ಕುಂದಾಪುರ: ಕೊಲ್ಲೂರು ಸಮೀಪದ ಹಳ್ಳಿಬೇರು ಎಂಬಲ್ಲಿ ಬುಧವಾರ ಮರವೊಂದು ಉರುಳಿಬಿದ್ದ ಪರಿಣಾಮ ಪುಟ್ಟ ಬಾಲಕಿ ಮೃತಪಟ್ಟಿದ್ದಾಳೆ. ಇಲ್ಲಿನ ವಾಸು ಮತ್ತು ಗಾಯತ್ರಿ ದಂಪತಿಯ ಪುತ್ರಿ ಸಂಗೀತಾ (4) ಮೃತಪಟ್ಟ ದುರ್ದೈವಿ.
ಮಧ್ಯಾಹ್ನದ ವೇಳೆ ಮನೆ ಸಮೀಪದ ನುಗ್ಗೆ ಮರದ ಬುಡದಲ್ಲಿ ಈಕೆ ಆಟವಾಡುತ್ತಿದ್ದಳು. ಒಮ್ಮೆಲೇ ಜೋರಾಗಿ ಬೀಸಿದ ಗಾಳಿಗೆ ನುಗ್ಗೆ ಮರ ಬುಡಸಹಿತ ಕಿತ್ತು ಮಗುವಿನ ಮೇಲೆಯೇ ಬಿದ್ದಿದೆ. ಗಂಭೀರ ಗಾಯಗೊಂಡ ಮಗುವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆತರಲಾಯಿತಾದರೂ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಬಡದಂಪತಿಯ 2 ಮಕ್ಕಳ ಪೈಕಿ ಏಕೈಕ ಹೆಣ್ಣು ಮಗು ಸಂಗೀತಾ.
ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.