ವರದಿ : ಈಶ್ವರ ಎಂ. ಐಲ್
ಮುಂಬಯಿ : ಮಂಜೇಶ್ವರದ ಕನಿಲ ಶ್ರೀ ಭಗವತೀ ಕ್ಷೇತ್ರ – ಭಂಡಾರ ನಿಲಯದಲ್ಲಿ ಬ್ರಹ್ಮಕಲಶಾಭಿಶೇಕ ಹಾಗೂ ಶ್ರೀ ಕ್ಷೇತ್ರದಲ್ಲಿ ನಡಾವಳಿ ಉತ್ಸವವು ಎ. 18ರಿಂದ 22 ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ಜರಗಿತು. ಕನಿಲ ಶ್ರೀ ಭಗವತೀ ಕ್ಷೇತ್ರ ಭಂಡಾರ ನಿಲಯ,ಪುನರ್ ನಿರ್ಮಾಣ ಸಮಿತಿಯ ಅಧ್ಯಕ್ಷ ಪದ್ಮನಾಭ ಕಡಪ್ಪರ ಅವರ ಅಧ್ಯಕ್ಷತೆಯಲ್ಲಿ ಎ 21 ರಂದು ಜರಗಿದ ಧಾರ್ಮಿಕ ಸಭೆಯಲ್ಲಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಆಶ್ರೀರ್ವಚನಗೈದರು.
ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದ ಅಧ್ಯಕ್ಷರಾದ ವಾಮನ ಇಡ್ಯಾ ಅವರಿಂದ ಧಾರ್ಮಿಕ ಉಪನ್ಯಾಸ ನಡೆಯಿತು. ಮುಖ್ಯ ಅತಿಥಿಗಳಾಗಿ ಮುಂಬಯಿಯ ಉದ್ಯಮಿ, ಕನಿಲ ಶ್ರೀ ಭಗವತೀ ಕ್ಷೇತ್ರ ದ ಗೌರವ ಅಧ್ಯಕ್ಷ ರೋಹಿದಾಸ ಬಂಗೇರ, ಡಿ.ಎಚ್.ಎಫ್. ಎಲ್ ನ ಸಿ.ಇ.ಓ. ಬಿ. ಕೆ. ಮಧೂರು, ತೀಯಾ ಸಮಾಜ ಮುಂಬಯಿಯ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ, ಥಾಣೆಯ ಖ್ಯಾತ ವೈದ್ಯ ಡಾ. ದಯಾನಂದ ಕುಂಬ್ಳೆ, ತೀಯಾ ಸಮಾಜದ ಮಾಜಿ ಅಧ್ಯಕ್ಷ ಕೆ. ಪಿ. ಅರವಿಂದ, ಮುಂಬಯಿಯ ಉದ್ಯಮಿ ದಿನೇಶ್ ನಾರಾಯಣ್, ಭಾರತೀಯ ತೀಯಾ ಸಮಾಜದ ಅಧ್ಯಕ್ಷ ಸದಾಶಿವ ಉಳ್ಳಾಲ್ ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.
ಕನಿಲ ಶ್ರೀ ಭಗವತೀ ಕ್ಷೇತ್ರದ ಮುಂಬಯಿ ಸಮಿತಿಯ ಅಧ್ಯಕ್ಷರಾದ ರವಿ ಎಸ್. ಮಂಜೇಶ್ವರ್, ಶ್ರೀ ಕ್ಷೇತ್ರ ಭಂಡಾರ ನಿಲಯ, ಪುನರ್ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷರಾದ ಬಾಬು ಟಿ ಬಂಗೇರ ಹಾಗೂ ಇತರ ಗಣ್ಯರ ಉಪಸ್ಥಿತಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮುಂಬಯಿಯ ಉಮೇಶ್ ಬಿ. ಮಂಜೇಶ್ವರ್, ಬಿ. ಎಂ. ಬಾಬು, ಜೋಗೇಶ್ವರಿ ಇವರನ್ನು ಸನ್ಮಾನಿಸಲಾಯಿತು. ಎ. 22 ರಂದು ಸಾವಿರಾರು ಭಕ್ತಾಭಿಮಾನಿಗಳ ಉಪಸ್ಥಿತಿಯಲ್ಲಿ ಬ್ರಹ್ಮಕಲಶಾಭಿಶೇಕ ಮತ್ತು ಎ. 23ರಂದು ತಡ ರಾತ್ರಿ ನಡಾವಳಿ ಉತ್ಸವವು ಜರಗಿತು.