ಕನ್ನಡ ವಾರ್ತೆಗಳು

ಮೂಲ್ಕಿ ಪಾದೂರು ಪೈಪ್‌ಲೈನ್ ಕಾಮಗಾರಿಗೆ ಆಕ್ಷೇಪ

Pinterest LinkedIn Tumblr

 mulk_pipeline_photo

ಮೂಲ್ಕಿಮಾರ್ಚ್.19 : ಪಾದೂರು ಐ‌ಎಸ್‌ಪಿ‌ಆರ್‌ಎಲ್ ಯೋಜನೆಗಾಗಿ ತೋಕೂರು ಪ್ರದೇಶದಿಂದ ಪಾದೂರಿನವರೆಗೆ ಕಚ್ಚಾ ತೈಲವನ್ನು ಸಾಗಿಸಲು ಉದ್ದೇಶಿಸಿರುವ ಪೈಪ್‌ಲೈನ್ ಕಾಮಗಾರಿಯು ಮೂಲ್ಕಿ ಸಮೀಪದ ಕಿಲ್ಪಾಡಿ ಪಂಚಾಯಿತಿ ವ್ಯಾಪ್ತಿಯ ಅತಿಕಾರಿಬೆಟ್ಟು ಸಮೀಪದ ಮೈಲೊಟ್ಟು ಬಳಿಯ ತಿಂಗೋಳೆ ಎಂಬಲ್ಲಿ ಗುರುವಾರ ಆರಂಭವಾಗಿದ್ದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಕಚ್ಚಾತೈಲದ ಪೈಪ್‌ಲೈನ್ ಅಳವಡಿಸಲು ಐ‌ಎಸ್‌ಪಿ‌ಆರ್‌ಎಲ್ ಕಂಪೆನಿಯು ಪಶ್ಚಿಮ ಬಂಗಾಲ ಮೂಲದ ಕಂಪೆನಿಯೊಂದಕ್ಕೆ ನೀಡಿದ್ದು ಈಗಾಗಲೇ ತೋಕೂರಿನಿಂದ ಸರ್ವೆಕಾರ್ಯ ಮುಗಿಸಿದ್ದು ಅಲ್ಲಲ್ಲಿ ಗುರುತು ಕಂಬಗಳನ್ನು ಅಳವಡಿಸಿ ಜಮೀನು ಮಾಲಕರಿಗೆ ನೋಟೀಸು ನೀಡಿದ್ದಾರೆ. ಆದರೆ ಸರ್ವೆಕಾರ್ಯ ಅವೈಜ್ಞಾನಿಕವಾಗಿದ್ದು ಜಮೀನು ಕಳೆದುಕೊಳ್ಳುವ ರೈತರಿಗೆ ಸಮರ್ಪಕ ರೀತಿಯ ಪರಿಹಾರ ಇನ್ನೂ ಸಿಕ್ಕಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಪೈಪ್‌ಲೈನ್ ಅಳವಡಿಕೆಯ ಉಪ ಗುತ್ತಿಗೆಯನ್ನು ಕಿಲ್ಪಾಡಿಯಿಂದ ಪಾದೂರಿನವರೆಗೆ ಮೂಲ್ಕಿಯ ಗುತ್ತಿಗೆದಾರರಿಗೆ ಹಾಗೂ ತೋಕೂರಿನಿಂದ ಕಿಲ್ಪಾಡಿಯವರೆಗೆ ಪೆರ್ಮುದೆಯ ಗುತ್ತಿಗೆದಾರರಿಗೆ ನೀಡಿರುವುದರಿಂದ ಗುರುವಾರ ಮೂಲ್ಕಿಯ ಗುತ್ತಿಗೆದಾರರು ಕಾಮಗಾರಿಯನ್ನು ಅತಿಕಾರಿಬೆಟ್ಟುವಿನಿಂದ ಪ್ರಾರಂಭಿಸಿದ್ದರು. ಇದನ್ನು ಸ್ಥಳೀಯ ನಾಯಕ ದೆಪ್ಪುಣಿಗುತ್ತು ಕಿಶೋರ್ ಶೆಟ್ಟಿ ನೇತೃತ್ವದಲ್ಲಿ ಕಾಮಗಾರಿಯನ್ನು ಗ್ರಾಮಸ್ಥರು ತಡೆದಿದ್ದಾರೆ. ಪ್ರತಿಭಟನೆಯ ನಡುವೆ ಗುತ್ತಿಗೆದಾರರು ಗ್ರಾಮಸ್ಥರಿಗೆ ಪೊಲೀಸ್ ರಕ್ಷಣೆಯಲ್ಲಿ ಕಾಮಗಾರಿ ನಡೆಸುವಾಗ ವಿರೋಧಿಸಿದರೆ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದರಿಂದ ಕ್ಷಣಕಾಲ ಮಾತಿನ ಚಕಮಕಿ ನಡೆದಿದ್ದು ಕೊನೆಗೆ ದೂರವಾಣಿಯ ಮೂಲಕ ಸಚಿವ ಅಭಯಚಂದ್ರ ಜೈನ್‌ರಲ್ಲಿ ದೂರಿಕೊಂಡ ಗ್ರಾಮಸ್ಥರು ಕಾಮಗಾರಿಯನ್ನು ನಿಲ್ಲಿಸಲು ಯಶಸ್ಸಾಗಿದ್ದಾರೆ.

ಈ ಬಗ್ಗೆ ಕಿಶೋರ್ ಶೆಟ್ಟಿ ಪ್ರತಿಕ್ರಿಯಿಸಿ ಸ್ಥಳೀಯರಿಗೆ ಪೈಪ್‌ಲೈನ್ ಕಾಮಗಾರಿಯಿಂದ ಫಲವತ್ತಾದ ಕೃಷಿ ಭೂಮಿ ನಾಶವಾಗುವುದೇ ಅಲ್ಲದೆ ಅಂತರ್ಜಲದಲ್ಲಿಯೂ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಗ್ರಾಮಸ್ಥರನ್ನು ಒಟ್ಟು ಸೇರಿಸಿ ಮುಂದಿನ ದಿನಗಳಲ್ಲಿ ಪಾದೂರು ಪೈಪ್‌ಲೈನ್ ಕಾಮಗಾರಿ ವಿರುದ್ದ ಉಗ್ರ ಪ್ರತಿಭಟನೆ ನಡೆಸಲಾಗುವುದಲ್ಲದೆ ಗುತ್ತಿಗೆದಾರರ ಬೆದರಿಕೆಗೆ ಬಗ್ಗುವುದಿಲ್ಲ ಕೃಷಿ ಭೂಮಿಗಾಗಿ ಜೈಲಿಗೆ ಹೋಗಲೂ ಸಿದ್ದ ಎಂದು ಹೇಳಿದ್ದಾರೆ.

ನರೇಂದ್ರ ಕೆರೆಕಾಡು_

Write A Comment