ಕನ್ನಡ ವಾರ್ತೆಗಳು

ಸೃಜನಶೀಲರೆಲ್ಲಾ ಹುಚ್ಚರೇ…?

Pinterest LinkedIn Tumblr

kbec16creativity

ಸೃಜನಶೀಲತೆಗೂ ಹುಚ್ಚಿಗೂ ಇರುವ ನಂಟು ಬಹಳ ಹಳೆಯದು. ಕಲಿಗಳು, ಕಲಾವಿದರು, ವಿಜ್ಞಾನಿಗಳೆಲ್ಲರೂ ಒಂದಲ್ಲಾ ಒಂದು ಹಂತದಲ್ಲಿ ‘ಹುಚ್ಚ’ ಎಂದು ಕರೆಸಿಕೊಂಡಿರುತ್ತಾರೆ. ಇದು ಕೇವಲ ಸೃಜನಶೀಲ ಕ್ರಿಯೆಯೊಂದರ ಕುರಿತು ಅರಿವಿಲ್ಲದವರು ಹೇಳುವ ಮಾತು ಎಂದು ಭಾವಿಸುವಂತಿಲ್ಲ. ಆರ್ನಾಲ್ಡ್ ಲುಡ್ವಿಗ್ ಎಂಬ ಮನಃಶಾಸ್ತ್ರಜ್ಞ ಸೃಜನಶೀಲತೆ ಮತ್ತು ಮನೋವ್ಯಾಧಿಗಳ ನಡುವಣ ಸಂಬಂಧದ ಕುರಿತಂತೆ ನಡೆಸಿದ ಬೃಹತ್ ಅಧ್ಯಯನದ ಫಲಿತಾಂಶಗಳನ್ನು ನೋಡಿ.

ಇದರ ಪ್ರಕಾರ ಪ್ರಸಿದ್ಧ ಕವಿಗಳಲ್ಲಿ ಶೇಕಡಾ 87ರಷ್ಟು ಪ್ರಮಾಣದಲ್ಲಿ ಮನಸ್ಸಿಗೆ ಸಂಬಂಧಿಸಿದ ಕಾಯಿಲೆಗಳಿರುವುದು ಕಂಡುಬರುತ್ತದೆಯಂತೆ.

ಹಾಗೆಯೇ ಕಥೆ ಕಾದಂಬರಿಗಳಂಥ ಗದ್ಯ ಬರವಣಿಗೆಯಲ್ಲಿ ತೊಡಗಿರುವವರಲ್ಲಿ ಇದರ ಪ್ರಮಾಣ ಶೇಕಡ 77. ರಾಜಕಾರಣ, ವಾಣಿಜ್ಯ ಮತ್ತು ವಿಜ್ಞಾನ ಕ್ಷೇತ್ರದ ಸೃಜನಶೀಲರಲ್ಲಿ ಇರುವ ‘ಹುಚ್ಚಿನ ಪ್ರಮಾಣ’ಕ್ಕೆ ಹೋಲಿಸಿದರೆ ಕವಿಗಳು ಮತ್ತು ಕಥೆಗಾರರಲ್ಲಿರುವ ಹುಚ್ಚು ಸ್ವಲ್ಪ ಹೆಚ್ಚೇ ಎಂಬುದು ಈ ಅಧ್ಯಯನದ ಸಾರ. ಇದಕ್ಕೆ ಸಂಬಂಧಿಸಿದಂತೆ ಲುಡ್ವಿಗ್ ಅವರು ಮಂಡಿಸುವ ಸಾಕ್ಷ್ಯಗಳೂ ಕುತೂಹಲಕಾರಿಯಾಗಿ ಇವೆ.

ಶಾಲೆ ಮತ್ತು ಕಾಲೇಜುಗಳಲ್ಲಿ ಕವಿತಾ ಸ್ಪರ್ಧೆ ಇತ್ಯಾದಿಗಳಿಗೆ ನೋಂದಾಯಿಸಿಕೊಳ್ಳುವ ವಿದ್ಯಾರ್ಥಿಗಳಿಗೂ ಇಂಥ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದ ವಿದ್ಯಾರ್ಥಿಗಳ ನಡುವಣ ಹೋಲಿಕೆಯಲ್ಲೂ ಕವಿತಾ ಪ್ರಿಯರು ಹುಚ್ಚಿಗೆ ಹೆಚ್ಚು ಹತ್ತಿರ ಎಂದು ಲುಡ್ವಿಗ್ ಹೇಳುತ್ತಾರೆ.

ಕಥೆ, ಕವಿತೆ, ಕಾದಂಬರಿಗಳಂಥ ಕಾಲ್ಪನಿಕ ಸೃಷ್ಟಿಗಳತ್ತ ಹೆಚ್ಚು ಒಲವು ತೋರಿಸುವವರಲ್ಲಿ ಖಿನ್ನತೆ ಹೆಚ್ಚು ಎಂಬುದು ಈ ಅಧ್ಯಯನ ಸೂಚಿಸುವ ಮತ್ತೊಂದು ಸಂಗತಿ. ಕೆಲವರಲ್ಲಿ ಇದು ಸ್ಕ್ರೀಝೋಫ್ರೇನಿಯಾದ ಮಟ್ಟಕ್ಕೂ ಹೋಗಬಹುದೆಂಬ ಭವಿಷ್ಯದ ನುಡಿಯೂ ಇಲ್ಲಿದೆ. ಇದೆಲ್ಲಾ ಸರಿ, ಸೃಜನಶೀಲರೆಲ್ಲಾ ಸೈಕೋಪಾಥ್‌ಳೇ ಎಂದು ಪ್ರಶ್ನಿಸಿದರೆ ಅದನ್ನೂ ಸುಳ್ಳು ಎನ್ನುವ ಸಂಶೋಧನೆಗಳೂ ಇವೆ. ಸೈಕೋಪಾಥ್‌ಗಳ ಸಂಖ್ಯೆ ಅಮೆರಿಕದ ವಾಣಿಜ್ಯ ಕ್ಷೇತ್ರದಲ್ಲೇ ಹೆಚ್ಚಂತೆ.

ಯಾವುದಾದರೊಂದು ಚಟುವಟಿಕೆಯಲ್ಲಿ ಹೆಚ್ಚು ತಲ್ಲೀನರಾಗುವ ಎಲ್ಲರನ್ನೂ ಹುಚ್ಚರೆಂದು ಕರೆಯುವ ರೂಢಿ ಇದ್ದದ್ದೇ. ಇದಕ್ಕೂ ಮನಃಶಾಸ್ತ್ರಜ್ಞರು ಸಂಶೋಧನೆಗಳ ಮೂಲಕ ಹೇಳುವ ಹುಚ್ಚಿಗೂ ಬಹಳ ವ್ಯತ್ಯಾಸವಿದೆ. ಯಾವುದೇ ಸಾಮಾನ್ಯ ಮನುಷ್ಯನನ್ನು ಮನಃಶಾಸ್ತ್ರಜ್ಞರು ಪರೀಕ್ಷೆಗೆ ಒಳಪಡಿಸಿದರೆ ಒಂದಲ್ಲಾ ಒಂದು ‘ಹುಚ್ಚು’ ಅವನಲ್ಲಿ ಕಾಣಬಹುದು. ಆದರೆ ಇದಕ್ಕಾಗಿ ಯಾರೂ ಹೆದರಬೇಕಾಗಿಲ್ಲ. ಐನ್‌ಸ್ಟೈನ್, ಗಾಂಧಿ, ಅಂಬೇಡ್ಕರ್ ಹೀಗೆ ಎಲ್ಲಾ ಸಾಧಕರೂ ತಮ್ಮ ಸಾಧನೆಯ ಹಾದಿಯಲ್ಲಿ ಹುಚ್ಚುತನದ ಪಟ್ಟವನ್ನು ಏರಿದ್ದವರೇ ಎಂಬುದು ನಮಗೆ ನೆನಪಿರಬೇಕು.

Write A Comment