ಕನ್ನಡ ವಾರ್ತೆಗಳು

ತೊಕ್ಕೊಟ್ಟು ಶಾಲೆಯ ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ: ವೈದ್ಯಕೀಯ ವರದಿ ಬಹಿರಂಗ ಪಡಿಸಲು ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ ಆಗ್ರಹ

Pinterest LinkedIn Tumblr

Ashraf_Press_Meet_1

ಮಂಗಳೂರು, ಮೇ 12: ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ಖಾಸಗಿ ಆಂಗ್ಲಮಾಧ್ಯಮ ಶಾಲೆಯೊಂದರ ಮೂರುವರೆ ವರ್ಷದ ಮಗುವಿನ ಮೇಲೆ ಅದೇ ಶಾಲೆಯ ವಾಹನ ಚಾಲಕ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದನೇ ಎಂಬ ಪ್ರಕರಣಕ್ಕೆ ಸಂಬಂಧಿಸಿದ ವೈದ್ಯಕೀಯ ವರದಿಯನ್ನು ಬಹಿರಂಗಪಡಿಸಬೇಕೆಂದು ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಕೆ. ಅಶ್ರಫ್ ಒತ್ತಾಯಿಸಿದ್ದಾರೆ.

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾಡಳಿತವು ಪ್ರಕಟಿಸಿದ್ದ ತನಿಖಾ ವರದಿಯು ಅಪೂರ್ಣವಾಗಿದ್ದು, ವರದಿಯಲ್ಲಿ ಸಂತ್ರಸ್ತರ ಹೇಳಿಕೆಯನ್ನು ತಿರುಚಲಾಗಿದ್ದು, ಅನೇಕ ಗೊಂದಲಗಳಿಂದ ಕೂಡಿದೆ ಎಂದು ಆರೋಪಿಸಿದರು.

ಅನ್ಯಾಯಕ್ಕೊಳಗಾದ ಮಗುವಿನ ಪರವಾಗಿ ನಿಲ್ಲಬೇಕಿದ್ದ ಶಾಲಾ ಆಡಳಿತ ಮಂಡಳಿ ಬೇಜವಾಬ್ದಾರಿಯುತವಾಗಿ ವರ್ತಿಸಿದ್ದು, ಘಟನೆಗೆ ಬೇರೆ ಬೇರೆ ವ್ಯಾಖ್ಯಾನವನ್ನು ನೀಡುವ ಮೂಲಕ ಜನರ ಹಾಗೂ ಹೆತ್ತವರ ದಾರಿ ತಪ್ಪಿಸುತ್ತಿದೆ. ಮಾಜಿ ಪೊಲೀಸ್ ಅಧಿಕಾರಿಯ ಅಧೀನದಲ್ಲಿರುವ ಈ ಶಾಲೆ ತಮ್ಮ ವರ್ಚಸ್ಸು ಮತ್ತು ಪ್ರಭಾವವನ್ನು ಬಳಸಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಅಶ್ರಫ್ ಆರೋಪ ಮಾಡಿದರು.

Ashraf_Press_Meet_2

ಸತ್ಯ ಶೋಧನಾ ಸಮಿತಿಯ ವರದಿ ಮಾಧ್ಯಮಕ್ಕೆ ಬಿಡುಗಡೆ

ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟವು ಸ್ವತಂತ್ರ ಸತ್ಯಶೋಧನಾ ಸಮಿತಿಯನ್ನು ರಚಿಸಿ ಪ್ರಕರಣದ ಬಗ್ಗೆ ತನಿಖೆ ನಡೆಸಿ ವಿಸ್ತೃತ ವರದಿಯನ್ನು ತಯಾರಿಸಿದ್ದು, ಪ್ರಸ್ತುತ ಸಮಿತಿಯ ವರದಿಯನ್ನು ಈ ಸಂದರ್ಭದಲ್ಲಿ ಮಾಧ್ಯಮದವರಿಗೆ ಬಿಡುಗಡೆಗೊಳಿಸಲಾಯಿತು. ಸರಕಾರ ತಯಾರಿಸಿದ ವರದಿ ಮತ್ತು ಸತ್ಯಶೋಧನಾ ಸಮಿತಿಯ ವರದಿಗೆ ಅಜಗಜಾಂತರ ವ್ಯತ್ಯಾಸವಿದ್ದು, ಇದನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಗಿದೆ ಎಂದು ಅಶ್ರಫ್ ಹೇಳಿದರು.

ಪ್ರಕರಣದ ತನಿಖೆಯನ್ನು ತೀವ್ರಗೊಳಿಸಲು ಮತ್ತು ಶೈಕ್ಷಣಿಕ ಸಂಸ್ಥೆಯ ವಿರುದ್ಧ ಕ್ರಮಕೈಗೊಳ್ಳಲು ಒತ್ತಾಯಿಸಿ ಒಕ್ಕೂಟದ ಸದಸ್ಯರು ಸಚಿವ ಯು.ಟಿ.ಖಾದರ್, ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಶಾಸಕರಾದ ಮೊಯ್ದಿನ್ ಬಾವ ಮತ್ತು ಜೆ.ಆರ್.ಲೊಬೊ, ಸಂಸದ ನಳಿನ್ ಕುಮಾರ್ ಕಟೀಲ್‌ ಅವರಿಗೆ ಸತ್ಯಶೋಧನಾ ಸಮಿತಿಯ ವರದಿ ಅನುಷ್ಠಾನ ಮಾಡುವಂತೆ ಮನವಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲಾಡಳಿತ, ಜನಪ್ರತಿನಿಧಿಗಳು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ತನಿಖೆಯನ್ನು ತೀವ್ರಗೊಳಿಸಿ, ಜನರು ಮತ್ತು ಮಗುವಿನ ಹೆತ್ತವರಲ್ಲಿರುವ ಗೊಂದಲವನ್ನು ನಿವಾರಿಸಬೇಕು. ಅಲ್ಲದೆ ತಪ್ಪಿತಸ್ಥ ಶಿಕ್ಷಣ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅಶ್ರಫ್ ಒತ್ತಾಯಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ಜನಪ್ರತಿನಿಧಿಗಳು ನಿರ್ಲಕ್ಷ ವಹಿಸಿದ್ದಲ್ಲಿ ಹಂತ ಹಂತವಾಗಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು.

Ashraf_Press_Meet_3

ವಕೀಲ ಮುಹಮ್ಮದ್ ಹನೀಫ್ ಯು., ದ.ಕ. ಜಿಲ್ಲಾ ಜೆಡಿಎಸ್ ಮೀನುಗಾರಿಕಾ ಘಟಕದ ಕಾರ್ಯಾಧ್ಯಕ್ಷ ಎಸ್.ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ, ಬ್ಯಾರಿ ಪರಿಷತ್ ಉಪಾಧ್ಯಕ್ಷ ಹಮೀದ್ ಕುದ್ರೋಳಿ, ಯುನಿವೆಫ್‌ನ ರಫೀವುದ್ದೀನ್ ಕುದ್ರೋಳಿ, ಪಿಎಫ್‌ಐ ಜಿಲ್ಲಾಧ್ಯಕ್ಷ ಹನೀಫ್, ಸಾಮ್ನಾ ಗ್ರೂಪ್‌ನ ಅಧ್ಯಕ್ಷ ಶಂಸುದ್ದೀನ್ ಕುದ್ರೋಳಿ, ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ಘಟಕದ ಅಧ್ಯಕ್ಷೆ ಸಾಜಿದಾ ಮೂಮಿನ್, ಅನುಪಮ ಮಾಸಿಕದ ಸಂಪಾದಕಿ ಶಹನಾಝ್ ಎಂ., ಜಮಾಅತೆ ಇಸ್ಲಾಮೀ ಹಿಂದ್‌ನ ಸೈಯದ್ ಇಸ್ಮಾಯೀಲ್, ಬಂದರ್ ಮುಸ್ಲಿಂ ಒಕ್ಕೂಟದ ಸದಸ್ಯ ನೌಶಾದ್ ಬಂದರ್, ಕ್ಯಾಂಪಸ್ ಫ್ರಂಟ್‌ನ ಫಯಾಝ್ ಮಂಜನಾಡಿ, ಸೆಂಟ್ರಲ್ ಕಮಿಟಿಯ ಯು.ಎನ್.ಬಾವ, ಮುನವ್ವರ್ ಬಂದರ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Write A Comment