ಕನ್ನಡ ವಾರ್ತೆಗಳು

ಎಸ್‍ಎಸ್‍ಎಲ್‍ಸಿಯಲ್ಲಿ ಪ್ರಥಮ ಬಾರಿಗೆ ತುಳು ಪರೀಕ್ಷೆ

Pinterest LinkedIn Tumblr

Sslc_exam_start_3

ಮಂಗಳೂರು, ಮಾ. 26:  ನಗರದ ಹೃದಯಭಾಗದಲ್ಲಿರುವ ಪಾಂಪೈ ಕನ್ನಡ ಮಾಧ್ಯಮ ಪ್ರೌಢಶಾಲೆ, ರಾಜ್ಯದ ಎಲ್ಲಾ ಶಾಲೆಗಳಂತೆ ಈ ಶಾಲೆ ಕೂಡಾ ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದೆ. ಇದರ ಜೊತೆಗೆ ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ, ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಶಾಲೆಯ ವಿದ್ಯಾರ್ಥಿಗಳು `ತುಳು” ತೃತೀಯ ಭಾಷಾ ಪರೀಕ್ಷೆ ಬರೆಯಲಿದ್ದಾರೆ. ಈ ವಿನೂತನ ಸಾಹಸ ಮಾಡುವ ಮೂಲಕ ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಜನರು ಈ ಶಾಲೆಯತ್ತ ತದೇಕಚಿತ್ತದಿಂದ ನೋಡುವಂತೆ ಮಾಡಿದೆ.

ಪ್ರೌಢಶಿಕ್ಷಣದಲ್ಲಿ ಕರಾವಳಿ ಜಿಲ್ಲೆಗಳ ಮಾತೃಭಾಷೆಯಾಗಿರುವ ತುಳುಭಾಷೆಗೆ ತೃತೀಯ ಭಾಷೆಯ ಸ್ಥಾನವನ್ನು ಸರ್ಕಾರ 2010ರಲ್ಲೇ ನೀಡಿದೆ. ತುಳು ಭಾಷೆಗೆ ತೃತೀಯ ಭಾಷೆಯ ಸ್ಥಾನಮಾನ ಲಭಿಸಿದ್ದು, ಕರಾವಳಿಗರಲ್ಲಿ ವ್ಯಾಪಕ ಸಂತಸ ಮೂಡಿಸಿದ್ದರೂ ಪೂರ್ವಸಿದ್ಧತೆಯ ಕೊರತೆಯಿಂದಾಗಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿರಲಿಲ್ಲ.

ತುಳುಭಾಷೆಗೆ ಸಿಕ್ಕ ಮಹತ್ವವನ್ನು ಮನಗಂಡ ಮಂಗಳೂರಿನ ಉರ್ವಸ್ಟೋರ್‍ನ ಪಾಂಪೈ ಪ್ರೌಢಶಾಲೆ 2011ರಿಂದ ತನ್ನ ಶಾಲೆಯಲ್ಲಿ ತೃತೀಯ ಭಾಷೆಯಾಗಿ ತುಳುವನ್ನು ಅಧ್ಯಯನ ಮಾಡುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ಒದಗಿಸಿದೆ. ಇದರ ಫಲವಾಗಿ ಶಾಲೆಯಿಂದ 18 ವಿದ್ಯಾರ್ಥಿಗಳು ಈ ಬಾರಿಯ ವಾರ್ಷಿಕ ಪರೀಕ್ಷೆಯಲ್ಲಿ ತೃತೀಯ ಭಾಷೆಯಾಗಿ ತುಳು ಪರೀಕ್ಷೆ ಬರೆಯುತ್ತಿದ್ದಾರೆ.

ತುಳುಭಾಷೆಗೆ “69 ಕೋಡ್ :  ಶಿಕ್ಷಣ ಇಲಾಖೆ ಈಗಾಗಲೇ ಭಾಷಾವಾರು ಕೋಡ್ ಸಿದ್ಧಪಡಿಸಿದ್ದು, ತುಳುಭಾಷೆಗೆ “69 ಕೋಡ್ ಸಂಖ್ಯೆಯನ್ನು ಎಸ್‍ಎಸ್‍ಎಲ್‍ಸಿ ಮಂಡಳಿ ನೀಡಿದೆ. ಮಾ.30ಕ್ಕೆ ಪರೀಕ್ಷೆ ಆರಂಭಗೊಳ್ಳಲಿದ್ದು ಎ.10ರಂದು ತುಳು ಸೇರಿದಂತೆ ತೃತೀಯ ಭಾಷಾ ಪರೀಕ್ಷೆ ನಡೆಯಲಿದೆ. 20 ಅಂಕಗಳು ಆಂತರಿಕ ಮೌಲ್ಯಮಾಪನದ್ದಾದರೆ, ಉಳಿದ 80 ಅಂಕಗಳು ಉತ್ತರ ಪತ್ರಿಕೆಯಿಂದ ಲಭಿಸಲಿದೆ.

ತುಳು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಯಾರು ಮೌಲ್ಯಮಾಪನ ಮಾಡಲಿದ್ದಾರೆ ಎಂಬುದರ ಬಗ್ಗೆ ಅಂತಿಮ ನಿರ್ಧಾರವನ್ನು ಪರೀಕ್ಷಾ ಮಂಡಳಿ ಕೈಗೊಳ್ಳಲಿದೆ. ಮೊದಲ ಬಾರಿಗೆ ತುಳು ಪರೀಕ್ಷೆ ನಡೆಯುವ ಕಾರಣದಿಂದ ಪ್ರಶ್ನೆಪತ್ರಿಕೆಯ ತಯಾರಿಯ ಬಗ್ಗೆ ವಿಸ್ತಾರವಾದ ಮಾತುಕತೆಗಳನ್ನು ಪಾಂಪೈ ಶಾಲೆ ಹಾಗೂ ತುಳು ಸಾಹಿತ್ಯ ಅಕಾಡೆಮಿ ಜತೆಗೆ ಈಗಾಗಲೇ ಹಲವು ಸುತ್ತಿನಲ್ಲಿ ಪರೀಕ್ಷಾ ಮಂಡಳಿ ನಡೆಸಿದೆ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಎಂ, ಬ್ರಹ್ಮಾವರ ಮಾದ್ಯಮಕ್ಕೆ ತಿಳಿಸಿದ್ದಾರೆ.

ಒಟ್ಟಿನಲ್ಲಿ ಪ್ರಾದೇಶಿಕ ಭಾಷೆಯೊಂದಕ್ಕೆ ಸಿಕ್ಕಿರುವ ಪ್ರಾಮುಖ್ಯತೆಯನ್ನು ಸದುಪಯೋಗಪಡಿಸಿಕೊಳ್ಳಲು ಖಾಸಗಿ ಶಿಕ್ಷಣ ಸಂಸ್ಥೆಯೊಂದು ಮುಂದಾಗಿರುವುದು ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ. ಈ ಬಾರಿಯ ಫಲಿತಾಂಶದಿಂದ ಜಿಲ್ಲೆಯ ಇನ್ನಷ್ಟು ಶಾಲೆಗಳು ಪ್ರೇರಣೆ ಪಡೆದು, ತುಳು ಭಾಷಾ ಅಧ್ಯಯನ ಮುಂದಿನ ಬಾರಿ ಏರಿಕೆಯಾಗಬಹುದು ಎನ್ನುವ ಆಶಾಭಾವನೆ ತುಳು ಅಕಾಡೆಮಿಯಲ್ಲಿದೆ. ತುಳು ಪಠ್ಯವನ್ನು ವ್ಯಾಪಕವಾಗಿ ಜಾರಿಗೊಳಿಸಲು ಕೂಡಾ ಅಕಾಡೆಮಿ ಸರ್ವಸನ್ನದ್ಧವಾಗಿದೆ.

Write A Comment