ಕನ್ನಡ ವಾರ್ತೆಗಳು

ಊಟ ಮಾಡಿಸುತ್ತಿದ್ದಾಗ ಬಾವಿಗೆ ಬಿದ್ದು 11 ತಿಂಗಳ ಮಗು ಸಾವು: ರಕ್ಷಿಸಲು ಹೋದ ತಾಯಿ ಪಾರು

Pinterest LinkedIn Tumblr

ಕುಂದಾಪುರ: ಪುಟ್ಟ ಮಗುವನ್ನು ಬಾವಿಕಟ್ಟೆಯ ಮೇಲೆ ಕೂರಿಸಿಕೊಂಡು ಊಟ ಮಾಡಿಸುತ್ತಿದ್ದ ಸಂದರ್ಭ ಮಗು ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಬುಧವಾರ ಸಂಜೆ ಕಂಡ್ಲೂರಿನಲ್ಲಿ ನಡೆದಿದೆ. ಮೃತ ಮಗುವನ್ನು ಕಂಡ್ಲೂರು ರಾಮ ಮಂದಿರ ರಸ್ತೆಯ ಸಮೀಪ ನಿವಾಸಿ ಶೇರಾಜ್ (11 ತಿಂಗಳು) ಎಂದು ಗುರುತಿಸಲಾಗಿದೆ.

Kandlur_Wel_child Dead Kandlur_Wel_child Dead (1)

ಘಟನೆಯ ವಿವರ: ಕಂಡ್ಲೂರು ರಾಮ ಮಂದಿರ ರಸ್ತೆ ನಿವಾಸಿ ಜೀಬ್ರಾ ಇಬ್ರಾಹಿಂ ಸಾಹೇಬ್ ಅವರ ಸೊಸೆ ಶಾಯಿಸ್ತಾ ಎಂಬುವರು ಬುಧವಾರ ಸಂಜೆ ಸುಮಾರು 7.30ಕ್ಕೆ ಮನೆ ಸಮೀಪದ ಬಾವಿಕಟ್ಟೆಯಲ್ಲಿ ತನ್ನ ಹನ್ನೊಂದು ತಿಂಗಳ ಗಂಡು ಮಗುವನ್ನು ಕೂರಿಸಿಕೊಂಡು ಊಟ ಮಾಡಿಸುತ್ತಿದ್ದರು. ಇದೇ ಸಂದರ್ಭ ಆಯತಪ್ಪಿದ ಮಗು ಬಾವಿಯೊಳಗೆ ಬಿದ್ದಿದೆ. ತಕ್ಷಣ ಗಾಭರಿಗೊಂಡ ತಾಯಿಯೂ ಮಗುವಿನ ರಕ್ಷಣೆಗಾಗಿ ಬಾವಿಗೆ ಧುಮಿಕಿದ್ದಾಳೆ. ಬೊಬ್ಬೆ ಕೇಳಿದ ಸ್ಥಳೀಯರು ಓಡಿ ಬಂದು ಇಬ್ಬರ ರಕ್ಷಣೆಗಾಗಿ ಯತ್ನಿಸಿದರಾದರೂ ತಾಯಿ ಮಾತ್ರ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆದರೆ ಪುಟ್ಟ ಮಗು ಶೇರಾಜ್‌ನನ್ನು ಕುಂದಾಪುರದ ಖಾಸಗೀ ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ಆತ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಮೃತ ಮಗುವಿನ ತಂದೆ ಸರ್ಫರಾಜ್ ದುಬೈನಲ್ಲಿ ಉದ್ಯೋಗದಲ್ಲಿದ್ದು, ಮನೆಯಲ್ಲಿ ಜೀಬ್ರಾ ಇಬ್ರಾಹಿಂ ಸಾಬ್, ಆಕೆಯ ಪತ್ನಿ ಹಾಗೂ ಸೊಸೆ ಶಾಯಿಸ್ತಾ ಮತ್ತು ಪುಟ್ಟ ಮಗು ಇದ್ದರು. ಇದೀಗ ಮಗುವಿನ ಮರಣದ ನಂತರ ಮನೆ ಮಸಣವಾದಂತಾಗಿದೆ. ಬುಧವಾರ ರಾತ್ರಿಯೇ ಮಗುವಿನ ದಫನ ಕ್ರಿಯೆ ನಡೆಯಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Write A Comment