ಕನ್ನಡ ವಾರ್ತೆಗಳು

ಬಡತನದಲ್ಲೂ ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಗಳಿಸಿದ ಅವಳಿಗಳು : ಮನೆ ಕೆಲಸ ಮಾಡಿ ಮಕ್ಕಳ ಶಿಕ್ಷಣಕ್ಕೆ ಬೆಂಗಾವಲಾದ ತಾಯಿ

Pinterest LinkedIn Tumblr

Puc_Twins_Pass

ಮಂಗಳೂರು, ಮೇ.21: ಬಡತನದ ನಡುವೆಯೂ ನಾಲ್ಕು ಮನೆಗಳಲ್ಲಿ ಕೆಲ ಮಾಡಿ, ಎರಡು ಕಚೇರಿಗಳಲ್ಲಿ ಕುಡಿಯುವ ಕೆಲಸ ಮಾಡಿ ನಾಲ್ಕು ಮಕ್ಕಳ ಶಿಕ್ಷಣ ಹಾಗೂ ಕುಟುಂಬಕ್ಕೆ ಆಧಾರ ಸ್ತಂಭವಾಗಿ ನಿಂತಿರುವ ಮಹಾಮಾತೆಯೊಬ್ಬರ ಅವಳಿ ಪುತ್ರಿಯರು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ತಾಯಿಯ ಮುಖದಲ್ಲಿ ನಗುವಿನ ಮಂದಹಾಸ ಬೀರಲು ಕಾರಣರಾಗಿದ್ದಾರೆ.

ಕಾವೂರು ಬಳಿಯ ವಿಜಯಪುರ ಕಾಲನಿಯ ಜ್ಯೋತಿನಗರದಲ್ಲಿ ಪುಟ್ಟದಾದ ಹೆಂಚಿನ ಮನೆಯಲ್ಲಿ ಪತಿ ಹಾಗೂ ತನ್ನ ನಾಲ್ಕು ಮಂದಿ ಮಕ್ಕಳ ಜತೆ ವಾಸಿಸುತ್ತಿರುವ ಬೀಬಿಜಾನ್ ಅವರೇ ಈ ಮಹಾಮಾತೆ. ಬೀಬಿಜಾನ್ ಅವರ ಅವಳಿ ಪುತ್ರಿಯರಾದ ಅಫ್ರೀನಾ ಮತ್ತು ನಸ್ರೀನಾ ಕಾವೂರಿನ ಬಿಜಿಎಸ್ ಸಂಯುಕ್ತ ಪಿಯು ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದು ಅವರು ದ್ವಿತೀಯ ಪಿಯುಸಿಯಲ್ಲಿ ಅನುಕ್ರಮವಾಗಿ 531 (ಶೇ.88.5) ಹಾಗೂ 522 (ಶೇ.87) ಅಂಕಗಳನ್ನು ಪಡೆದಿದ್ದಾರೆ.

ಕಳೆದ ಸೋಮವಾರ (ಪಿಯುಸಿ ಫಲಿತಾಂಶ ಪ್ರಕಟಗೊಂಡ ದಿನ) ಎಂದಿನಂತೆ ಬೀಬಿಜಾನ್ ಮನೆಕೆಲಸಕ್ಕೆಂದು ತೆರಳಿದ್ದರು. ಕೆಲಸದಲ್ಲಿ ನಿರತರಾಗಿದ್ದ ಅವರಿಗೆ ತನ್ನ ಇಬ್ಬರು ಅವಳಿ ಪುತ್ರಿಯರು ಶಿಕ್ಷಣ ಪಡೆಯುತ್ತಿದ್ದ ಶಾಲೆಯಿಂದ ಕರೆ ಬಂದಾಗ, ಅವರು ಹೇಳಿದ ಸುದ್ದಿ ಕೇಳಿ ಸಂತಸಕ್ಕೆ ಪಾರವೇ ಇರಲಿಲ್ಲ. ಅಂತರ್ಜಾಲದ ಮೂಲಕ ನೋಡುವ ವ್ಯವಸ್ಥೆ ಇಲ್ಲದ ಕಾರಣ ಶಾಲೆಯಿಂದ ತಾಯಿಗೆ ಬಂದ ಸುದ್ದಿಯಿಂದಲೇ ಈ ಅವಳಿ ಸಹೋದರಿಯರು ತಮ್ಮ ಅಂಕಗಳನ್ನು ತಿಳಿದುಕೊಂಡರು.

ನಾಲ್ಕೈದು ಮನೆಗಳು ಹಾಗೂ ಎರಡು ಕಚೇರಿಗಳನ್ನು ಗುಡಿಸಿ ಕುಟುಂಬವನ್ನು ಸಲಹುತ್ತಿರುವ ಬೀಬಿಜಾನ್ ಅವರ ಹಿರಿಯ ಪುತ್ರಿ ನಿಲೋಫರ್ ಎಂಕಾಂ ಪರೀಕ್ಷೆ ಬರೆದು ಇದೀಗ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ. ಕೊನೆಯ ಪುತ್ರ ವಾಸಿಂ ಅಕ್ರಂ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಈ ನಡುವೆ ಬೀಬಿಜಾನ್ ಅವರ ಪತಿ ಮುಹಮ್ಮದ್ ಹನೀಫ್ ಕೂಲಿ ಕಾರ್ಮಿಕ. ಮುಹಮ್ಮದ್ ಹನೀಫ್‌ರವರು ಅನಾರೋಗ್ಯ ಹಾಗೂ ಶಸ್ತ್ರ ಚಿಕಿತ್ಸೆಗೂ ಒಳಗಾಗಿರುವುದರಿಂದ ಕುಟುಂಬದ ಆರು ಮಂದಿಯನ್ನು ಸಲಹುವ ಜವಾಬ್ದಾರಿ ಬೀಬಿಜಾನ್ ಅವರ ಹೆಗಲ ಮೇಲಿದೆ. ‘‘ನನ್ನ ಮಕ್ಕಳು ಚೆನ್ನಾಗಿ ಕಲಿಯಬೇಕೆಂಬುದು ನನ್ನ ಆಸೆ. ಅದಕ್ಕಾಗಿ ನಾನು ನಾಲ್ಕು ಮನೆಗಳಲ್ಲಿ ಹಾಗೂ ಆಫೀಸ್ ಗುಡಿಸಲು ಬೆಳಗ್ಗೆ ಏಳು ಗಂಟೆಗೇ ಮನೆಯಿಂದ ಹೊರಡಬೇಕಾಗುತ್ತದೆ. ಕೆಲವೊಮ್ಮೆ ಬೆಳಗಿನ ಹೊತ್ತು ಊಟ ತಿಂಡಿ ರೆಡಿ ಮಾಡಲೂ ಸಾಧ್ಯವಾಗುವುದಿಲ್ಲ. ಮಕ್ಕಳು ಖಾಲಿ ಹೊಟ್ಟೆಯಲ್ಲೇ ಕಾಲೇಜಿಗೆ ಹೋಗುವಾಗ ಕರುಳು ಕಿತ್ತು ಬರುತ್ತದೆ. ಮಕ್ಕಳು ಚೆನ್ನಾಗಿ ಕಲಿತು ಗೌರವಯುತ ನಾಗರಿಕರಾಗಿ ಬಾಳಬೇಕೆಂಬ ಆಸೆಯಿಂದ ನಾನು ಕಷ್ಟಪಟ್ಟು ದುಡಿಯುತ್ತಿದ್ದೇನೆ’’ ಎನ್ನುತ್ತಾರೆ ಬೀಬಿಜಾನ್.

ಮೂಲತಃ ಗದಗ ಜಿಲ್ಲೆಯ ಮುಳಗುಂದದವರಾದ ಮುಹಮ್ಮದ್ ಹನೀಫ್ ಹಾಗೂ ಬೀಬಿಜಾನ್ ತಮ್ಮ ಮಕ್ಕಳೊಂದಿಗೆ ಕಳೆದ 25 ವರ್ಷಗಳಿಂದ ಕಾವೂರಿನ ಜ್ಯೋತಿ ನಗರದಲ್ಲಿ ವಾಸವಾಗಿದ್ದಾರೆ. ಉತ್ತರ ಕರ್ನಾಟಕದ ಕಾರ್ಮಿಕ ಕುಟುಂಬಗಳನ್ನು ಹೊಂದಿರುವ ಈ ಕಾಲನಿಯು ಆಧುನಿಕ ಸೌಲಭ್ಯಗಳಿಂದ ದೂರವಾಗಿಯೇ ಇದೆ. ವಾರದ ಆರು ದಿನ ಮನೆಕೆಲಸದಾಳಾಗಿ ದುಡಿಯುವ ಬೀಬಿಜಾನ್ ರವಿವಾರ ಸೆಂಟ್ರಲ್ ಮಾರುಕಟ್ಟೆ ಬಳಿ ಪುತ್ರಿ ನಸ್ರೀನಾ ಜತೆ ಬಳೆ ವ್ಯಾಪಾರ ನಡೆಸುತ್ತಾರೆ. ಪಿಯುಸಿಯಲ್ಲಿ ವಿಶಿಷ್ಟ ಅಂಕ ಪಡೆದಿರುವ ಆಫ್ರೀನಾ ಅಕ್ಕನಂತೆ ಬಿಕಾಂ ಮುಗಿಸಿ ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯ ಬಯಕೆ ಹೊಂದಿದ್ದರೆ, ನಸ್ರೀನಾರವರು ಬಿಬಿಎಂ ಪದವಿ ಬಳಿಕ ಎಂಬಿಎ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ನಮ್ಮ ಅಮ್ಮ ನಮ್ಮನ್ನು ಕಷ್ಟಪಟ್ಟು ಓದಿಸಿದ್ದಾರೆ. ಅವರು ಕಷ್ಟಪಡುವುದನ್ನು ನೋಡುವಾಗ ಬೇಸರವಾಗುತ್ತದೆ. ಇದೀಗ ನಾನು ಎಂಕಾಂ ಮುಗಿಸಿದ್ದೇನೆ. ಉದ್ಯೋಗ ಹುಡುಕುತ್ತಿದ್ದೇನೆ. ಆ ಮೂಲಕ ತಾಯಿ ಜವಾ ಬ್ದಾರಿಯನ್ನು ಕಡಿಮೆ ಮಾಡಬೇಕೆಂದಿದ್ದೇನೆ ಎನ್ನುತ್ತಾರೆ ಹಿರಿಯ ಪುತ್ರಿ ನೀಲೋಫರ್.

ವರದಿ ಕೃಪೆ : ವಾ.ಭಾ

Write A Comment