ಕನ್ನಡ ವಾರ್ತೆಗಳು

ಶ್ರೀರಾಮಚಂದ್ರಾಪುರ ಮಠದಿಂದ ಮನೆ ದುರಸ್ತಿ – ಜೂನ್ 1 ರಂದು ಸಮರ್ಪಣೆ

Pinterest LinkedIn Tumblr

Puthige_house_reblt

ಪುತ್ತಿಗೆ,ಮೇ 29: ಗುಂಪೆ ವಲಯದ ನೇತೃತ್ವದಲ್ಲಿ ಶ್ರೀರಾಮಚಂದ್ರಾಪುರ ಮಠದ ಸಹಾಯದೊಂದಿಗೆ ದುರಸ್ತಿಗೊಳಿಸಿದ ಪುತ್ತಿಗೆ ಸನಿಹದ ಕೃಷ್ಣ ಹೆಬ್ಬಾರರ ಮನೆ ಸಮರ್ಪಣೆಯ ಕಾರ್ಯಕ್ರಮವು 01.06.2015 ಸೋಮವಾರ ಗಣಪತಿ ಹವನ, ಶಿವಪೂಜೆ, ಕುಂಕುಮಾರ್ಚನೆ ಸಹಿತ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಅತ್ಯಂತ ಶೋಚನೀಯಾವಸ್ಥೆಯಲ್ಲಿದ್ದ ಈ ಮನೆಯನ್ನು ಮುಳ್ಳೇರಿಯಾ ಮಂಡಲದ ಗುಂಪೆ ವಲಯದ ನೇತೃತ್ವದಲ್ಲಿ ಸುಮಾರು ಒಂದೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ವಾಸಕ್ಕೆ ಯೋಗ್ಯಗೊಳಿಸಲಾಗಿದ್ದು, ಶ್ರೀರಾಮಚಂದ್ರಾಪುರ ಮಠದ ಮಹಾಮಂಡಲ ಅಧ್ಯಕ್ಷ ಡಾ|ವೈ.ವಿ.ಕೃಷ್ಣಮೂರ್ತಿಯವರು ಮನೆಯನ್ನು ಸಮರ್ಪಿಸಲಿದ್ದಾರೆ.

ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಾದದೊಂದಿಗೆ 15.03.2015 ರಂದು ಆರಂಭವಾದ ಮನೆ ದುರಸ್ತಿ ಕಾರ್ಯವು ಅತ್ಯಂತ ಶೀಘ್ರವಾಗಿ ಪೂರ್ಣಗೊಂಡಿದ್ದು ಹಿತೈಷಿಗಳ ಸಹಕಾರದೊಂದಿಗೆ ಬಹು ವೇಗದಲ್ಲಿ ನಿರ್ಮಾಣವಾದ ರಸ್ತೆ, ಮಾಡಿನ ದುರಸ್ತಿ, ಸಾರಣೆ, ಶೌಚಾಲಯ ನಿರ್ಮಾಣವು ಆರ್ಥಿಕವಾಗಿ ಹಿಂದುಳಿದ ಮನೆ, ಮನಸ್ಸಿಗೆ ನೆಮ್ಮದಿಯ ಭವಿಷ್ಯವನ್ನು ಕಟ್ಟಿಕೊಟ್ಟಿದೆ. ಕಳೆದ ಮಳೆಗಾಲದಲ್ಲಿ ಈ ಮನೆಯು ತೀರಾ ಶೋಚನೀಯಾವಸ್ಥೆಯಲ್ಲಿದ್ದು ನವೀಕರಣ ಕಾಮಗಾರಿಗಳನ್ನು ನಡೆಸಲು ಸಾಧ್ಯವಾಗದೆ ಕುಸಿದು ಬೀಳುವ ಹಂತಕ್ಕೆ ತಲುಪಿತ್ತು. ಪಾಕತಜ್ಞರಿಗೆ ಸಹಾಯಕರಾಗಿ ದುಡಿಯುತ್ತಿರುವ ಕೃಷ್ಣ ಹೆಬ್ಬಾರರು ಸಹೋದರ ನಾರಾಯಣ ಹೆಬ್ಬಾರ್ ಹಾಗೂ ಸಹೋದರಿ ಪಾರ್ವತಿಯವರೊಂದಿಗೆ ಈ ಮನೆಯಲ್ಲಿ ವಾಸಿಸುತ್ತಿದ್ದು ಎಲ್ಲರೂ ಅವಿವಾಹಿತರು ಮತ್ತು ದೈಹಿಕವಾಗಿ ಸಬಲರಲ್ಲದಿದ್ದುದರಿಂದ ಇದ್ದ ಮನೆಯಲ್ಲಿ ಅಲ್ಪತೃಪ್ತರಾಗಿದ್ದರು.

Puthige_house_reblt_1

ಕಳೆದ ವರ್ಷ ವಲಯದ ಗ್ರಾಮಣಿ ಶಂಭು ಹೆಬ್ಬಾರ್ ಶ್ರಾವಣಕೆರೆ ಈ ವಿಚಾರವನ್ನು ಗುಂಪೆ ವಲಯದ ಮಾಸಿಕ ಸಭೆಯಲ್ಲಿ ಮಂಡಿಸಿದ್ದರು. ತಕ್ಷಣ ವಲಯ ಅಧ್ಯಕ್ಷರಾದ ಅಮ್ಮಂಕಲ್ಲು ರಾಮ ಭಟ್ ಮತ್ತು ಕಾರ್ಯದರ್ಶಿ ಕೇಶವ ಪ್ರಸಾದ್‌ರವರು ಎಲ್ಲ ಪದಾಧಿಕಾರಿಗಳು ಮತ್ತು ಇತರ ಗ್ರಾಮಣಿಗಳ ಜತೆಗೂಡಿ ಸದ್ರಿ ಮನೆಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ತಿಳಿದುಕೊಂಡಿದ್ದರು. ಅಷ್ಟರಲ್ಲಿ ಮಳೆಗಾಲ ಸಮೀಪಿಸುತ್ತಿದ್ದುದರಿಂದ ಟರ್ಪಾಲು ಹಾಸಿ ಮಳೆಗಾಲದಲ್ಲಿ ವಾಸಿಸುವುದಕ್ಕೆ ಯೋಗ್ಯವಾದ ಅನುಕೂಲತೆಗಳನ್ನು ಪೂರೈಸಲಾಗಿತ್ತು.

ಎರಡನೇ ಹಂತದ ದುರಸ್ತಿ ಕಾರ್ಯವು ಮಾರ್ಚ್ 15 ರಂದು ಶ್ರಮದಾನದೊಂದಿಗೆ ಆರಂಭವಾಗಿದ್ದು ಈ ಸಂದರ್ಭದಲ್ಲಿ ಮನೆಗೆ ಸರಿಯಾದ ದಾರಿ, ಪರಿಸರ ಶುಚೀಕರಣ, ಸಾರಣೆ, ಸ್ನಾನ ಗೃಹ, ಕುಡಿಯುವ ನೀರಿನ ಬಾವಿ, ಅಂಗಳ ದುರಸ್ತಿ ಕಾರ್ಯವನ್ನು ಪೂರೈಸಲಾಗಿದೆ. ಪ್ರಸ್ತುತ ಶೌಚಾಲಯ ಮತ್ತು ವಿದ್ಯುತ್ ಸಂಪರ್ಕವನ್ನು ಒದಗಿಸುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ. ಜೂನ್ 1ರಂದು ನಡೆಯುವ ಮನೆಯ ಸಮರ್ಪಣೆ ಕಾರ್ಯಕ್ರಮದಲ್ಲಿ ಮಹಾಮಂಡಲ ಅಧ್ಯಕ್ಷ ಡಾ| ವೈ.ವಿ. ಕೃಷ್ಣ ಮೂರ್ತಿ, ಸಹಾಯ ಪ್ರಮುಖ ಹೇರಂಭ ಶಾಸ್ತ್ರಿ, ಮಹಿಳಾ ವಿಭಾಗ ಪ್ರಧಾನ ಈಶ್ವರಿ.ಎಸ್.ಭಟ್ ಬೇರ್ಕಡವು, ಮಂಡಲ ಅಧ್ಯಕ್ಷ ಬಿ.ಜಿ. ರಾಮ ಭಟ್, ಮುಳ್ಳೇರಿಯ ಮಂಡಲ ಕಾರ್ಯದರ್ಶಿ ಮೊಗ್ರ ಸತ್ಯನಾರಾಯಣ ಭಾಗವಹಿಸಲಿದ್ದಾರೆ.

ವರದಿ: ಎಂ.ಸುಬ್ರಹ್ಮಣ್ಯ ಭಟ್, ಬೆಜಪ್ಪೆ

Write A Comment