ಕನ್ನಡ ವಾರ್ತೆಗಳು

ಶಾಸಕ ಲೋಬೋರಿಂದ ಗುಜ್ಜರಕೆರೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ : ನೀರು ಸೋರಿಕೆ ತಡೆಗಟ್ಟಲು ಸೂಚನೆ

Pinterest LinkedIn Tumblr

Gujjara_Kere_visit_1

ಮಂಗಳೂರು, ಮೇ .31: ಗುಜ್ಜರಕೆರೆಯ ಸುತ್ತಲಿನ ಒಳಚರಂಡಿಯ ನೀರು ಒಂದು ಹನಿಯೂ ಸೋರಿಕೆಯಾಗದಂತೆ ಕ್ರಮ ಕೈಗೊಳ್ಳುವಂತೆ ಶಾಸಕ ಜೆ.ಆರ್.ಲೋಬೊ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಶನಿವಾರ ಗುಜ್ಜರಕೆರೆ ಅಭಿವೃದ್ಧಿ ಕಾಮಗಾರಿಯನ್ನುಪರಿಶೀಲಿಸಿದ ಅವರು, ಕೆರೆಗೆ ಒಳಚರಂಡಿ ನೀರು ಸೋರಿಕೆಯಾಗುವುದನ್ನು ತಡೆಗಟ್ಟಲು ಆದೇಶಿಸಿದರು.

ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅನಿಲ್ ಮಾತನಾಡಿ, ಪ್ರತಿಯೊಂದು ಮ್ಯಾನ್‌ಹೋಲ್‌ಗಳು ತುಂಬಿ ಹೋಗಿರುವ ಹಿನ್ನೆಲೆಯಲ್ಲಿ ಎಲ್ಲಿ ಸೋರಿಕೆಯಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಎಂದರು. ಜತೆಗೆ ವೆಟ್‌ವೆಲ್‌ನ ಪಂಪಿಂಗ್ ಯಂತ್ರ ಹಾಳಾಗಿದ್ದು, ಹೊಸ ಯಂತ್ರ ಅಳವಡಿಸಿದ ಬಳಿಕ ಒಳಚರಂಡಿಯಲ್ಲಿ ತುಂಬಿರುವ ತ್ಯಾಜ್ಯವನ್ನು ಖಾಲಿ ಮಾಡಲಾಗುವುದು ಎಂದು ಅವರು ತಿಳಿಸಿದರು.

ಒಳಚರಂಡಿಯ ಪೈಪ್‌ಗಳು ಹಳೆಯದಾದ ಕಾರಣ ಹೆಚ್ಚು ಒತ್ತಡದಲ್ಲಿ ಪಂಪಿಂಗ್ ಮಾಡಿದರೆ ಪೈಪ್‌ಗಳು ಒಡೆದುಹೋಗುವ ಸಂಭವವಿರುವ ಕಾರಣ ಹಂತ ಹಂತವಾಗಿ ಕಾಮಗಾರಿ ಪೂರೈಸಲಾಗುವುದು ಎಂದು ಅವರು ತಿಳಿಸಿದರು.

Gujjara_Kere_visit_2 Gujjara_Kere_visit_3 Gujjara_Kere_visit_4 Gujjara_Kere_visit_5 Gujjara_Kere_visit_6 Gujjara_Kere_visit_7 Gujjara_Kere_visit_8 Gujjara_Kere_visit_9

ಶಾಸಕ ಜೆ.ಆರ್.ಲೋಬೊ ಮಾತನಾಡಿ, ಬಹಳ ವರ್ಷಗಳ ಹಿಂದೆ ಸ್ಥಳೀಯ ಬೋಳಾರ ಹಳೆಕೋಟೆ ಶ್ರೀಮಹಿಷಮರ್ದಿನಿ ಮಾರಿಯಮ್ಮ ದೇವಸ್ಥಾನದ ದೇವರ ಜಳಕ ಗುಜ್ಜರಕೆರೆಯಲ್ಲೇ ನೆರವೇರಿಸಲಾಗುತ್ತಿದ್ದು, ಕೆರೆ ಹಾಳಾದ ಹಿನ್ನೆಲೆಯಲ್ಲಿ ಈ ಕಾರ್ಯ ಸ್ಥಗಿತವಾಗಿದೆ. ಪ್ರಸ್ತುತ ವರ್ಷದಲ್ಲಿ ಕೆರೆಯನ್ನು ಶುದ್ಧೀಕರಿಸಿ ದೇವರ ಕಾರ್ಯಕ್ಕೆ ಸಮರ್ಪಿಸುವ ಭರವಸೆ ನೀಡಿದ್ದೇನೆ ಎಂದರು.

ಗುಜ್ಜರಕೆರೆ ಸಂಪೂರ್ಣ ಅಭಿವೃದ್ಧಿಗೊಂಡ ಬಳಿಕ ಕೆರೆಯ ಉಸ್ತುವಾರಿಯನ್ನು ನೋಡಿಕೊಳ್ಳು ವಂತೆ ಮಾರಿಯಮ್ಮ ದೇವಸ್ಥಾನದ ಆಡಳಿತ ಮಂಡಳಿಯನ್ನು ಕೇಳಿಕೊಳ್ಳುವ ಉದ್ದೇಶವಿದೆ ಎಂದು ಅವರು ತಿಳಿಸಿದರು. ಈಗಾಗಲೇ ಕೆರೆಯಿಂದ ಮೇಲಕ್ಕೆತ್ತಿ ಹಾಕಲಾದ ಕಳೆಯನ್ನು ತಕ್ಷಣ ಖಾಲಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದ ಅವರು, ಹೆಚ್ಚುವರಿ ಡ್ರೆಜ್ಜಿಂಗ್ ಯಂತ್ರ ಬಳಸಿ ಹೂಳೆತ್ತುವಂತೆ ತಿಳಿಸಿದರು.

ಕಾರ್ಪೊರೇಟರ್ ರತಿಕಲಾ, ಮಂಗಳೂರು ಮಹಾನಗರ ಪಾಲಿಕೆ ಎಂಜಿನಿಯರಿಂಗ್ ಅಧೀಕ್ಷಕ ಶಿವಶಂಕರ್, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಷಣ್ಮುಗಂ, ಜ್ಯೂನಿಯರ್ ಎಂಜಿನಿಯರ್ ಶೇಷಕೃಷ್ಣ, ಪಾಲಿಕೆಯಜ್ಯೂನಿಯರ್ ಎಂಜಿನಿಯರ್ ಗಣಪತಿ, ಲಕ್ಷ್ಮಣ ಪೂಜಾರಿ, ಗುರುರಾಜ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.

Write A Comment