ಕನ್ನಡ ವಾರ್ತೆಗಳು

ಜವುಳಿ ಅಂಗಡಿ ಅಕಸ್ಮಿಕ ಬೆಂಕಿ :ಸುಮಾರು 15 ಲಕ್ಷ ರೂ. ನಷ್ಟ.

Pinterest LinkedIn Tumblr

Bntwl_colthstor_fire_1

ಬಂಟ್ವಾಳ,ಮೇ.15 : ಪಾಣೆಮಂಗಳೂರು ಪೇಟೆಯ ಅಂಗಡಿಯೊಂದರಲ್ಲಿ ಗುರುವಾರ ಆಕಸ್ಮಿಕ ಬೆಂಕಿ ತಗುಲಿ ಅನಾಹುತ ಸಂಭವಿಸಿದೆ. ಅನಾಹುತದಿಂದ ಸುಮಾರು 15 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂಗಡಿ ಮಾಲೀಕ ಅಬ್ದುಲ್ ಖಾದರ್ ಅವರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಠಾಣಾಧಿಕಾರಿ ನಂದಕುಮಾರ್, ಗ್ರಾಮಲೆಕ್ಕಾಧಿಕಾರಿ ಎ.ಪಿ.ಭಟ್, ಪುರಸಭಾ ಸದಸ್ಯರಾದ ಚಂಚಲಾಕ್ಷಿ, ಮಹಮ್ಮದ್ ಇಕ್ಬಾಲ್ ಮತ್ತಿತರು ಭೇಟಿ ನೀಡಿದ್ದಾರೆ.

ಪಾಣೆಮಂಗಳೂರು ಪೇಟೆಯ ಸಿಂಡಿಕೇಟ್ ಬ್ಯಾಂಕ್ ಸಮೀಪ ಇರುವ ಜವುಳಿ ಅಂಗಡಿಯಲ್ಲಿ ಮುಂಜಾನೆ 3.45ರ ಸುಮಾರಿಗೆ ಬೆಂಕಿ ಉರಿಯುವುದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಲು ತೊಡಗಿದರು. ಆದರೆ ಅರ್ಧದಲ್ಲಿ ನೀರು ಖಾಲಿಯಾಗಿದ್ದರಿಂದ, ನೀರು ತುಂಬಿಸಲು ಮತ್ತೆ ಬಂಟ್ವಾಳಕ್ಕೆ ಹಿಂತಿರುಗಿದರು. ಈ ಮಧ್ಯೆ ಅಂಗಡಿ ಭಾಗಶಃ ಬೆಂಕಿಗೆ ಸುಟ್ಟು ಹೋಗಿದೆ ಎಂದು ಸ್ಥಳೀಯ ನಿವಾಸಿ ಮುಸ್ತಫಾ ಮುಂತಾದವರು ತಿಳಿಸಿದ್ದಾರೆ.

Bntwl_colthstor_fire_2 Bntwl_colthstor_fire_3 Bntwl_colthstor_fire_4 Bntwl_colthstor_fire_6 Bntwl_colthstor_fire_7

ಬೆಂಕಿ ಅನಾಹುತಕ್ಕೆ ವಿದ್ಯುತ್ ಶಾರ್ಟ್‌ಸರ್ಕ್ಯೂಟ್ ಕಾರಣ ಎಂದು ಹೇಳಲಾಗುತ್ತಿದರೂ, ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳು ಕಾರಣವೇನೆಂದು ದೃಢೀಕರಿಸಿಲ್ಲ. ಅಂಗಡಿಯ ಸಮೀಪದ ಕಟ್ಟಡದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿರುವ ಲಕ್ಷಣ ಕಾಣಿಸುತ್ತಿಲ್ಲ ಎಂದವರು ತಿಳಿಸಿದ್ದಾರೆ. ಘಟನೆಯಿಂದಾಗಿ ಅಂಗಡಿಯಲ್ಲಿದ್ದ ಬಟ್ಟೆಬರೆ ಮಳಿಗೆ, ಪೀಠೋಪಕರಣ, ಮೇಲ್ಛಾವಣಿ, ವಿದ್ಯುತ್ ವಯರಿಂಗ್ ಸುಟ್ಟು ಹೋಗಿದ್ದು, ಸುಮಾರು 15 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಅಂಗಡಿಗೆ ಆಕಸ್ಮಿಕ ಬೆಂಕಿ ಬಿದ್ದಿರುವ ಘಟನೆಗೆ ತಕ್ಷಣದ ಕಾರಣಗಳು ಗೋಚರಿಸುತ್ತಿಲ್ಲ. ವಿದ್ಯುತ್ ಶಾರ್ಟ್‌ಸರ್ಕ್ಯೂಟ್ ಎಂದು ಹೇಳಿದ್ದರೂ, ಪೊಲೀಸರು ಅದನ್ನು ನಿರಾಕರಿಸುತ್ತಿದ್ದಾರೆ. ಮುಂಜಾನೆ 3.30ರ ಹೊತ್ತಿಗೆ ಆಕಸ್ಮಿಕ ಬೆಂಕಿ ಸ್ಪರ್ಶಿಸಲು ಹೇಗೆ ಸಾಧ್ಯ ಎಂದು ಸ್ಥಳೀಯ ನಿವಾಸಿಗಳು ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

Write A Comment