ಕನ್ನಡ ವಾರ್ತೆಗಳು

ವೀರಪ್ಪ ಮೊಯಿಲಿ ಸಂದರ್ಶನ: ಸಾಹಿತಿ ಸತ್ತ ಮೇಲೆಯೇ ಒಳ್ಳೆ ವಿಮರ್ಶೆ ಬರುತ್ತದೆ

Pinterest LinkedIn Tumblr

pvec29moily_0

-ರವೀಂದ್ರ ಭಟ್ಟ
ಎರಡು ಮಹಾಕಾವ್ಯ, ನಾಲ್ಕು ಕವನ ಸಂಕಲನ, ನಾಲ್ಕು ಕಾದಂಬರಿ, ಮೂರು ನಾಟಕ ಮತ್ತು ಏಳು ಸಂಕೀರ್ಣ ಪ್ರಕಾರದ ಕೃತಿಗಳ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಕಾಣಿಸಿಕೊಂಡಿರುವ ಎಂ. ವೀರಪ್ಪ ಮೊಯಿಲಿ ಅವರಿಗೆ ಕೆ.ಕೆ. ಬಿರ್ಲಾ ಪ್ರತಿಷ್ಠಾನ ನೀಡುವ ಪ್ರತಿಷ್ಠಿತ ‘ಸರಸ್ವತಿ ಸಮ್ಮಾನ’ ಬಂದಿದೆ. ಎಸ್‌.ಎಲ್‌. ಭೈರಪ್ಪ ಅವರ ನಂತರ ಕನ್ನಡಕ್ಕೆ ಬಂದಿರುವ ಎರಡನೇ ಸರಸ್ವತಿ ಸಮ್ಮಾನ ಇದು.  ಕನ್ನಡ ನಾಡಿನ ಹಿರಿಯ ರಾಜಕಾರಣಿಯೂ ಆಗಿರುವ ವೀರಪ್ಪ ಮೊಯಿಲಿಗೆ ದೇಶದ ಪ್ರತಿಷ್ಠಿತ ಪ್ರಶಸ್ತಿಯೊಂದು ಬಂದಾಗ ಒಂದಿಷ್ಟು ಅಚ್ಚರಿ, ಅನುಮಾನ, ಟೀಕೆ ಎಲ್ಲವೂ ವ್ಯಕ್ತವಾಗಿದೆ.

ಈ ಪ್ರಶಸ್ತಿ ಮೊಯಿಲಿಗೆ ಬಂದಿದ್ದಲ್ಲ ಅದನ್ನು ಕೊಂಡಿದ್ದು ಎಂಬಂತಹ ಖಾರದ ಹೇಳಿಕೆಗಳೂ ಅಲ್ಲಲ್ಲಿ ಕಾಣಿಸಿಕೊಂಡಿವೆ. ಜೊತೆ ಜೊತೆಗೇ ಮೊಯಿಲಿ ಸಾಹಿತ್ಯವನ್ನು ಕೊಂಡಾಡಿದವರೂ ನಮ್ಮ ನಡುವೆ ಇದ್ದಾರೆ. ಆದರೂ ಕನ್ನಡ ನಾಡಿಗೆ ಎರಡನೇ ಬಾರಿಗೆ ಸರಸ್ವತಿ ಸಮ್ಮಾನದಂಥ ಪ್ರಶಸ್ತಿಯನ್ನು ತಂದುಕೊಟ್ಟ ವೀರಪ್ಪ ಮೊಯಿಲಿ ಸಾಹಿತ್ಯ ಮತ್ತು ರಾಜಕಾರಣ ಎರಡರ ಬಗ್ಗೆಯೂ ಇಲ್ಲಿ ಮಾತನಾಡಿದ್ದಾರೆ. ಕಹಿ ಗುಳಿಗೆ ಕೊಟ್ಟವರಿಗೆ ಅವ ರದ್ದು ಸಿಹಿ ಮಾತ್ರೆ. ಸಿಹಿ ಗುಳಿಗೆ ನೀಡಿದವರಿಗೆ ನಗೆ ಬುಗ್ಗೆ. ವೀರಪ್ಪ ಮೊಯಿಲಿ ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಸರಸ್ವತಿ ಸಮ್ಮಾನ ಬಂದ ತಕ್ಷಣ ಕನ್ನಡ ಸಾರಸ್ವತ ಲೋಕದ ಪ್ರತಿಕ್ರಿಯೆ ಹೇಗಿತ್ತು?
ಚೆನ್ನಾಗಿಯೇ ಇದೆ. ಇಡೀ ಕನ್ನಡ ಸಾರಸ್ವತ ಲೋಕ ನನ್ನನ್ನು ಆದರಿಸಿದೆ. ಗೌರವಿಸಿದೆ. ಹಲವು ವಿದ್ವಾಂಸರು ಅಭಿನಂದನೆ ಸಲ್ಲಿಸಿದ್ದಾರೆ.

ರಾಜಕಾರಣಿಯಾಗಿರುವ ನಿಮಗೆ ಈ ಪ್ರಶಸ್ತಿ ಬಂದಿದ್ದಲ್ಲ. ಇದನ್ನು ನೀವು ಕೊಂಡಿದ್ದು ಎಂಬ ಆರೋಪ ಇದೆಯಲ್ಲ?
ಇದು ಕೇವಲ ನನಗೆ ಮಾಡುವ ಅವಮಾನ ಅಲ್ಲ. ಕೆ.ಕೆ. ಬಿರ್ಲಾ ಪ್ರತಿಷ್ಠಾನಕ್ಕೆ ಮಾಡುವ ಅವಮಾನ. ಅಲ್ಲದೆ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಆರ್‌.ಸಿ. ಲಹೋಟಿ ಮತ್ತು 13 ಮಂದಿ ವಿದ್ವಾಂಸರು ಇದನ್ನು ಆಯ್ಕೆ ಮಾಡಿದ್ದಾರೆ. ಟೀಕೆ ಮಾಡುವ ಮೂಲಕ ಅವರನ್ನೆಲ್ಲಾ ಅವಮಾನಿಸಿದಂತೆ ಆಗುತ್ತದೆ.

ನನ್ನ ‘ರಾಮಾಯಣ ಮಹಾನ್ವೇಷಣಂ’ ಕೃತಿಯನ್ನು ಟೀಕೆ ಮಾಡಲಿ. ಆದರೆ ವೈಯಕ್ತಿಕ ಟೀಕೆ ಸರಿಯಲ್ಲ. ಅದರಿಂದ ಕೃತಿಗೂ ಮತ್ತು ಅದನ್ನು ಮೆಚ್ಚಿದ ಓದುಗರಿಗೂ ಅಪಮಾನ ಮಾಡಿದಂತಾಗುತ್ತದೆ. ರಾಮಾಯಣ ಮಹಾನ್ವೇಷಣಂ ಮಹಾ ಕಾವ್ಯ ಇಂಗ್ಲಿಷ್‌, ಹಿಂದಿ, ತಮಿಳು, ತೆಲುಗು ಭಾಷೆಗಳಿಗೆ ಅನುವಾದ ವಾಗಿದೆ. ಇನ್ನೂ ಇತರ ಭಾಷೆಗಳಿಗೆ ಅನುವಾದವಾಗುತ್ತಿದೆ.

ಮಹಾಕಾವ್ಯದ ಬಗ್ಗೆ ಗೊತ್ತಿಲ್ಲದ, ಅದರ ಹಿಂದಿನ ಶ್ರಮ ಅರಿಯದ ಜನರು ಮಾಡುವ ಟೀಕೆಗಳು ಇವು. ರಾಜಕಾರಣಿ ಯೊಬ್ಬನಿಗೆ ಇಷ್ಟು ದೊಡ್ಡ ಪ್ರಶಸ್ತಿ ಬಂದಾಗ ಗುಮಾನಿ ಇರುವುದು ಸಹಜ. ಆದರೆ ಅದಕ್ಕೆ ನಾನು ಉತ್ತರ ನೀಡಬೇಕಾಗಿಲ್ಲ. ಎಲ್ಲದಕ್ಕೂ ನನ್ನ ಮಹಾ ಕಾವ್ಯವೇ ಉತ್ತರ ನೀಡುತ್ತದೆ.

ಮಹಾಕಾವ್ಯ ಬರೆಯಲು ನಾನು ಪಟ್ಟ ಶ್ರಮ ಎಷ್ಟು ಎನ್ನುವುದಕ್ಕೆ ಲಾರಿಗಟ್ಟಲೆ ದಾಖಲೆಗಳನ್ನು ಪ್ರದರ್ಶನ ಮಾಡಬಹುದು. ಟೀಕೆ ಎಂಬುದು ಹೇಗಿದೆ ಎಂದರೆ ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎನ್ನುವ ಹಾಗಿದೆ. ಇಷ್ಟಕ್ಕೂ ಒಮ್ಮೆ ಒಂದು ಕೃತಿಯನ್ನು ಬರೆದು ಮುಗಿಸಿದ ಮೇಲೆ ಅದು ಸಾರ್ವಜನಿಕ ಆಸ್ತಿ. ಅದನ್ನು ತೆಗಳುವವರೂ ಇರುತ್ತಾರೆ. ಹೊಗಳುವವರೂ ಇರುತ್ತಾರೆ. ರಾಜಕಾರಣಿ ಗಳನ್ನು ಮಾತ್ರ ತೆಗಳುತ್ತಾರೆ ಎಂದಲ್ಲ. ಕುವೆಂಪು ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗಲೂ ಕುವೆಂಪು ಕವಿಯೇ ಅಲ್ಲ ಎಂದು ಹೇಳಿದವರು ಇರಲಿಲ್ಲವೇ?

ಪ್ರಶಸ್ತಿ ಬರುವುದಕ್ಕೆ ನೀವು ದೇಶದ ಬಹುದೊಡ್ಡ ರಾಜಕಾರಣಿ ಎನ್ನುವುದು ಪ್ರಭಾವ ಬೀರಲೇ ಇಲ್ಲವೇ?
ಪ್ರಶಸ್ತಿಗೆ ಪ್ರಭಾವ ಬೀರಿಲ್ಲ. ಆದರೆ ಮಹಾಕಾವ್ಯ ಬರವಣಿಗೆಯ ಮೇಲೆ ಪ್ರಭಾವ ಬೀರಿದೆ. ನಾನು ರಾಜಕಾರಣಿಯಾಗಿದ್ದರಿಂದಲೇ ರಾಮಾಯಣ ಮಹಾನ್ವೇಷಣಂ ಮಹಾಕಾವ್ಯದಲ್ಲಿ ಹೊಸ ದೃಷ್ಟಿಕೋನ ನೀಡಲು ಸಾಧ್ಯವಾಗಿದೆ. ಇಡೀ ವಿಶ್ವದ ಸಾಹಿತ್ಯವನ್ನು ನಾನು ಅಭ್ಯಾಸ ಮಾಡಲು ಅದು ಸಹಕಾರಿ ಯಾಯಿತು. ರಾಜಕಾರಣಿಯಾದ ನನಗೆ ಹೊಸ ಹೊಸ ಅನುಭವಗಳು ಸಿಕ್ಕವು.  ಅವೆಲ್ಲವನ್ನೂ ನಾನು ಮಹಾಕಾವ್ಯದಲ್ಲಿ ಸೇರಿಸಿದ್ದೇನೆ. ಅದರಿಂದಾಗಿಯೇ ಈ ಮಹಾಕಾವ್ಯಕ್ಕೆ ಹೊಸ ಶೋಭೆ ಬಂದಿದೆ. ಇದಕ್ಕಿಂತ ಮುಖ್ಯವಾಗಿ ನಾನು ಮೊದಲು ಕವಿ. ಆ ನಂತರ ರಾಜಕಾರಣಿ. ನಾನು ಪ್ರೌಢಶಾಲೆಯ ಹಂತದಲ್ಲಿ ಇರುವಾಗಲೇ ಕವಿತೆ ಬರೆಯಲು ಆರಂಭಿಸಿದವನು.

ನಿಮ್ಮ ಮಹಾಕಾವ್ಯ ಮತ್ತು ಸಾಹಿತ್ಯದ ಬಗ್ಗೆ ಒಳ್ಳೆ ವಿಮರ್ಶೆ ಬಂದಿದೆಯೇ?
ಉತ್ತಮ ವಿಮರ್ಶೆಗಳು ಬಂದಿವೆ. ಕನ್ನಡ ನಾಡಿನ ಬಹುತೇಕ ಪ್ರಸಿದ್ಧ ವಿದ್ವಾಂಸರು ಮಹಾಕಾವ್ಯವನ್ನು ಮೆಚ್ಚಿ ಬರೆದಿದ್ದಾರೆ. ರಾಮಾಯಣ ಮಹಾನ್ವೇಷಣಂ ಬಗ್ಗೆ ದೇಶದ ವಿವಿಧೆಡೆ ವಿಚಾರ ಸಂಕಿರಣಗಳೂ ಆಗಿವೆ. ಸರಸ್ವತಿ ಸಮ್ಮಾನ  ಬಂದ ನಂತರ ಸಿ.ಎನ್. ರಾಮಚಂದ್ರನ್‌ ಅವರು ಉತ್ತಮ ಲೇಖನವನ್ನೂ ಬರೆದಿದ್ದಾರೆ.

ಆದರೂ ನಿಮ್ಮ ಸಾಹಿತ್ಯಕ್ಕೆ ಸಿಗಬೇಕಾದ ಮನ್ನಣೆ ಸಿಕ್ಕಿದೆ ಎಂದು ನಿಮಗೆ ಅನ್ನಿಸುತ್ತದೆಯೇ?
ಇನ್ನೂ ಒಳ್ಳೆಯ ವಿಮರ್ಶೆ ಬರುವುದು ಸಾಹಿತಿ ಸತ್ತ ಮೇಲೆ ಮಾತ್ರ. ಶಿವರಾಮ ಕಾರಂತರಿಗೂ ಅವರು ಸತ್ತ ಮೇಲೆಯೇ ಅವರ ಕೃತಿಗಳ ಬಗ್ಗೆ ಒಳ್ಳೆ ವಿಮರ್ಶೆಗಳು ಬಂದವು. ಮುದ್ದಣ ಎಂದು ಹೆಸರಾದ ನಂದಳಿಕೆ ಲಕ್ಷ್ಮೀನಾರಣಪ್ಪ ಅವರಿಗೂ ಒಳ್ಳೆಯ ವಿಮರ್ಶೆ ಬಂದಿದ್ದು ಅವರು ಸತ್ತ ನಂತರ. ಹಾಗೆಯೇ ನನಗೂ ಆಗಬಹುದು.

ನಿಮ್ಮ ಕಾವ್ಯದ ಬಗ್ಗೆ ಟೀಕೆಗಳು ಬಂದಾಗ ನಿಮ್ಮ ಸ್ನೇಹಿತ ವಿದ್ವಾಂಸರು ಯಾಕೆ ಮಾತನಾಡಲಿಲ್ಲ?
ಎಲ್ಲದಕ್ಕೂ ಮಹಾಕಾವ್ಯವೇ ಉತ್ತರ ನೀಡುತ್ತದೆ. ಯಾವ ಟೀಕೆಗೂ ಉತ್ತರ ನೀಡಬೇಡಿ ಎಂದು ನಾನೇ ಅವರಿಗೆ ಮನವಿ ಮಾಡಿದ್ದೆ.

ನೀವು ಮಹಾಕಾವ್ಯವನ್ನು ಬರೆಯುವ ಬಗೆ ಹೇಗೆ? ಅದನ್ನು ಯಾರಾದರೂ ತಿದ್ದುತ್ತಾರಾ?
ನನ್ನ ಮಹಾಕಾವ್ಯಗಳನ್ನು ನಾನೇ ಬರೆಯುತ್ತೇನೆ. ಅದಕ್ಕಾಗಿ ಸಾಕಷ್ಟು ಅಧ್ಯಯನ ನಡೆಸುತ್ತೇನೆ. ರಾಮಾಯಣ ಮಹಾನ್ವೇಷಣಂ ಕೃತಿಗಾಗಿ ಐದು ವರ್ಷ ಅಧ್ಯಯನ ಮಾಡಿದ್ದೇನೆ. ವಿವಿಧ ವಿಷಯ ತಜ್ಞರ ಬಳಿ ಕುಳಿತು ಚರ್ಚೆ ಮಾಡಿದ್ದೇನೆ. ಈ ಮಹಾಕಾವ್ಯಕ್ಕಾಗಿ ಆಡಳಿತ, ಪಂಚಾಯ್ತಿ ಸುಧಾರಣೆ, ಹಣಕಾಸು, ಮನೋವಿಜ್ಞಾನ ಮುಂತಾದ ವಿಷಯಗಳ ಬಗ್ಗೆ ಕೂಡ ಅಧ್ಯಯನ ನಡೆಸಿದ್ದೇನೆ. ಕೇವಲ ಕನ್ನಡ ನಾಡು, ಭಾರತದ್ದಲ್ಲ, ಇಡೀ ವಿಶ್ವದ ಜ್ಞಾನವನ್ನು ರೂಢಿಸಿಕೊಳ್ಳಲು ಪ್ರಯತ್ನಿಸಿದ್ದೇನೆ.

ಮಹಾಕಾವ್ಯ ಎಂದರೆ ಅದು ಕೇವಲ ಒಂದು ಪ್ರದೇಶಕ್ಕೆ ಸೀಮಿತವಲ್ಲ. ಇಡೀ ವಿಶ್ವಕ್ಕೆ ಸಂದೇಶವನ್ನು ನೀಡುವಂತಹದ್ದಾಗಿರ ಬೇಕು ಎಂಬ ಕಲ್ಪನೆ ನನಗೆ ಇದೆ. ಕೋತಿಗಳು, ಚಿಂಪಾಂಜಿಗಳ ಬಗ್ಗೆ ಕೂಡ ಅಧ್ಯಯನ ನಡೆಸಿದ್ದೇನೆ. ಡಿಆರ್‌ಡಿಒದ ಸಹಾಯವನ್ನು ಪಡೆದಿದ್ದೇನೆ. ನಾನು ಬರೆದಿದ್ದನ್ನು ನನ್ನ ಪತ್ನಿ ಮೊದಲು ಓದುತ್ತಾಳೆ. ಅವಳೇ ಶೇ 50ರಷ್ಟು ಕಿಲ್‌ ಮಾಡುತ್ತಾಳೆ.

ಮೊದಲು ನಾನು ಅದನ್ನು ಒಪ್ಪದೇ ಇದ್ದರೂ ನಂತರ ಅವಳ ಅಭಿಪ್ರಾಯವನ್ನು ಮೆಚ್ಚಿಕೊಳ್ಳುತ್ತೇನೆ. ಒಂದು ಮಹಾಕಾವ್ಯವನ್ನು 4–5 ಬಾರಿ ಬರೆಯುತ್ತೇನೆ.  ನನಗೆ ತೃಪ್ತಿಯಾದ ನಂತರ ನನ್ನ ಸ್ನೇಹಿತರಾದ ವಿದ್ವಾಂಸರಿಗೆ ಅದನ್ನು ತೋರಿಸುತ್ತೇನೆ. ಪ್ರಭಂಜನಾ ಚಾರ್ಯ, ಕೆ.ಟಿ. ಪಾಂಡುರಂಗಿ, ವಿವೇಕ ರೈ, ಎಂ.ಎಚ್‌. ಕೃಷ್ಣಯ್ಯ ಮುಂತಾದವರಿಂದ ಸಲಹೆ ಪಡೆಯುತ್ತೇನೆ. ನನಗೆ ನಾನು ಬರೆದಿದ್ದೇ ಅಂತಿಮ ಎನ್ನುವ ಭಾವನೆ ಇಲ್ಲ. ಈ ವಿದ್ವಾಂಸರು ಯಾವುದಾದರೂ ಪರಿಷ್ಕರಣೆ ಸೂಚಿಸಿದರೆ ಅದರಂತೆ ಮತ್ತೆ ಬರೆಯುತ್ತೇನೆ.

ರಾಮಾಯಣ ಮಹಾನ್ವೇಷಣಂ ನಲ್ಲಿ ರಾಮನಿಗಿಂತ ಲಕ್ಷ್ಮಣನಿಗೇ ಹೆಚ್ಚು ಪ್ರಾಶಸ್ತ್ಯ ಸಿಕ್ಕಿದ್ದು ಯಾಕೆ?
ಲಕ್ಷ್ಮಣ ಪ್ರತಿಭಟನೆಯ ಪ್ರತೀಕ. ರಾಮನ ಎಲ್ಲ ಸಾಹಸಗಳಿಗೆ ಪ್ರೇರಕ ಶಕ್ತಿ ಅವನು. ರಾಮ ಸಮಾಧಾನಿ. ಲಕ್ಷ್ಮಣ ಜಾಗೃತಿಯ ಪ್ರತೀಕ. ವಾಲಿ ವಧೆ ಸಂದರ್ಭದಲ್ಲಿ ರಾಮ ವಾಲಿಯನ್ನು ಕೊಲ್ಲಲು ಅನುಮಾನಿಸುತ್ತಿದ್ದಾಗ ಲಕ್ಷ್ಮಣ ರಾಮನಿಗೆ ‘ಈಗ ವಾಲಿಯನ್ನು ಕೊಲ್ಲದೇ ಹೋದರೆ ನಾವು ಲಂಕೆಯಲ್ಲಿ ಯುದ್ಧ ಮಾಡಲು ಸಾಧ್ಯವಾಗುವುದಿಲ್ಲ. ಇಲ್ಲಿಯೇ ಯುದ್ಧ ಮುಗಿದು ಹೋಗುತ್ತದೆ’ ಎನ್ನುತ್ತಾನೆ. ಅದೇ ರೀತಿ ಅಹಲ್ಯೆಯ ಪ್ರಕರಣದಲ್ಲಿ ಕೂಡ ರಾಮನಿಗೆ ನೆರವಾಗುವವನು ಲಕ್ಷ್ಮಣ. ಅದಕ್ಕೇ ಲಕ್ಷ್ಮಣ ನನಗೆ ಮುಖ್ಯವಾಗಿ ಕಾಣಿಸಿದ.

ನಿಮ್ಮ ಮುಂದಿನ ಕೃತಿ ಯಾವುದು?
‘ಸಿರಿಮುಡಿ ಪರಿಕ್ರಮಣ’ ಮಹಾಕಾವ್ಯ ಬರೆದ ಮೇಲೆ ನನಗೆ ‘ವಾರ್‌ ಅಂಡ್‌ ಪೀಸ್‌’ನಂತಹ ಕಾದಂಬರಿಯನ್ನು ಬರೆಯಬೇಕು ಎಂಬ ಬಯಕೆ ಇತ್ತು. ಆದರೆ ಶ್ರವಣಬೆಳಗೊಳದ ಸ್ವಾಮೀಜಿ ನನ್ನನ್ನು ಬಾಹುಬಲಿಯ ಕಡೆಗೆ ತಿರುಗಿಸಿದ್ದಾರೆ. ಅದಕ್ಕಾಗಿ ಬಾಹುಬಲಿಯ ಬಗ್ಗೆ ಮಹಾಕಾವ್ಯ ಬರೆಯುವ ಸಿದ್ಧತೆಯಲ್ಲಿದ್ದೇನೆ. ‘ಆದಿಪುರಾಣ’ದಲ್ಲಿಯೂ ಭರತನ ದಿಗ್ವಿಜಯದ ಬಗ್ಗೆಯೇ ಹೆಚ್ಚಿನ ಒತ್ತು ಇದೆ. ರತ್ನಾಕರ ವರ್ಣಿ ಭರತೇಶ ವೈಭವ ಬರೆದಿದ್ದಾನೆ. ಆದರೆ ಬಾಹುಬಲಿಯ ತ್ಯಾಗದ ಬಗ್ಗೆ ಹೆಚ್ಚು ಬೆಳಕು ಚೆಲ್ಲುವುದಕ್ಕಾಗಿ ಈ ಮಹಾಕಾವ್ಯ.

ಕಾರಂತರ ಶಹಬ್ಬಾಸ್‌ಗಿರಿ!
ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಪುಸ್ತಕದ ಬಗ್ಗೆ ಇಂಗ್ಲಿಷ್‌ನಲ್ಲಿ ಒಂದು ಸೆಮಿನಾರ್‌ ನಡೆಯಿತು. ಅಲ್ಲಿ ನಾನು ಪ್ರಬಂಧ ಮಂಡಿಸಿದ್ದೆ. ನಂತರ ಅದೇ ಪ್ರಬಂಧವನ್ನು ಹಿಂದುಸ್ತಾನ್‌ ಟೈಮ್ಸ್ ಪತ್ರಿಕೆಯವರು ಪ್ರಕಟಿಸಿದರು. ಅದನ್ನು ನಾನು ಕಾರಂತರಿಗೆ ಕಳುಹಿಸಿ ಕೊಟ್ಟೆ. ಅದನ್ನು ನೋಡಿ ಕಾರಂತರು ನನಗೊಂದು ಪತ್ರ ಬರೆದರು. ನನಗೆ ಅದನ್ನು ನೋಡಲೂ ಭಯ. ಕಾರಂತರು ಬೈದಿರುತ್ತಾರೆ ಎಂದುಕೊಂಡು ನಾನು ಆ ಪತ್ರವನ್ನು ಡ್ರಾದಲ್ಲಿ ಇಟ್ಟುಬಿಟ್ಟೆ. ಸುಮಾರು 3 ತಿಂಗಳ ನಂತರ ನನ್ನ ಪತ್ನಿ ‘ಕಾರಂತರು ಏನು ಬರೆದಿದ್ದಾರೆ ಎಂದು ಒಮ್ಮೆ ನೋಡಿ’ ಎಂದಳು. ಆಗ ತೆರೆದು ನೋಡಿದರೆ ಕಾರಂತರು ನನಗೆ ಶಹಬ್ಬಾಸ್‌ಗಿರಿ ಕೊಟ್ಟಿದ್ದರು. ‘ನನ್ನ ಬರವಣಿಗೆಗೆ ನಿಜವಾಗಿಯೂ ನ್ಯಾಯ ಕೊಟ್ಟವರು ನೀವು’ ಎಂದು ಕಾರಂತರು ಬರೆದಿದ್ದರು. ನನಗೆ ಸಿಕ್ಕ ಎಲ್ಲ ಪ್ರಶಸ್ತಿಗಿಂತ ಕಾರಂತರ ಈ ಮಾತು ನನಗೆ ಹೆಚ್ಚಿನದ್ದು.

ಎನ್ಕೆ ಕೊನೆಯಾಸೆ!
ರಾಮಾಯಣ ಮಹಾನ್ವೇಷಣಂ ಕೃತಿ ರಚನೆಯಲ್ಲಿ ಹಿರಿಯ ಸಾಹಿತಿ ಎನ್ಕೆ ನನಗೆ ಬಹಳ ಸಹಾಯ ಮಾಡಿದ್ದರು. ‘ನಿಮ್ಮ ಮಹಾಕಾವ್ಯ ಮುಗಿಯುವ ತನಕ ನಾನು ಸಾಯುವುದಿಲ್ಲ’ ಎಂದು ಅವರು ಯಾವಾಗಲೂ ಹೇಳುತ್ತಿದ್ದರು. ನಾನು ಒಮ್ಮೆ ಬೆಳಗಾವಿಯ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದೆ. ಆಗ ಎನ್ಕೆ ಅವರಿಗೆ ಆರೋಗ್ಯ ಸರಿ ಇಲ್ಲ ಎಂಬ ವರ್ತಮಾನ ಬಂತು.

ಧಾರವಾಡದಲ್ಲಿ ಅವರಿದ್ದ ಆಸ್ಪತ್ರೆಗೆ ಹೋಗಿದ್ದೆ. ಅವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ.  ನನ್ನ ನೋಡಿದ ತಕ್ಷಣ ಕಾಗದದಲ್ಲಿ ಏನನ್ನೋ ಬರೆದರು. ಅದು ಸ್ಪಷ್ಟವಾಗಿರಲಿಲ್ಲ. ಆದರೂ ನಾನು ‘ರಾಮಾಯಣ ಮಹಾನ್ವೇಷಣಂ ಬರೆದು ಮುಗಿಯಿತು’ ಎಂದೆ. ಆಗ ಅವರ ಮುಖದಲ್ಲಿ ಮಂದ ಹಾಸ ಮೂಡಿತು.   ನಾನು ಊರಿಗೆ ವಾಪಸು ಬರುತ್ತಿದ್ದ ಹಾಗೆಯೇ ಅವರು ನಿಧನರಾದ ಸುದ್ದಿಯೂ ಬಂತು.

Write A Comment