ಪೆರ್ಲ,ಮೇ.20 : ಕಾಸರಗೋಡು ತಳಿ ಹಸುಗಳ ಸಂರಕ್ಷಣೆಯ ದೃಷ್ಟಿಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ಬಜಕೂಡ್ಲು ‘ಅಮೃತಧಾರಾ’ ಗೋಶಾಲೆಯ ನೂತನ ಕಟ್ಟಡದ ‘ಸುರಭಿ ಸಮರ್ಪಣಮ್’ ಕಾರ್ಯಕ್ರಮದ ವಿಶೇಷ ಆಕರ್ಷಣೆ ‘ವಿಷ್ಣು’ ಹೋರಿ. ಏಳು ವರ್ಷದ ಈ ಹೋರಿ ಈಗಾಗಲೇ 76 ಬಾರಿ ಕಾಸರಗೋಡು ತಳಿಯ ವಿವಿಧ ಗೋವುಗಳಿಗೆ ವೀರ್ಯ ದಾನವನ್ನು ಮಾಡಿದ್ದು ತಳಿ ಸಂರಕ್ಷಣೆಯ ನಿಟ್ಟಿನಲ್ಲಿ ಮಹತ್ವದ ಕಾರ್ಯವನ್ನು ಕೈಗೊಂಡಿದೆ.
“ಕಾಸರಗೋಡು ತಳಿಯ ಹೋರಿಗೆ ಇರಬೇಕಾದ ಎಲ್ಲ ಗುಣಲಕ್ಷಣಗಳು ಎಳವೆಯಲ್ಲಿಯೇ ಈ ಹೋರಿಗೆ ಇದ್ದುದರಿಂದ ಸಹಜ ಗರ್ಭಧಾರಣೆಗಾಗಿ ಆಯ್ಕೆಮಾಡಿದ್ದೆವು. ಹಿಂದಿನ ಕಾಲದಲ್ಲಿ ಗರ್ಭಧಾರಣೆಗೆ ಸಿದ್ಧವಾಗಿದ್ದ ಹಸುಗಳನ್ನು ಹೋರಿ ಇದ್ದಲ್ಲಿಗೆ ಕೊಂಡೊಯ್ಯಬೇಕಾಗುತ್ತಿತ್ತು, ಇದು ತ್ರಾಸದಾಯಕವೂ ಆಗಿತ್ತು. ಆದರೆ ಈ ವ್ಯವಸ್ಥೆಯಲ್ಲಿ ಅಗತ್ಯದ ಬದಲಾವಣೆಯನ್ನು ತಂದು ಕಾಸರಗೋಡು ಗೋವುಗಳು ಇರುವಲ್ಲಿಗೆ ಹೋಗಿ ಗರ್ಭಧಾರಣೆ ಮಾಡಲು ಅನುಕೂಲವಾಗುವಂತೆ ಸಂಚಾರಿ ವಾಹನದ ವ್ಯವಸ್ಥೆಯನ್ನು ಉಪಯೋಗಿಸಿ ಹೋರಿಯನ್ನು ಸಜ್ಜುಗೊಳಿಸಿರುವುದು ಹೆಚ್ಚು ಅನುಕೂಲಕರವಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಮಹಾಮಂಡಲ ಅಧ್ಯಕ್ಷ, ಪಶುವೈದ್ಯ ಡಾ|ವೈ.ವಿ.ಕೃಷ್ಣಮೂರ್ತಿ ಅಭಿಪ್ರಾಯಪಡುತ್ತಾರೆ.
ಕೇವಲ ದೇಸೀ ತಳಿಯ ಉಳಿವಿಗಾಗಿ ಈ ವ್ಯವಸ್ಥೆಯನ್ನು ಏರ್ಪಡಿಸಿದ್ದು ಮಿಶ್ರತಳಿಗಳಿಗೆ ಈ ಸೌಕರ್ಯವನ್ನು ನಿರಾಕರಿಸಲಾಗಿದೆ. ಗೋಶಾಲೆಯ ನೂತನ ಯೋಜನೆಗಳಲ್ಲಿ ಒಂದಾಗಿರುವ ಈ ವ್ಯವಸ್ಥೆಯಲ್ಲಿ ಕೇವಲ ಮೂರು ಹಸುಗಳಿಗೆ ಮಾತ್ರ ಪ್ರಥಮ ಪ್ರಯತ್ನದಲ್ಲಿ ಯಶಸ್ಸು ಕಂಡಿರಲಿಲ್ಲ. ಅಂದರೆ ತೊಂಭತ್ತೈದು ಶೇಕಡಾಕ್ಕಿಂತಲೂ ಅಧಿಕ ಧನಾತ್ಮಕ ಫಲಿತಾಂಶವನ್ನು ‘ವಿಷ್ಣು’ ಹೋರಿ ನೀಡಿದೆ. ಗೋಸೇವಾ ಕಾರ್ಯಕರ್ತರಾದ ಗಣೇಶ ಮುಣ್ಚಿಕ್ಕಾನ (9496420431) ಮತ್ತು ಗಣರಾಜ ಕಡಪ್ಪು (8281173525) ಈ ವ್ಯವಸ್ಥೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದು ಮೇ 21 ರಿಂದ 23 ರ ತನಕ ಬಜಕೂಡ್ಲು ಗೋಶಾಲೆಯಲ್ಲಿ ನಡೆಯುವ ‘ಸುರಭಿ ಸಮರ್ಪಣಮ್’ ಕಾರ್ಯಕ್ರಮದಲ್ಲಿ ಈ ಹೋರಿಯ ಉಪಸ್ಥಿತಿ ಇರಲಿದೆ.
