ಮಂಗಳೂರು, ಮಾರ್ಚ್.26: ಜವುಳಿ ಉದ್ಯಮದಿಂದ ಮನೆಮಾತಾಗಿದ್ದ ಜಿಲ್ಲೆಯ ಖ್ಯಾತ ಉದ್ಯಮಿ ಗಜಾನನ ಪ್ರಭು (55) ಗುರುವಾರ ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ನಗರದ ಹೊರವಲಯದ ಗುರುಪುರದಲ್ಲಿ ಸೆಂಟ್ರಲ್ ಕ್ಲೋತ್ ಸ್ಟೋರ್ ಎಂಬ ಜವುಳಿ ವ್ಯಾಪಾರಿಯಾಗಿದ್ದ ಗಜಾನನ ಪ್ರಭುರವರ ನಿಗೂಢ ಆತ್ಮಹತ್ಯೆ ಭಾರೀ ಕುತೂಹಲಕ್ಕೆ ಕಾರಣ ವಾಗಿದ್ದು. ತಮ್ಮ ಎಳೆಯ ಹರೆಯದಲ್ಲಿಯೇ ಜವುಳಿ ಉದ್ಯಮಿಯಾಗಿ ಬೆಳಿದಿದ್ದ ಅವರು ಮದುವೆ ಸೀರೆ ಹಾಗೂ ವಸ್ತ್ರಗಳಿಗೆ ಗುರುಪುರಕ್ಕೆ ಪರ್ಯಾಯ ಹೆಸರನ್ನು ತಮ್ಮ ಅಂಗಡಿಯ ಮೂಲಕ ಪ್ರಸಿದ್ಧಿಗೊಳಿಸಿದ್ದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಿತ ರಾಜ್ಯ ಹೊರ ರಾಜ್ಯ ಹಾಗೂ ವಿದೇಶದಲ್ಲಿಯೂ ಅವರ ಗ್ರಾಹಕರಿದ್ದು ಮದುವೆ ಇನ್ನಿತರ ಶುಭ ಕಾರ್ಯಗಳಿಗೆ ಸೆಂಟ್ರಲ್ ಕ್ಲೋತ್ ಸ್ಟೋರ್‍ನಲ್ಲಿಯೇ ಖರೀದಿಸುತ್ತಿದ್ದರಲ್ಲದೆ. ಅತ್ಯುತ್ತಮ ಸೇವೆಯಿಂದಲೂ ಗಜನಾನನ ಪ್ರಭು ಗುರುತಿಸಿಕೊಂಡು ಜಿಲ್ಲಾ ವರ್ತಕರ ಸಂಘದ ಅಧ್ಯಕ್ಷರಾಗಿ ಸಾಕಷ್ಟು ಸೇವೆಯನ್ನು ನೀಡಿದ್ದರು.
ಪತ್ನಿ ಹಾಗೂ ಒರ್ವ ಹೆಣ್ಣು ಮಗಳನ್ನು ಅಗಲಿರುವ ಗಜಾನನ ಪ್ರಭು ನಿನ್ನೆ ಎಂದಿನಂತೆ ಲವಲವಿಕೆಯಿಂದ ಇದ್ದರು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ. ರಾತ್ರಿ ಸುಮಾರು 11 ಗಂಟೆಯವರೆಗೂ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ.
ಇಂದು ಬೆಳಿಗ್ಗೆ ಮನೆಯ ಕೊಣೆಯೊಂದರಲ್ಲಿ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದು ಆತ್ಮಹತ್ಯೆಗೆ ಸ್ಪಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
