ಮಂಗಳೂರು,ಮಾರ್ಚ್.31: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವಂತಹ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎಷ್ಟು ಇದೆ ಎಂಬ ಬಗ್ಗೆ ತುರ್ತು ಸಮೀಕ್ಷೆ ನಡೆಸಿ ಜಿಲ್ಲಾ ಪಂಚಾಯತ್‌ಗೆ ವರದಿ ಸಲ್ಲಿಸುವಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ದ.ಕ. ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಅವರು ತಿಳಿಸಿದರು. ಸಮಸ್ಯೆಗಳನ್ನು ಎದುರಿಸಲು ಪೂರಕ ಸಿದ್ಧತೆಗಳನ್ನು ಮಾಡದಿದ್ದರೆ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಜಿ.ಪಂ. ಸಭಾಂಗಣದಲ್ಲಿ ಸೋಮವಾರ ಜರಗಿದ ದ.ಕ. ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಕೇಂದ್ರ ಸರಕಾರದ ಅನುದಾನ ಯೋಜನೆಯಡಿ ವಿವಿಧ ಕಾರ್ಯಕ್ರಮಗಳ ಅನುಷ್ಠಾನದ ಪರಿಶೀಲನೆ ನಡೆಸಿದರು.
ಎಪ್ರಿಲ್ ಹಾಗೂ ಮೇ ತಿಂಗಳು ಕುಡಿಯುವ ನೀರು ಸಮಸ್ಯೆ ತಲೆದೋರುವ ಕಾಲ. ಸಮಸ್ಯೆ ಇರುವ ಕಡೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳು ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ. ಅದುದರಿಂದ ಕಳೆದ 5 ವರ್ಷಗಳಿಂದ ತಾಲೂಕುಗಳಲ್ಲಿ ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಎಷ್ಟು ಕಡೆಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿದೆ. ಪರಿಹಾರದ ನಿಟ್ಟಿನಲ್ಲಿ ಯಾವುದೆಲ್ಲಾ ಕ್ರಮಗಳು ಆಗಿವೆ. ಈ ವರ್ಷ ಎಷ್ಟು ಕಡೆಗಳಲ್ಲಿ ಸಮಸ್ಯೆ ತಲೆದೋರುವ ಸಾಧ್ಯತೆಗಳಿವೆ ಎಂಬ ಬಗ್ಗೆ ತುರ್ತು ಪರಿಶೀಲನೆ ನಡೆಸಿ ಸಮಗ್ರ ವರದಿಯನ್ನು ತಾ.ಪಂ. ಇಒಗಳು ಜಿಲ್ಲಾ ಪಂಚಾಯತ್‌ಗೆ ತತ್‌ಕ್ಷಣ ಸಲ್ಲಿಸಬೇಕು. ಸಮಸ್ಯೆ ಇರುವ ಕಡೆ ಪೂರಕ ವ್ಯವಸ್ಥೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಜಿ.ಪಂ.ನಲ್ಲಿ ಜಿಲ್ಲಾಧಿಕಾರಿಯ ಉಪಸ್ಥಿತಿಯೊಂದಿಗೆ ಸಭೆ ನಡೆಸಬೇಕು ಎಂದವರು ಸೂಚಿಸಿದರು.
ಮಂಗಳೂರಿನ ಬಾಳೆಪುಣಿ, ಪಜೀರು, ನರಿಂಗಾನ ಹಾಗೂ ಕುರ್ನಾಡು ಗ್ರಾಮಗಳಲ್ಲಿ ಕಳೆದ ಬಾರಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿತ್ತು ಎಂದು ಮಂಗಳೂರು ತಾ.ಪಂ. ಇಒ ವಿವರಿಸಿದರು. ಸುಳ್ಯ, ಪುತ್ತೂರು ಹಾಗೂ ಬೆಳ್ತಂಗಡಿ ತಾಲೂಕುಗಳಲ್ಲಿ ಈವರೆಗೆ ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಿಲ್ಲ ಎಂದು ಆಯಾಯ ತಾ.ಪಂ. ಇಒಗಳು ತಿಳಿಸಿದರು.
ಜಿ.ಪಂ. ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಉಪಾಧ್ಯಕ್ಷ ಸತೀಶ್ ಕುಂಪಲ, ಸಿಇಒ ಶ್ರೀವಿದ್ಯಾ ಉಪಸ್ಥಿತರಿದ್ದರು.


