ಕನ್ನಡ ವಾರ್ತೆಗಳು

‘ಮಕ್ಕಳ ಕೂಟ’ದ ಬೇಸಿಗೆ ಶಿಬಿರ

Pinterest LinkedIn Tumblr

psmec26summer4_0

ಮಾರ್ಚ್‌ನಲ್ಲಿ ಮಕ್ಕಳಿಗೆ ವಾರ್ಷಿಕ ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಆರಂಭವಾಗುವ ಸಮಯ… ಏಪ್ರಿಲ್‌–ಮೇ ತಿಂಗಳಲ್ಲಿ ಮಕ್ಕಳು ಶಾಲೆಯನ್ನು ಮರೆತು  ಅಜ್ಜಿಮನೆ, ಊರು, ಸಂಬಂಧಿಗಳ ಮನೆ ಎಂದು ಆರಾಮವಾಗಿ ಕಾಲ ಕಳೆಯುವ ಸಮಯ. ಆದರೆ, ಈಗ  ಮಕ್ಕಳನ್ನು  ಸಂಬಂಧಿಗಳ ಮನೆಯೆಂದು ತಿರುಗಾಡುತ್ತಾ ಸಮಯ ವ್ಯಯಿಸುವುದಕ್ಕೆ ಪೋಷಕರು ಅನುಮತಿ ನೀಡುವುದಿಲ್ಲ. ನಮ್ಮ ಮಕ್ಕಳು ಸಕಲಕಲಾವಲ್ಲಭರಾಗಬೇಕೆಂಬ ಆಸೆಯೊಂದಿಗೆ ಬೇಸಿಗೆ ರಜೆ ಬರುವುದನ್ನೇ ಕಾಯುತ್ತಿರುತ್ತಾರೆ.

ಓದಿನ ಜತೆ ಜತೆಗೆ ಮಕ್ಕಳು ಇತರ ಕಲೆಗಳಲ್ಲಿಯೂ ಪರಿಣತಿ ಹೊಂದಿರಬೇಕು ಎಂದು ಪೋಷಕರು ಆಸೆ ಪಡುವುದರಲ್ಲಿ ತಪ್ಪೇನಿದೆ? ಇತರ ಮಕ್ಕಳಂತೆಯೇ ನಮ್ಮ ಮಕ್ಕಳು ಎಲ್ಲ ವಿದ್ಯೆ ಕಲಿಯಬೇಕು ಎಂಬುದು ಪೋಷಕರ ಆಸೆ.

ಇವರ ಆಸೆಗೆ ನೀರೆರೆಯುವಂತೆ ಹಲವಾರು ಸಂಸ್ಥೆಗಳು ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಆಯೋಜಿಸುತ್ತವೆ. ಇಂತಹ ಸಂಸ್ಥೆಗಳಲ್ಲಿ ‘ಮಕ್ಕಳಕೂಟ’ವೂ ಒಂದು.  ಕಳೆದ 48 ವರ್ಷಗಳಿಂದ ಒಂದು ವರ್ಷವೂ ತಪ್ಪಿಸದಂತೆ ಈ ಸಂಸ್ಥೆ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಆಯೋಜಿಸುತ್ತಾ ಬಂದಿದೆ. 2015ನೇ ಸಾಲಿನ ‘49ನೇ ಮಕ್ಕಳ ಹಾಗೂ ಮನರಂಜನಾ ಶಿಬಿರ’ಕ್ಕೆ  ಈಗಾಗಲೇ ಅರ್ಜಿಯನ್ನೂ ಆಹ್ವಾನಿಸಿದೆ.

ಮಕ್ಕಳ ಮೊದಲ ಸಂಸ್ಥೆ
ಮಕ್ಕಳ ಕೂಟ ಆರಂಭವಾಗಿದ್ದು 1938ರಲ್ಲಿ. ಕರ್ನಾಟಕದಲ್ಲಿ ಮಕ್ಕಳಿಗಾಗಿಯೇ ಆರಂಭವಾದ ಮೊದಲ ಸಂಸ್ಥೆ ‘ಮಕ್ಕಳ ಕೂಟ’ ಎನ್ನಬಹುದು. ಆರ್‌.ಕಲ್ಯಾಣಮ್ಮ ಎಂಬುವವರು ಚಾಮರಾಜ ಪೇಟೆಯ ಪುಟ್ಟ ಜಾಗವೊಂದರಲ್ಲಿ ಈ ಸಂಸ್ಥೆ ಆರಂಭಿಸಿದರು.

‘1969ರಲ್ಲಿ ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ನಮ್ಮ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮವೊಂದಕ್ಕೆ ಬಂದು ಮಕ್ಕಳ ಜತೆ ಎರಡು ತಾಸು ಇದ್ದು ಹೋಗಿದ್ದರು. ರಾಜಕುಮಾರ್‌, ವಿಷ್ಣುವರ್ಧನ್‌, ರಮೇಶ್‌ ಅರವಿಂದ್‌, ಯಶ್‌ ಸೇರಿದಂತೆ ಹಲವಾರು  ನಟರು ನಮ್ಮ ಸಂಸ್ಥೆಗೆ ಭೇಟಿ ನೀಡಿದ್ದಾರೆ’ ಎನ್ನುತ್ತಾರೆ ಮಕ್ಕಳ ಕೂಟದ ಪ್ರಧಾನ ಕಾರ್ಯದರ್ಶಿ ಗೋಪಾಲ್‌.

ಪ್ರವೇಶ ಪ್ರಕ್ರಿಯೆ
2015ನೇ ಸಾಲಿನ ‘ಬೇಸಿಗೆ ಶಿಬಿರ’ದ ನೋಂದಣಿ ಈಗಾಗಲೇ ಆರಂಭವಾಗಿದ್ದು, ನಿರ್ದಿಷ್ಟ ಸಂಖ್ಯೆಯ ಮಕ್ಕಳಿಗೆ ಮಾತ್ರ ಪ್ರವೇಶ ಕೊಡಲಾಗುತ್ತದೆ. ‘ನಮ್ಮ ಶಿಬಿರಕ್ಕೆ ಸೇರಲು ಬಯಸುವವರು ಮೊದಲು ಅರ್ಜಿ ಭರ್ತಿ ಮಾಡಿ ಕೊಡಬೇಕು. ನಂತರ ಮಕ್ಕಳ ಸಂದರ್ಶನ ನಡೆಸಲಾಗುತ್ತದೆ. ಸಂದರ್ಶನದಲ್ಲಿ ಉತ್ತಮವಾಗಿ  ಸಂವಹನ ನಡೆಸುವ ಮಕ್ಕಳನ್ನು ಶಿಬಿರಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. 7ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಮಾತ್ರ ಪ್ರವೇಶ. ಪ್ರತಿವರ್ಷ 500ರಿಂದ 600 ಮಕ್ಕಳು ಅರ್ಜಿ ಹಾಕುತ್ತಾರೆ. ಸಂದರ್ಶನ ಪ್ರಕ್ರಿಯೆಯೆಲ್ಲಾ ಮುಗಿದ ನಂತರ 300 ಮಕ್ಕಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಶಿಬಿರದ ಶುಲ್ಕ ₨ 2,500. ಸರ್ಕಾರಿ ಶಾಲೆಗಳ ಮಕ್ಕಳು, ಬಡ ಮಕ್ಕಳು ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ’ ಎನ್ನುತ್ತಾರೆ ಗೋಪಾಲ್‌.

ಎಷ್ಟೆಲ್ಲಾ ಕಲಿಕೆ
ನೃತ್ಯ, ಸಂಗೀತ, ನಾಟಕ, ಕರಾಟೆ, ಅಬಾಕಸ್, ಫೈರ್‌ ಫೈಟಿಂಗ್‌, ಕರ್ಸಿವ್‌ ರೈಟಿಂಗ್‌, ಮಿಮಿಕ್ರಿ, ಜಿಮ್ನಾಸ್ಟಿಕ್‌, ಜನಪದ ಸಂಭಾಷಣೆಗಳು, ಕಥಾ ವಾಚನ, ನೆನಪಿನ ಶಕ್ತಿ ವರ್ಧನೆ, ಮನೆ ಮದ್ದು, ದೈಹಿಕ ಶಿಕ್ಷಣ, ಚಿತ್ರಕಲೆ, ವೇದಿಕ್‌ ಮ್ಯಾಥ್ಸ್‌, ಯೋಗಾಭ್ಯಾಸ, ಪ್ರಥಮ ಚಿಕಿತ್ಸೆ ಮಾಡುವುದು ಹೇಗೆ ಎಂಬುದನ್ನೆಲ್ಲಾ ಹೇಳಿಕೊಡಲಾಗುತ್ತದೆ. ಪೊಲೀಸರು ಬಂದು ಟ್ರಾಫಿಕ್‌ ನಿಯಮಗಳ ಬಗ್ಗೆ ಹೇಳಿಕೊಡುತ್ತಾರೆ. ಶಿಬಿರಕ್ಕೆ ಬರುವ ಎಲ್ಲಾ ಮಕ್ಕಳಿಗೆ ಆರೋಗ್ಯ ಹಾಗೂ ದಂತ ಪರೀಕ್ಷೆ ನಡೆಸಲಾಗುತ್ತದೆ. ಈ ಶಿಬಿರದಲ್ಲಿ ಸುಮಾರು 40ಕ್ಕಿಂತಲೂ ಹೆಚ್ಚು ಚಟುವಟಿಕೆಗಳ ಬಗ್ಗೆ ಹೇಳಿಕೊಡಲಾಗುತ್ತದೆ. 300 ಮಕ್ಕಳನ್ನು 30ರಂತೆ 10ಗುಂಪುಗಳನ್ನಾಗಿ ವಿಭಾಗ ಮಾಡಿ, ಆ ಗುಂಪಿಗೆ ಒಬ್ಬ ಶಿಕ್ಷಕಿಯನ್ನು ನೇಮಕ ಮಾಡಲಾಗುತ್ತದೆ. ಈ ಎಲ್ಲಾ ಚಟುವಟಿಕೆಗಳನ್ನು ಮಕ್ಕಳಿಗೆ ಹೇಳಿಕೊಡಲು ಶಿಕ್ಷಕರನ್ನು ನೇಮಿಸಿಕೊಂಡಿದ್ದೇವೆ. ಶಿಬಿರದ ಕೊನೆಯಲ್ಲಿ ಮಕ್ಕಳಿಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳನ್ನೂ ಏರ್ಪಡಿಸುತ್ತೇವೆ’ ಎಂದು ಶಿಬಿರದ ಬಗ್ಗೆ ಮಾಹಿತಿ ನೀಡುತ್ತಾರೆ ಗೋಪಾಲ್‌.

‘ಉಪೇಂದ್ರ ನಮ್ಮ ಪ್ರಾಡಕ್ಟ್‌’
‘ಮೊದ ಮೊದಲು ಶಾಲೆಗೆ ಹೋದಾಗ ಹೇಗಿರುತ್ತದೆಯೋ ಅದೇ ಪ್ರತಿಕ್ರಿಯೆ ಮಕ್ಕಳ ಮುಖದಲ್ಲಿ ಮೊದಲ ದಿನದ ಶಿಬಿರದಲ್ಲಿ ಕಾಣುತ್ತೇವೆ. ದಿನ ಕಳೆದಂತೆ ಎಲ್ಲಾ ಮಕ್ಕಳೂ ಹೊಂದಿಕೊಂಡು ಬಹಳ ಚುರುಕಾಗಿ ಎಲ್ಲಾ ಚಟುವಟಿಕೆಗಳಲ್ಲಿಯೂ ಭಾಗವಹಿಸುತ್ತಾರೆ. ಬೆಳಿಗ್ಗೆ 9.30ಕ್ಕೆ ಆರಂಭವಾದರೆ ಸಂಜೆಯವರೆಗೂ ನಮ್ಮ ಶಿಬಿರ ಇರುತ್ತದೆ. ಬೆಳಿಗ್ಗೆ ಬಂದೊಡನೆ ಪ್ರಾರ್ಥನೆಯಿಂದ ದಿನ ಆರಂಭವಾಗುತ್ತದೆ. ಮಕ್ಕಳೂ ಬಹಳ ಎಂಜಾಯ್‌ ಮಾಡುತ್ತಾರೆ. ಕೆಲ ಮಕ್ಕಳು ಇಲ್ಲಿಗೆ ಬಂದು ಬಹಳ ಆಕ್ಟಿವ್‌ ಆಗಿದ್ದಾರೆ ಎಂದು ಅವರ ಪೋಷಕರು ಹೇಳಿದಾಗ ಖುಷಿ ಎನಿಸುತ್ತದೆ. ನಟ ಹಾಗೂ ನಿರ್ದೇಶಕ ಉಪೇಂದ್ರ ಕೂಡ ತಮ್ಮ ರಂಗಾಭ್ಯಾಸ ಬೆಳೆಸಿಕೊಂಡಿದ್ದು ಇಲ್ಲಿಂದಲೇ’ ಎಂದು 14 ವರ್ಷಗಳಿಂದ ಮಕ್ಕಳ ಕೂಟದ ಬೇಸಿಗೆ ಶಿಬಿರದಲ್ಲಿ ದೈಹಿಕ ಶಿಕ್ಷಕರಾಗಿರುವ ಮುನಿಸ್ವಾಮಿ ಹೇಳುತ್ತಾರೆ.

‘ನನ್ನ ಮಕ್ಕಳು ಬೋಲ್ಡ್‌ ಆಗಿದ್ದಾರೆ’
ನನ್ನ ಇಬ್ಬರೂ ಹೆಣ್ಣು ಮಕ್ಕಳು ಕಳೆದ ಮೂರು ವರ್ಷಗಳಿಂದ ಮಕ್ಕಳ ಕೂಟ ಸಂಸ್ಥೆ ಆಯೋಜಿಸುವ ಬೇಸಿಗೆ ಶಿಬಿರಕ್ಕೆ ಹೋಗುತ್ತಿದ್ದಾರೆ. ಈ ವರ್ಷವೂ ಅರ್ಜಿ ಹಾಕಿದ್ದೇವೆ. ಪ್ರತಿ ವರ್ಷ ಏಪ್ರಿಲ್‌ ಬರುವುದೇ ಕಾಯುತ್ತಿರುತ್ತಾರೆ. ಎಲ್ಲಾ ಕ್ಷೇತ್ರವೂ ಸಂಪೂರ್ಣ ವ್ಯಾಪಾರೀಕರಣಗೊಂಡಿರುವ ಈ ಸಮಾಜದಲ್ಲಿ, ಮಕ್ಕಳಿಗಾಗಿ ಅತೀ ಶ್ರದ್ಧೆಯಿಂದ ಬೇಸಿಗೆ ಶಿಬಿರ ಆಯೋಜಿಸುವ ನಿಸ್ವಾರ್ಥ ಸಂಸ್ಥೆಗೆ ನಮ್ಮ ಮಕ್ಕಳನ್ನು ಕಳುಹಿಸಲು ಹೆಮ್ಮೆಯೆನಿಸುತ್ತದೆ. ನಾನು ಕಂಡಂತೆ ಈ ಶಿಬಿರದಿಂದ ನನ್ನ ಮಕ್ಕಳು ಧೈರ್ಯವಾಗಿ ಮಾತನಾಡುವುದನ್ನು ಕಲಿತಿದ್ದಾರೆ. ವೇದಿಕೆ ಮೇಲೆ ನಿಂತು ಮೈಕ್‌ ಹಿಡಿದು ಬೋಲ್ಡ್‌ ಆಗಿ ಮಾತನಾಡುತ್ತಾರೆ. ಎಲ್ಲಾ ಮಕ್ಕಳ ಜತೆ ಸುಲಭವಾಗಿ ಬೆರೆಯುವುದನ್ನೂ ಕೂಡ ಕಲಿತಿದ್ದಾರೆ. ಶಾಲೆಯಲ್ಲಿ ಕಲಿಸದ ಅನೇಕ ವಿಷಯಗಳನ್ನು ಇಲ್ಲಿ ಹೇಳಿಕೊಡುತ್ತಾರೆ.  ಶಿಬಿರದ ಕಡೆ ದಿನ ನನ್ನ ಮಕ್ಕಳು ಸೇರಿದಂತೆ ಅನೇಕ ಮಕ್ಕಳ ಕಣ್ಣಲ್ಲಿ ನೀರು ತುಂಬಿರುತ್ತದೆ.
ಸುಧಾ ರಂಗರಾಜನ್‌, ಪೋಷಕಿ.

ಶಿಬಿರದ ವಿಶೇಷತೆ
ಮೂವತ್ತು ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಹಲವಾರು ಪಠ್ಯೇತರ ಚಟುವಟಿಕೆಗಳನ್ನು ಕಲಿಸಿಕೊಡುವ ಜತೆಗೆ ಶಿಬಿರದ ಕೊನೆಯ ದಿನ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯಲಾಗುತ್ತದೆ. ಅಷ್ಟೇ ಅಲ್ಲದೆ ಮೂವತ್ತೂ ದಿನ ಮಕ್ಕಳಿಗೆ ಉಚಿತ ಊಟ ಹಾಗೂ ನೀರಿನ ಸೌಲಭ್ಯವಿರುತ್ತದೆ.

ಶಿಬಿರದಲ್ಲಿ ಒಂದು ದಿನ ‘ಪರಿಸರ ದಿನ’ ಎಂದು ಆಚರಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಕರೆಸಲಾಗುತ್ತದೆ.  ಮಕ್ಕಳ ಜತೆಗೆ ಪೋಷಕರೂ ಪಾಲ್ಗೊಳ್ಳಬಹುದು. ಪೋಷಕರಿಗೂ ಒಂದು ದಿನ ಕಾರ್ಯಕ್ರಮ ಮಾಡಿ ಆಟಗಳನ್ನು ಆಡಿಸುತ್ತೇವೆ. ಬೇರೆ ಬೇರೆ ಕ್ಷೇತ್ರದಲ್ಲಿ ಹೆಸರು ಮಾಡಿರುವ ಗಣ್ಯ ವ್ಯಕ್ತಿಗಳನ್ನು ಶಿಬಿರಕ್ಕೆ ಕರೆಸಲಾಗುವುದು. 48 ವರ್ಷಗಳಲ್ಲಿ ಹಲವಾರು ಗಣ್ಯರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
ಗೋಪಾಲ್‌, ಮಕ್ಕಳ ಕೂಟದ ಪ್ರಧಾನ ಕಾರ್ಯದರ್ಶಿ

Write A Comment