ಕನ್ನಡ ವಾರ್ತೆಗಳು

ನಿರ್ಲಕ್ಷಿಸದಿರಿ ಕಿಡ್ನಿ

Pinterest LinkedIn Tumblr

bhec18kidney

-ಡಾ. ಗುರುಲಿಂಗಪ್ಪ ಅಂಕದ
ನಮ್ಮ ದೇಹದಲ್ಲಿ ಅವಿರತವಾಗಿ ಕಾರ್ಯ ನಿರ್ವಹಿಸುವ ಅಂಗಗಳೆಂದರೆ ಮೂತ್ರಪಿಂಡ  ಹಾಗೂ ಹೃದಯ. ಹೃದಯವು ರಕ್ತ ಸರಬರಾಜು ಮಾಡುವಲ್ಲಿ ನಿರತವಾಗಿರುತ್ತದೆ. ಮೂತ್ರಪಿಂಡವು ರಕ್ತವನ್ನು ಶುದ್ಧೀಕರಿಸುವ, ವಿಷಕಾರಿ ಅಂಶಗಳನ್ನು ಹೊರಹಾಕುವ ಮತ್ತು ದೇಹದಲ್ಲಿನ ದ್ರವದ ಸಮತೋಲನ ಕಾಪಾಡುವಲ್ಲಿ ಇವು ಮುಖ್ಯ ಪಾತ್ರ ವಹಿಸುತ್ತವೆ.

ಮೂತ್ರಪಿಂಡಗಳ ಆರೋಗ್ಯ ಕಾಪಾಡಿಕೊಂಡರೆ ಮನುಷ್ಯ ಸಂಪೂರ್ಣವಾಗಿ ಸ್ವಸ್ಥನಾಗಿರಬಹುದು. ಹೃದಯ ವೈಫಲ್ಯದಂತೆ ಈಗ ಸರ್ವೇಸಾಮಾನ್ಯವಾಗಿ ಕೇಳಿಬರುತ್ತಿರುವ ಮರಣಕ್ಕೆ ಮತ್ತೊಂದು ಕಾರಣ ಈ ಕಿಡ್ನಿ ವೈಫಲ್ಯ. ಹೃದಯಾಘಾತದ ಸಾವು ನಿಮಿಷ-ಗಂಟೆಗಳಲ್ಲಿ ಜರುಗಿದರೆ, ಕಿಡ್ನಿ ವೈಫಲ್ಯದಿಂದಾಗುವ ಸಾವು ನಿಧಾನವಾಗಿರುತ್ತದೆ. ಹೌದು! ಮೂತ್ರ ಪಿಂಡಗಳ ವೈಫಲ್ಯಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ದಿನೇ-ದಿನೇ ಹೆಚ್ಚುತ್ತಿದೆ. ಇದಕ್ಕೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಪ್ರಮುಖ ಕಾರಣ. ಪ್ರತಿ ಮೂವರು ಮಧುಮೇಹಿಗಳಲ್ಲಿ ಒಬ್ಬರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ.

ದೇಹದಲ್ಲಿ ಪ್ರತಿ ಕ್ಷಣವೂ ಕಾರ್ಯನಿರ್ವಹಿಸುವ ಮೂತ್ರಪಿಂಡಗಳು ಹಠಾತ್ ಆಗಿ ಅಥವಾ ಕ್ರಮೇಣವಾಗಿ ಕಾರ್ಯನಿಲ್ಲಿಸುವ ಸ್ಥಿತಿಯನ್ನು  ಕಿಡ್ನಿ ವೈಫಲ್ಯ ಎನ್ನುತ್ತಾರೆ. ಇದರಲ್ಲಿ ಎರಡು ವಿಧ-ತೀವ್ರ ಮೂತ್ರಪಿಂಡ ವೈಫಲ್ಯ (ಎಕ್ಯೂಟ್ ರೀನಲ್ ಫೇಲ್ಯೂರ್) ಹಾಗು ದೀರ್ಘಕಾಲಿಕ ಮೂತ್ರಪಿಂಡ ವೈಫಲ್ಯ (ಕ್ರೊನಿಕ್ ರೀನಲ್ ಫೇಲ್ಯೂರ್). ಇನ್ನು ಕಿಡ್ನಿ ವೈಫಲ್ಯಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ಮೇಲೆ ಹೇಳಿದಂತೆ ಶೇ.50-60 ರಷ್ಟು ಪ್ರಕರಣಗಳಲ್ಲಿ ಮಧುಮೇಹ ಕಾರಣವಾದರೆ, ಶೇ.20ರಷ್ಟು ಕಾರಣ ಅಧಿಕ ರಕ್ತದೊತ್ತಡ ಹಾಗು ಶೇ. 20-30ರಷ್ಟು ಇತರ ಕಾರಣಗಳಿಂದ ಕಿಡ್ನಿ ವೈಫಲ್ಯವಾಗುತ್ತದೆ. ಅಂದರೆ ಆಧುನಿಕ ಜೀವನಶೈಲಿ, ಅನಾರೋಗ್ಯಕರವಾದ ಆಹಾರ ಸೇವನೆ, ಅನವಶ್ಯಕ ನೋವುನಿವಾರಕ ಮಾತ್ರೆ (ನಾನ್ ಸ್ಟೀರಾಯಡಲ್ ಆಂಟಿ ಇನ್ ಫ್ಲಮೇಟರಿ ಡ್ರಗ್ಸ್)ಗಳ ಸೇವನೆ ಮುಂತಾದವು.

ಮೂತ್ರಪಿಂಡಗಳು ವಿಫಲವಾದಾಗ ದೇಹದಲ್ಲಿ ಹಾನಿಕಾರಕ ತ್ಯಾಜ್ಯಗಳು ಸೇರಿಕೊಳ್ಳುತ್ತವೆ ಮತ್ತು ಹೆಚ್ಚಿನ ದ್ರವ ದೇಹದಲ್ಲೇ ಉಳಿಯುವುದಲ್ಲದೇ ಸೂಕ್ತ ಪ್ರಮಾಣದಲ್ಲಿ ಕೆಂಪು ರಕ್ತಕಣಗಳು ಉತ್ಪನ್ನವಾಗುವುದಿಲ್ಲ. ಇಂತಹ ರೋಗಿಗೆ ಡಯಾಲಿಸಿಸ್ ಅಥವಾ ಮೂತ್ರಪಿಂಡದ ಮರುಜೋಡಣೆ (ಕಿಡ್ನಿ ಟ್ರಾನ್ಸ್ ಪ್ಲಾಂಟ್) ಮಾತ್ರ ಸೂಕ್ತ ಚಿಕಿತ್ಸೆಗಳಾಗುತ್ತವೆ. ಇದು ರೋಗಿಯ ಮತ್ತು ಕುಟುಂಬದವರನ್ನು ಆತಂಕಕ್ಕೆ ದೂಡುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ  ಕಿಡ್ನಿ ವೈಫಲ್ಯಕ್ಕೆ ಒಳಗಾದ ರೋಗಿ ವಾರದಲ್ಲಿ ಕನಿಷ್ಟ 3 ಬಾರಿಯಾದರೂ ಡಯಾಲಿಸಿಸ್‌ಗೆ ಒಳಪಡಬೇಕಾಗುತ್ತದೆ. ಪ್ರತಿ ಡಯಾಲಿಸಿಸ್‌ಗೆ ಕನಿಷ್ಟ ಒಂದು ಸಾವಿರ ರೂಪಾಯಿ ಹಾಗು ರೋಗಿಯ ಹಿಮೋಗ್ಲೋಬಿನ್ ಕಡಿಮೆಯಾಗುವುದರಿಂದ ವಾರಕ್ಕೆ ಒಮ್ಮೆ ಹಿಮೋಗ್ಲೋಬಿನ್ ಹೆಚ್ಚಿಸುವ ಚುಚ್ಚುಮದ್ದು ಹಾಕಿಸಬೇಕು ಇವೂ  ದುಬಾರಿಯಾಗಿವೆ.

ಕಿಡ್ನಿ ವೈಫಲ್ಯದ ಲಕ್ಷಣ
ಪ್ರಾಥಮಿಕ ಹಂತದಲ್ಲಿ ಯಾವುದೇ ಲಕ್ಷಣಗಳು ಕಂಡುಬರದೇ ಇರಬಹುದು. ಸಮಸ್ಯೆ ಉಲ್ಬಣಿಸಿದ ನಂತರ ಲಕ್ಷಣಗಳು ಗೋಚರಿಸಲಾರಂಭಿಸುತ್ತವೆ.  ವೈದ್ಯರ ಬಳಿ ಬರುವ ವೇಳೆಗೆ ಕಿಡ್ನಿಗಳಿಗೆ ಹಾನಿಯುಂಟಾಗಿರುತ್ತದೆ. ಪದೇ-ಪದೇ ಮೂತ್ರ ವಿಸರ್ಜನೆ, ಮುಖ-ಪಾದಗಳಲ್ಲಿ ಊತ, ಬೆನ್ನಿನಲ್ಲಿ ನೋವು, ನಿಶ್ಯಕ್ತಿ ಮುಂತಾದವು. ಇವುಗಳಲ್ಲಿ ಯಾವುದೇ ಲಕ್ಷಣಗಳು ಕಂಡುಬಂದರೂ ತಕ್ಷಣ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.

ರಕ್ತದಲ್ಲಿ ಕ್ರಿಯಾಟಿನಿನ್, ಮೂತ್ರದಲ್ಲಿ ಅಲ್ಬುಮಿನ್ ಇವೆರಡನ್ನು ನೋಡಿಕೊಂಡು ಜಿ.ಎಫ್.ಆರ್ (ಗ್ಲೊಮೆರುಲಾರ್ ಫಿಲ್ಟರೇಷನ್ ರೇಟ್)ನ್ನು ಪರೀಕ್ಷಿಸಬಹುದು. ಈ ಪರೀಕ್ಷೆ  ನಮ್ಮ ಕಿಡ್ನಿಯಲ್ಲಿರುವ ಶೋಧಕ ಭಾಗವು ಒಂದು ನಿಮಿಷದಲ್ಲಿ ಎಷ್ಟು ರಕ್ತವನ್ನು ಸೋಸುತ್ತಿದೆ ಎಂದು ತಿಳಿಸುತ್ತದೆ. ರಕ್ತದಲ್ಲಿ ಕ್ರಿಯಾಟಿನಿನ್ 1.5ಕ್ಕಿಂತ ಕಡಿಮೆ ಪ್ರಮಾಣದಲ್ಲಿರಬೇಕು ಹಾಗು ಜಿ.ಎಫ್.ಆರ್ 100-120ಎಂ ಎಲ್/ಮಿನಿಟ್ ಇರಬೇಕು.

ಆದರೆ  ಜಿ.ಎಫ್.ಆರ್ 50-60 ಮಟ್ಟಕ್ಕಿಳಿದರೂ ರಕ್ತದಲ್ಲಿ ಕ್ರಿಯಾಟಿನಿನ್ ಮಟ್ಟ ಹೆಚ್ಚಾಗದು. ಆದರೂ ದೇಹದಲ್ಲಿ ತೊಂದರೆ ಪ್ರಾರಂಭವಾಗಿರುತ್ತದೆ. ಮಧುಮೇಹಿಗಳ ಮೂತ್ರದಲ್ಲಿ ಅಲ್ಬುಮಿನ್ ಎ ಸ್ವಲ್ಪ ಹೆಚ್ಚಾಗಿರುವುದು ಕಂಡುಬಂದರೂ ತಕ್ಷಣ ಚಿಕಿತ್ಸೆ ಪಡೆದರೆ ಮೂತ್ರಪಿಂಡ ಕಾಯಿಲೆ ತಡೆಗಟ್ಟಬಹುದು. ಸಾಧಾರಣವಾಗಿ ನಮ್ಮ ಕಿಡ್ನಿಗಳು ರಾತ್ರಿ ವೇಳೆ ಕಡಿಮೆ ಮೂತ್ರ ಉತ್ಪತ್ತಿ ಮಾಡುತ್ತವೆ ಆದರೆ ಕಿಡ್ನಿ ವೈಫಲ್ಯ ಪೀಡಿತರು ರಾತ್ರಿ ಸಮಯ ಹೆಚ್ಚು ಮೂತ್ರ ವಿಸರ್ಜನೆ ಮಾಡುವರು. ಇದು ಕಿಡ್ನಿ ವೈಫಲ್ಯದ ಮುಖ್ಯ ಲಕ್ಷಣಗಳಲ್ಲೊಂದು.

ಮಾನವನನ್ನು  ಆರೋಗ್ಯವಾಗಿಡಲು ಒಂದು ಮೂತ್ರಪಿಂಡ ಸಾಕು ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಒಂದು ಕಿಡ್ನಿ ಅರ್ಧದಷ್ಟು ಮಾತ್ರ ಕೆಲಸ ಮಾಡುತ್ತದೆ ಎಂಬುದು ತಪ್ಪು ಕಲ್ಪನೆ. ವಾಸ್ತವದಲ್ಲಿ ಒಂದು ಸಾವಿರ ಜನರಲ್ಲಿ ನಾಲ್ಕು ಜನ ಒಂದೇ ಕಿಡ್ನಿಯೊಂದಿಗೆ ಹುಟ್ಟುತ್ತಾರೆ ಹಾಗು ಅವರೂ ಸಾಮಾನ್ಯರಂತೆಯೇ ಜೀವಿಸುತ್ತಿದ್ದಾರೆಂದು ಮರೆಯಬಾರದು.

ಮೂತ್ರಪಿಂಡ ದಾನ ಶ್ರೇಷ್ಠ ದಾನ. ಕಣ್ಣು, ಹೃದಯ ಮುಂತಾದ ಅಂಗಗಳನ್ನು ನಮ್ಮ ಮರಣಾನಂತರ ದಾನಮಾಡಬಹುದು ಆದರೆ ಮೂತ್ರಪಿಂಡಗಳನ್ನು ಬದುಕಿರುವಾಗಲೂ ದಾನಮಾಡಬಹುದು. ಇದರಿಂದ ದಾನಿಯ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮವಿಲ್ಲ. ದಾಂಪತ್ಯ ಜೀವನಕ್ಕೆ, ಸಂತಾನ ಪಡೆಯುವುದಕ್ಕೂ ಇದು ಅಡ್ಡಿಯಾಗಲಾರದು. ಇಷ್ಟೆಲ್ಲ ತಿಳಿದಿದ್ದರೂ ಬಹುತೇಕ ಸಂದರ್ಭಗಳಲ್ಲಿ ರೋಗಿಯ ಸಂಬಂಧಿಕರು ಮೂತ್ರಪಿಂಡ ದಾನಕ್ಕೆ ಮುಂದೆ ಬರುವುದಿಲ್ಲ. ಇದಕ್ಕೆ ಕಾರಣ ಕಿಡ್ನಿ ಮರುಜೋಡಣೆಯ ಅನೇಕ ಪ್ರಕ್ರಿಯೆಗಳು, ಪರೀಕ್ಷೆಗಳು ಮತ್ತು ಬಹಳ ಸಮಯ ಬೇಕಾಗುವುದರಿಂದ ಆರಂಭದಲ್ಲಿ ಕಿಡ್ನಿದಾನಕ್ಕೆ ಒಪ್ಪಿದರೂ ನಂತರ ಇತರರ ಮಾತು ಕೇಳಿ ಹಿಂದೆ ಸರಿಯುವ ಸಾಧ್ಯತೆಗಳೇ ಹೆಚ್ಚು.

ಮೂತ್ರಪಿಂಡ ಮರುಜೋಡಣೆಯಲ್ಲಿಯ ತೊಂದರೆಗಳೆಂದರೆ ದಾನಿಗಳು ಸಿಗುವುದು ಕಷ್ಟ, ಸಾಮಾನ್ಯ ಜನರಿಗೆ ಚಿಕಿತ್ಸಾ ವೆಚ್ಚವೂ ಹೊರೆಯಾಗಬಹುದು, ಜೀವನ ಪರ್ಯಂತ ಔಷಧಗಳ ಸೇವನೆ ಮತ್ತು ಕಿಡ್ನಿ ಕಸಿಗೆ ಒಳಗಾದವರಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚು.

ಮೂತ್ರಪಿಂಡ ಆರೋಗ್ಯಕ್ಕೆ ಸಲಹೆ
ಮಾಂಸಾಹಾರಕ್ಕಿಂತ ಶಾಖಾಹಾರ ಒಳ್ಳೆಯದು, ವ್ಯಾಯಾಮ ಹಾಗು ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಿ, ಧೂಮಪಾನ-ಮದ್ಯಪಾನ ಹೃದಯ ಹಾಗು ಶ್ವಾಸಕೋಶಕ್ಕೆ ಮಾತ್ರವಲ್ಲ ಮೂತ್ರಕೋಶಕ್ಕೂ ಮಾರಕ, ಅತಿಯಾದ ನೋವುನಿವಾರಕ ಮಾತ್ರೆಗಳೂ ಸಹ ಕಿಡ್ನಿಗೆ ಹಾನಿಯುಂಟುಮಾಡಬಲ್ಲವು.

ಕಾರಣ ವೈದ್ಯರ ಸಲಹೆ ಇಲ್ಲದೇ ಅವುಗಳ ಸೇವನೆ ಬೇಡ, ಕ್ರೀಮ್ ಮುಂತಾದ ಬಾಹ್ಯ ಲೇಪನಗಳಿಂದ ನೋವು ಶಮನಗೊಳಿಸಲು ಪ್ರಯತ್ನಿಸಿ. ಅಧಿಕ ರಕ್ತದೊತ್ತಡ, ಮಧುಮೇಹ, ಅಸಾಮಾನ್ಯ ಕೊಬ್ಬಿನಾಂಶವಿದ್ದರೆ ವರ್ಷಕ್ಕೊಮ್ಮೆಯಾದರೂ ಪರೀಕ್ಷೆ ಮಾಡಿಸಿಕೊಳ್ಳಿ, ಇದಕ್ಕಾಗಿ ಜೀವನದ ವಿಶೇಷ ದಿನಗಳಾದ ಜನ್ಮದಿನ ಮುಂತಾದ ದಿನಗಳಂದು ನಿಗದಿಪಡಿಸಿಕೊಳ್ಳುವುದರಿಂದ ಖಂಡಿತ ಮರೆಯಲಾರಿರಿ.

ಕೊನೆಯದಾಗಿ ಕಿಡ್ನಿದಾನ ಮಹಾದಾನ ಆದರೆ ಮತ್ತೊಂದು ಜೀವ ಉಳಿಸುವ ಸಂದರ್ಭದಲ್ಲಿ ಮಾತ್ರ ಅದರ ಬಳಕೆಯಾಗಲಿ ಹಣಗಳಿಸಲು ಅಲ್ಲ!  ಮೂತ್ರಪಿಂಡಗಳು ಆರೋಗ್ಯವಾಗಿರುವಂತೆ ನಮ್ಮ ಜೀವನಶೈಲಿ ಆಹಾರ-ನೀರು ಸೇವನೆಯಲ್ಲಿ ಕ್ರಮಬದ್ಧತೆ ಅನುಸರಿಸುವುದು ಅಗತ್ಯ. ಅಲಕ್ಷಿಸಿದರೆ ನಿಧಾನವಾದರೂ ಸಾವು ಖಚಿತ!

Write A Comment