗೂ ಇಲ್ಲ. ಆದ್ದರಿಂದ ಸಂಸ್ಥೆಯೇ ನೌಕರನ ವಿರುದ್ಧ ದೂರು ನೀಡಲು ತಿಳಿಸಿದ್ದೇವೆ. ಒಂದು ವೇಳೆ ನಾಳೆಯೊಳಗೆ ದೂರು ನೀಡದಿದ್ದಲ್ಲಿ ಸಂಸ್ಥೆಯ ಮಾನ್ಯತೆ ರದ್ದು ಮಾಡುವ ಅಧಿಕಾರ ನಮಗಿದೆ’ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ನಿಕೇಶ್ ಶೆಟ್ಟಿ ತಿಳಿಸಿದರು.

Write A Comment