ಕನ್ನಡ ವಾರ್ತೆಗಳು

ಕಾಳು ಮೆಣಸು ಸಂಸ್ಕರಣೆ: ಬೆಳೆಗಾರರಿಗೆ ಸಲಹೆ

Pinterest LinkedIn Tumblr

black_pepare_photo

ಮಂಗಳೂರು, ಮಾ. 19:  ಕರಾವಳಿ ಪ್ರಾಂತ್ಯದಲ್ಲಿ ಕರಿಮೆಣಸು ಮೇ-ಜೂನ್ ತಿಂಗಳಲ್ಲಿ ಹೂ ಬಿಟ್ಟು 6-8 ತಿಂಗಳಲ್ಲಿ ಕಾಯಿ ಕಟ್ಟಿ ಬೆಳೆದು ಕೊಯ್ಲಿಗೆ ಸಿದ್ದವಾಗುತ್ತದೆ. ಹೂಗೊಂಚಲಿನ ಪೂರ್ಣ ಬಲಿತ ಕಾಳುಗಳಲ್ಲಿ ಒಂದೆರಡು ಕಾಳುಗಳು ಕಂದು ಬಣ್ಣಕ್ಕೆ ತಿರುಗಿದಾಗ ಆ ಗೊಂಚಲುಗಳನ್ನು ಪೂರ್ಣವಾಗಿ ಕೈಯಿಂದ ಕೊಯ್ಲು ಮಾಡಬೇಕು. ಕೊಯ್ಲು ಮಾಡಿದ ಕಾಳಿನ ಗೊಂಚಲುಗಳನ್ನು ಒಂದೆರಡು ದಿನಗಳಲ್ಲಿ ಕಾಳುಗಳನ್ನು ಬೇರ್ಪಡಿಸಿ 7 ರಿಂದ 10 ದಿನಗಳವರೆಗೆ ಸೂರ್ಯನ ಬಿಸಿಲಿನಲ್ಲಿ ಒಣಗಿಸಬೆಕು.

ಚೆನ್ನಾಗಿ ಒಣಗಿದ ಕಾಳುಮೆಣಸಿನ ಕಾಳುಗಳ ಮೇಲ್ಮೈ ಸುಕ್ಕಾಗಿರುವ ಚಿಹ್ನೆಗಳನ್ನು ಕಾಣಬಹುದು. ತಾಜಾ ಕಳುಗಳನ್ನು ಒಣಗಿಸುವ ಮುನ್ನ ಒಂದು ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ಮುಳುಗಿಸಿ ತೆಗೆದು ಒಣಗಿಸುವದರಿಂದ ಕಾಳುಗಳು ಆಕರ್ಷಕ ಹೊಳಪನ್ನು ಹೊಂದುವುದಲ್ಲದೆ, ಒಣಗಿಸುವ ಕಾಲವನ್ನು ಕಡಿಮೆ ಮಾಡಬಹುದು. ಕಾಳುಗಳನ್ನು ಒಣಗಿಸಲು ಮೆಂತ್ಯೆ ಹಿಟ್ಟಿನಿಂದ ಸಾರಿಸಿದ ಬಿದಿರಿನ ಚಾಪೆ ಅಥವಾ ಕಂಕ್ರಿಟ್ ನೆಲದ ಮೇಲೆ ಅಥವಾ ಹೆಚ್ಚು ದಪ್ಪದ ಪಾಲಿಥೀನ್ ಹಳೆ ಬಳಸುವಂತೆ ಶಿಫಾರಸ್ಸು ಮಾಡಲಾಗಿದೆ. ಇದರಿಂದ ಒಣಗಿದ ಕಾಳುಗಳು ಹೊಳಪಾಗಿರುವುದಲ್ಲದೆ ಸ್ವಚ್ಚವಾಗಿದ್ದು ಉತ್ತಮ ಗುಣಮಟ್ಟ ಹೊಂದಿರುವುದು. ಅಥವಾ ಬೆರ್ಪಡಿಸಿದ ಕಾಳುಗಳನ್ನು ಪಾರದರ್ಶಕ ಪ್ಲಾಸ್ಟಿಕ್ ಹಳೆ ನಡುವೆ ತೆಳುವಾಗಿ ಹರಡಿ ಬೆಳಗಿನ ಬಿಸಿಲಿನಲ್ಲಿ ಒಂದೂವರೆ ಗಂಟೆಗಳ ತನಕ ಒಣಗಿಸಬೇಕು. ನಂತರ 5-6  ದಿವಸಗಳ ಕಾಲ ಒಣಗಿಸಬೇಕು.

ಬಿಳಿ ಮೆಣಸು ಸಂಸ್ಕರಣೆ; ಬಿಳಿಮೆಣಸನ್ನು ತಯಾರಿಸಲು ಬೇರ್ಪಡಿಸಿದ ತಾಜಾ ಹಣ್ಣಾದ ಕಾಳುಗಳನ್ನು ಗೋಣಿ ಚೀಲದಲ್ಲಿ ತುಂಬಿಸಿ 8-10 ದಿವಸಗಳ ಕಾಲ ಹರಿಯುವ ನೀರಿನಲ್ಲಿ ಮುಳುಗಿಸಿಡಬೇಕು. ನಂತರ ಕಾಳುಗಳ ಹೊರಕವಚವನ್ನು ತಿಕ್ಕಿ ತೆಗೆದು, ತೊಳೆದು ನಂತರ ಸೂರ್ಯನ ಬಿಸಿಲಿನಲ್ಲಿ ಒಣಗಿಸಬೇಕು. ಪಣಿಯೂರ್-1 ಮೆಣಸಿನ ತಳಿಯ ಕಾಳುಗಳು ಬಿಳಿ ಮೆಣಸನ್ನು ತಯಾರಿಸಲು ಸೂಕ್ತವಾಗಿರುತ್ತವೆ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Write A Comment