ಕನ್ನಡ ವಾರ್ತೆಗಳು

ಸೈಕಲ್‌ಗೆ ಕೆಎಸ್‌ಆರ್‌ಟಿಸಿ ಬಸ್ಸ್ ಡಿಕ್ಕಿ : ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಬಾಲಕ ಸಾವು

Pinterest LinkedIn Tumblr

bus_cycal_boy_1

ಸುಳ್ಯ,ಮಾರ್ಚ್.24 : ಸುಳ್ಯ ತಾಲೂಕಿನ ಅರಂಬೂರು ಎಂಬಲ್ಲಿ ಸೈಕಲ್‌ಗೆ ಕೆಎಸ್‌ಆರ್‌ಟಿಸಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಸುಳ್ಯ ಕಲ್ಲುಮುಟ್ಲು ನಿವಾಸಿ ಅಹಮ್ಮದ್ ಎಂಬವರ ಮಗ ಅಬು ತಾಹಿರ್ (10) ಮೃತಪಟ್ಟಿದ್ದಾನೆ.

ಹುಟ್ಟು ಹಬ್ಬದ ದಿನವಾದ ಸೋಮವಾರ ತನ್ನ ಒಡ ಹುಟ್ಟಿದ ಅಕ್ಕನಿಗೆ ಸಿಹಿ ತಿಂಡಿ ನೀಡಲು ಅರಂಬೂರಿನಲ್ಲಿರುವ ಮಾವನ ಮನೆಗೆ ಸೈಕಲ್‌ನಲ್ಲಿ ತೆರಳಿದ್ದ. ಅಲ್ಲಿಂದ ಸುಳ್ಯ ಕಡೆಗೆ ಬರುತ್ತಿದ್ದಾಗ ಅರಂಬೂರು ಅರಣ್ಯ ಇಲಾಖೆಯ ಡಿಪೋ ಬಳಿ ಮಡಿಕೇರಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಸೈಕಲ್‌ಗೆ ಹೊಡೆಯಿತು. ಪರಿಣಾಮ ತಾಹಿರ್‌ನ ಎಡಕಾಲಿನ ತೊಡೆ ಭಾಗ ಬಸ್ಸಿನಡಿಗೆ ಸಿಲುಕಿತು. ಅಲ್ಲದೆ ಎರಡೂ ಪಾದ ನಜ್ಜುಗುಜ್ಜಾಗಿ, ತಲೆ ಒಡೆದು ಗಂಭೀರ ಗಾಯಗೊಂಡು ರಸ್ತೆಗೆ ಬಿದ್ದ.

ಗಾಯಗೊಂಡ ತಾಹಿರ್‌ನನ್ನು ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ದಾರಿ ಮಧ್ಯೆ ಮೃತಪಟ್ಟ ಎಂದು ತಿಳಿದು ಬಂದಿದೆ. ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಶವ ಮಹಜರು ನಡೆಸಲಾಗಿದ್ದು ಶವವನ್ನು ವಾರೀಸುದಾರರಿಗೆ ಒಪ್ಪಿಸಲಾಯಿತು.

bus_cycal_boy_2

ಸರಕಾರಿ ಬಸ್‌ನ ಚಾಲಕ ಮತ್ತು ನಿರ್ವಾಹಕರಿಬ್ಬರು ಬಸ್ಸನ್ನು ಸ್ಥಳದಲ್ಲೇ ಬಿಟ್ಟು, ಕಾರೊಂದರಲ್ಲಿ ಪರಾರಿಯಾಗಿದ್ದಾರೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತ ಬಾಲಕನಿಗೆ ತಂದೆ, ತಾಯಿ, ಮೂವರು ಸಹೋದರಿಯರು ಇದ್ದಾರೆ.

ಶಾಲೆಗೆ ರಜೆ:  ಅಬು ತಾಹಿರ್ ಸುಳ್ಯ ಗ್ರೀನ್‌ವ್ಯೆ ಶಾಲೆಯ 5ನೇ ತರಗತಿಯಲ್ಲಿ ಓದುತ್ತಿದ್ದು, ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಈತನ ಸಾವಿನ ಸುದ್ದಿ ಕೇಳಿ ಶಾಲೆಗೆ ಮತ್ತು ಮುಹಿಯುದ್ದೀನ್ ಮದರಸಕ್ಕೆ ರಜೆ ನೀಡಲಾಗಿದೆ.

ಅಧಿಕಾರಿಗಳ ಭೇಟಿ: ಅಪಘಾತದ ಸುದ್ದಿ ತಿಳಿದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸುಳ್ಯ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಶಾಲಾ ಆಡಳಿತ ಮಂಡಳಿ, ಶಾಲಾ ಶಿಕ್ಷಕರು ಮತ್ತಿತರ ಗಣ್ಯರು ಈ ಸಂದರ್ಭ ಉಪಸ್ಥಿತರಿದ್ದರು.

Write A Comment