ಕನ್ನಡ ವಾರ್ತೆಗಳು

ಹೊಸ ಯೋಜನೆಗಳಿಲ್ಲದ ಮಿಗತೆ ಬಜೆಟ್‌ಗೆ ಅನುಮೋದನೆ

Pinterest LinkedIn Tumblr

Mcc_Meet_photo_1

ಮಂಗಳೂರು,ಮಾರ್ಚ್.25: ಯಾವುದೇ ರೀತಿಯ ಹೊಸ ಯೋಜನೆಗಳ ಘೋಷಣೆ ಇಲ್ಲದೆ 2015-16ನೆ ಸಾಲಿಗೆ ಒಟ್ಟು ಅಂದಾಜು ಆದಾಯ 358.44 ಕೋಟಿ ರೂ. ಹಾಗೂ ವೆಚ್ಚ 358.42 ಕೋಟಿ ರೂ.ಗಳೊಂದಿಗೆ 1.50 ಲಕ್ಷ ರೂ.ಗಳ ಉಳಿಕೆ ಬಜೆಟ್‌ಗೆ ಮಂಗಳೂರು ಮಹಾನಗರ ಪಾಲಿಕೆಯು ಅನುಮೋದನೆ ನೀಡಿದೆ. ಮನಪಾ ಸಭಾಂಗಣದಲ್ಲಿ ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಬಜೆಟ್ ಸಂಬಂಧಿ ವಿಶೇಷ ಸಭೆಯಲ್ಲಿ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಯ ಅಧ್ಯಕ್ಷ ಹರಿನಾಥ್ 2014-15ನೆ ಸಾಲಿನ ಪರಿಷ್ಕೃತ ಅಂದಾಜು ಪಟ್ಟಿ ಹಾಗೂ 2015-16ನೆ ಸಾಲಿನ ಆಯವ್ಯಯ ಅಂದಾಜು ಪಟ್ಟಿಯನ್ನು ಮಂಡಿಸಿದರು. ಬಳಿಕ ಚರ್ಚೆಯ ಸಂದರ್ಭ ವಿಪಕ್ಷ ಸದಸ್ಯರು ಆಯವ್ಯಯ ಪಟ್ಟಿಯಲ್ಲಿ ಎಸ್‌ಎಫ್‌ಸಿ ವಿಶೇಷ ಅನುದಾನ ಅಭಿವೃದ್ಧಿ ಕಾಮಗಾರಿಗಳ ಕುರಿತು ಗೊಂದಲವಿರುವುದಾಗಿ ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ತಿದ್ದುಪಡಿಯೊಂದಿಗೆ ಬಜೆಟನ್ನು ಅನುಮೋದಿಸುವುದಾಗಿ ಮೇಯರ್ ತಿಳಿಸಿದರು.

2015-16ನೆ ಸಾಲಿಗೆ ನೀರಿನ ಶುಲ್ಕದಿಂದ 45 ಕೋಟಿ ರೂ., ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯಿಂದ 40 ಕೋಟಿ ರೂ., ಉದ್ದಿಮೆ ಪರವಾನಿಗೆಯಿಂದ 3 ಕೋಟಿ ರೂ., ಅಭಿವೃದ್ದಿ ಶುಲ್ಕಗಳು ಸೇರಿ 4.75 ಕೋಟಿ ರೂ., ಮಾರುಕಟ್ಟೆಗಳಿಂದ 2.75 ಕೋಟಿ ರೂ.,ಘನತ್ಯಾಜ್ಯ ಕರ ಮತ್ತು ಶುಲ್ಕ ರೂಪದಲ್ಲಿ 14.10 ಕೋಟಿ ರೂ. ಹಾಗೂ ಸರಕಾರದಿಂದ ಅನುದಾನ ಮತ್ತು ಇತರೆ ಮೂಲಗಳಿಂದ ಒಟ್ಟು 358.44 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಇದರಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕಲ್ಯಾಣ ಕಾರ್ಯಕ್ರಮಗಳ ಸಹಿತ 159.86 ಕೋಟಿ ರೂ., ದುರಸ್ತಿ ಮತ್ತು ನಿರ್ವ ಹಣೆ ಕಾಮಗಾರಿಗಳಿಗಾಗಿ 45.21 ಕೋಟಿ ರೂ., ಘನತ್ಯಾಜ್ಯ ನಿರ್ವಹಣೆಗಾಗಿ 20 ಕೋಟಿ ರೂ., ಭದ್ರತಾ ಸಿಬ್ಬಂದಿ ವೆಚ್ಚಗಳಿಗಾಗಿ 2 ಕೋಟಿ ರೂ. ಮತ್ತು ಇತರ ವೆಚ್ಚ ಸೇರಿ ಒಟ್ಟು 358.42 ಕೋಟಿ ರೂ. ಅಂದಾಜಿಸಲಾಗಿದೆ ಎಂದು ಹರಿನಾಥ್ ಬಜೆಟ್ ವಿವರ ನೀಡಿದರು.

ಜಾಹೀರಾತು ತೆರಿಗೆಗಾಗಿ ಇ ಟೆಂಡರ್
ಮನಪಾ ವ್ಯಾಪ್ತಿಯ ನಿರ್ದಿಷ್ಟ ಪ್ರದೇಶಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲು ಇ ಟೆಂಡರ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಇದರಿಂದ ತೆರಿಗೆ ರೂಪದಲ್ಲಿ ಸುಮಾರು 2.20 ಕೋಟಿ ರೂ. ನಿರೀಕ್ಷಿಸಲಾಗಿದೆ. ಪರವಾನಿಗೆ ಇಲ್ಲದೆ ವ್ಯಾಪಾರ ಮಾಡುವವರನ್ನು ಪತ್ತೆ ಹಚ್ಚಲು ಈಗಾಗಲೇ ನೀಡಲಾಗಿರುವ ಉದ್ದಿಮೆ ಪರವಾನಿಗೆಗಳ ನವೀಕರಣ, ಹೊಸ ಪರವಾನಿಗೆ ನೀಡುವ ಬಗ್ಗೆ ಸಮಿತಿಯ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಸಲಹೆ, ಮಾರ್ಗದರ್ಶನ ನೀಡಲು ಕ್ರಮ ತೆಗೆದುಕೊಂಡು ಆರೋಗ್ಯ ಇಲಾಖೆಯನ್ನು ಚುರುಕು ಗೊಳಿಸಲಾಗುವುದು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಹರಿನಾಥ್ ತಿಳಿಸಿದರು. ಪರಿಶಿಷ್ಟ ಜಾತಿ/ಪಂಗಡಕ್ಕೆ 3.37 ಕೋಟಿ ರೂ. ಮನಪಾದ ರಾಜಸ್ವದಲ್ಲಿ ಶೇ. 24.10 ಯೋಜನೆ ಯಡಿ 2015-16ನೆ ಸಾಲಿಗಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕಲ್ಯಾಣ ಕಾರ್ಯಕ್ರಮಗಳಿಗೆ 3.37 ಕೋಟಿ ರೂ. ಕಾದಿರಿಸಲಾಗಿದೆ.

ಜೂನ್ ಅಂತ್ಯಕ್ಕೆ ತುಂಬೆ ಅಣೆಕಟ್ಟು ಪೂರ್ಣ
ಮಂಗಳೂರು ಮಹಾನಗರ ಪಾಲಿಕೆಗೆ ನೀರು ಪೂರೈಕೆಯ ಪ್ರಮುಖ ವ್ಯವಸ್ಥೆಯಾಗಿರುವ ತುಂಬೆ ಯಲ್ಲಿ ನಿರ್ಮಾಣಗೊಳ್ಳುತ್ತಿರುವ ತುಂಬೆ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿ 2015ರ ಜೂನ್ ಅಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ಬಳಿಕ ಮನಪಾ ವ್ಯಾಪ್ತಿ ಗೊಳಪಡುವ ಎಲ್ಲಾ ಪ್ರದೇಶಗಳಿಗೂ ನಿರಂತರವಾಗಿ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಜೆಟ್ ವರದಿಯಲ್ಲಿ ತಿಳಿಸಲಾಗಿದೆ. 2008ರಲ್ಲಿ 48.21 ಕೋಟಿ ರೂ. ವೆಚ್ಚಕ್ಕೆ ಅಂದಾಜಿ ಸಲಾಗಿದ್ದ ಕಿಂಡಿ ಅಣೆಕಟ್ಟಿನ ವೆಚ್ಚ ಬಳಿಕ 75.50 ಕೋಟಿ ರೂ.ಗಳಿಗೆ ಏರಿಕೆಯಾಗಿ ಅನುದಾನದ ಕೊರತೆ ಯಿಂದ ಕಾಮಗಾರಿ ಕುಂಠಿತಗೊಂಡಿತ್ತು. ಇದೀಗ ರಾಜ್ಯ ಸರಕಾರದ ಅನುದಾನದೊಂದಿಗೆ ಕಾಮಗಾರಿ ಶೇ. 70ರಷ್ಟು ಪೂರ್ಣಗೊಂಡಿದೆ ಎಂದು ಹರಿನಾಥ್ ಸಭೆಯಲ್ಲಿ ತಿಳಿಸಿದರು.

ಪ್ರಥಮ ಸಭೆಗೆ ಉಪಮೇಯರ್ ಅನುಪಸ್ಥಿತಿ
ನೂತನ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ ಬಜೆಟ್‌ನ ವಿಶೇಷ ಸಭೆಯಲ್ಲಿ ಅನುಪಸ್ಥಿತ ರಾಗಿದ್ದು, ಪ್ರಥಮ ಸಭೆಗೇ ಗೈರುಹಾಜ ರಾಗುವ ಮೂಲಕ, ‘ಉಪಮೇಯರ್‌ರಿಂದ ಸಭೆಗೆ ಬಹಿಷ್ಕಾರ’ ಎಂಬ ವಿಪಕ್ಷ ನಾಯಕರ ಆಕ್ಷೇಪಕ್ಕೆ ಗುರಿಯಾದರು. ಈ ಸಂದರ್ಭ ಪ್ರತಿಕ್ರಿಯಿಸಿದ ಮೇಯರ್ ಜೆಸಿಂತಾ, ಉಪ ಮೇಯರ್ ತುರ್ತು ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಿರುವುದರಿಂದ ಸಭೆಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಸಭೆಯ ಆರಂಭದಲ್ಲಿ ಹಿರಿಯ ರಂಗ ಕಲಾವಿದ ಕೆ.ಎನ್.ಟೇಲರ್ ಹಾಗೂ ಐಎಎಸ್ ಅಧಿಕಾರಿ ಡಿ.ಕೆ. ರವಿಯವರಿಗೆ ಸಂತಾಪ ಸೂಚಿಸಲಾಯಿತು. ಮನಪಾ ಆಯುಕ್ತೆ ಹೆಫ್ಸಿಬಾ ರಾಣಿ ಕೊರ್ಲಪಟಿ, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ದೀಪಕ್ ಪೂಜಾರಿ, ಪ್ರಕಾಶ್ ಕೆ. ಸಾಲ್ಯಾನ್, ಕೇಶವ ಉಪಸ್ಥಿತರಿದ್ದರು.

Write A Comment