ಕುಂದಾಪುರ: ರಾಜ್ಯದ ಲೋಕಾಯಕ್ತನಾಗಿ ಜವಾಬ್ದಾರಿ ಹೊಂದಿದ್ದಾಗ ಲೋಕಾಯುಕ್ತ ಸಂಸ್ಥೆಗೆ ವಹಿಸಿದ್ದ ಹಲವಷ್ಟು ವಿಚಾರಗಳ ಕುರಿತು ಸಮಗ್ರವಾಗಿ ತನಿಖೆ ನಡೆಸಿ, ಅಧ್ಯಯನ ನಡೆಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರೂ, ಈವರೆಗೆ ಯಾವುದೆ ವರದಿಯ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳದೆ ಇರುವುದು ಮನಸ್ಸಿಗೆ ವೇದನೆಯನ್ನು ಉಂಟು ಮಾಡಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಅಮಾಸೆಬೈಲುವಿನಲ್ಲಿ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ತನ್ನ ಮನದಾಳದ ಬೇಸರವನ್ನು ಹೇಳಿಕೊಂಡರು.
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಗಳ ಹೆಚ್ಚುವಿಕೆಗೆ ಕಾರಣವೇನು ಎಂದು ತನಿಖೆ ನಡೆಸುವ ಸಂದರ್ಭದಲ್ಲಿ ಕಾರ್ಡ್ ವಿತರಣೆಯ ವಿವೇಚನಾ ಅಧಿಕಾರ ತಹಸೀಲ್ದಾರರಿಗೆ ಇರಬೇಕಾಗಿರುವುದನ್ನು ಜನಪ್ರತಿನಿಧಿಗಳಿಗೆ ನೀಡಿರುವ ಕುರಿತು ವರದಿಯನ್ನು ಬೆಳಕು ಚಲ್ಲಲಾಗಿತ್ತು. ಆಕ್ರಮ ಮರಳು ಸಾಗಾಣಿಕೆ ಹಾಗೂ ಗಣಿಗಾರಿಕೆಯ ಕುರಿತು ಲೋಕಾಯುಕ್ತ ನೀಡಿರುವ ವರದಿಗಳು ಇನ್ನೂ ಕೂಡ ಜಾರಿಯಾಗಿಲ್ಲ. ವಿಪರ್ಯಾಸವೆಂದರೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ನೀಡಿರುವ ವರದಿಯನ್ನು ಐ.ಜಿ.ಪಿ ದರ್ಜೆಯ ಅಧಿಕಾರಿಯೊಬ್ಬರು ಪರಿಶೀಲನೆ ಮಾಡುವ ಸ್ಥಿತಿ ಬಂದೊದಗಿದೆ ಎಂದು ಹೆಗ್ಡೆ ನುಡಿದರು.
ಸಂವಿಂಧಾನದ ಮೂರು ಅಂಗಗಳ ಸರಿಯಾಗಿ ತಮ್ಮ ತಮ್ಮ ಕರ್ತವ್ಯ ಪಾಲನೆ ಮಾಡಿದರೆ ಜನಪ್ರತಿನಿಧಿಗಳ ಹೊಣೆಗಾರಿಕೆ ಕಡಿಮೆಯಾಗುತ್ತದೆ. ಆದರೆ ಕಾರ್ಯಾಂಗದ ಬದ್ದತೆಯ ಕೊರತೆಯಿಂದಾಗಿ ಜನಪ್ರತಿನಿಧಿಗಳ ಭಾಗೀಧಾರಿಕೆ ಜಾಸ್ತಿಯಾಗುತ್ತಿರುವುದರಿಂದಾಗಿ ಅನಗತ್ಯ ಸಮಸ್ಯೆಗಳು ಉದ್ಬವಿಸುತ್ತಿದೆ.