ಕನ್ನಡ ವಾರ್ತೆಗಳು

ಸಂಘಟನೆ ಮತ್ತು ಸಮಾಜ ಸೇವಾ ಕ್ಷೇತ್ರದ ಯುವ ಸಾಧಕ, ಅನಿವಾಸಿ ಭಾರತೀಯ ಲೀಲಾಧರ್ ಬೈಕಂಪಾಡಿಯವರಿಗೆ ‘ರಾಷ್ಟ್ರೀಯ ಏಕತಾ ಪ್ರಶಸ್ತಿ’

Pinterest LinkedIn Tumblr

Leeladhar_Baikampady_Snap

ನವ ದೆಹಲಿ,ಮಾರ್ಚ್.19 : ತನ್ನ ಬಹುಮುಖ ಸಮಾಜ ಸೇವೆ, ವೈವಿಧ್ಯಮಯ ಸಾಹಿತ್ಯ-ಸಂಸ್ಕೃತಿ-ಸಾಂಘಿಕ ಚಟುವಟಿಕೆಗಳು ಮತ್ತು ಇತರ ವಿಶಿಷ್ಠ ಸಾಧನೆಗಳಿಗಾಗಿ ಇತ್ತೀಚೆಗೆ ಬೆಂಗಳೂರು ಮೂಲದ ‘ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನ’ದವರು ಕೊಡಮಾಡಿದ ‘ರಾಷ್ಟ್ರೀಯ ಭೂಷಣ’ ಪ್ರಶಸ್ತಿಗೆ ಭಾಜನರಾದ ಬಹ್ರೈನ್ ವಾಸ್ತವ್ಯದ ಅನಿವಾಸಿ ಭಾರತೀಯ ಲೀಲಾಧರ್ ಬೈಕಂಪಾಡಿಯವರು ಈಗ ಮತ್ತೊಮ್ಮೆ ತಮ್ಮ ಯಶಸ್ವಿ ಮುಂದಾಳತ್ವ, ಸಾಮಾಜಿಕ ಮತ್ತು ಸಂಘಟನಾ ಕ್ಷೇತ್ರದ ಸಾಧನೆಗಳಿಗಾಗಿ ನವ ದೆಹಲಿಯ ‘ಆಲ್ ಇಂಡಿಯಾ ನ್ಯಾಷನಲ್ ಯೂನಿಟಿ ಕೌನ್ಸಿಲ್’ ಸಂಸ್ಥೆಯು ನೀಡುವ 2015ರ ಸಾಲಿನ ರಾಷ್ಟ್ರ ಮಟ್ಟದ ಪ್ರಶಸ್ತಿಯಾದ ‘ರಾಷ್ಟ್ರೀಯ ಏಕತಾ ಪುರಸ್ಕಾರ’ಕ್ಕೆ ಆಯ್ಕೆಗೊಂಡಿರುತ್ತಾರೆ. 

ಅತಿ ಎಳವೆಯಿಂದ ಆರಂಭಿಸಿ ನಿರಂತರವಾಗಿ ಗತ ಸುಮಾರು 28 ವರ್ಷಗಳಿಂದ ನಿಸ್ವಾರ್ಥವಾದ ನಾಡು-ನುಡಿ ಸೇವೆ, ಸಾಹಿತ್ಯ-ಸಂಸ್ಕೃತಿ ಸೇವೆ ಹಾಗೂ ಸಮುದಾಯ-ಸಂಘಟನೆ-ಸಮಾಜ ಸೇವೆಯನ್ನು ದೇಶ-ವಿದೇಶಗಳಲ್ಲಿ ಗೈಯುತ್ತಾ ಬಂದಿರುವ ಲೀಲಾಧರ್ ಬೈಕಂಪಾಡಿಯವರು ಕಳೆದ 17 ವರ್ಷಗಳಿಂದ ಉದ್ಯೋಗ ನಿಮಿತ್ತ ಕೊಲ್ಲಿಯ ಬಹ್ರೈನ್ ದೇಶದಲ್ಲಿ ವಾಸ್ತವ್ಯವಿದ್ದು, ಖಾಸಗಿ ಕಂಪನಿ ಸಮೂಹವೊಂದರ ವಿತ್ತ ಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಬಹ್ರೈನ್ ಮಾತ್ರವಲ್ಲದೆ ಅವಿಭಜಿತ ದ.ಕ. ಜಿಲ್ಲೆ, ಬೆಂಗಳೂರು ಮತ್ತು ಮುಂಬೈಯಲ್ಲೂ ವಿವಿಧ ಸಮೂಹ ಮತ್ತು ಸಂಘಟನೆಗಳ ಮೂಲಕ ತುಳುವರು, ಕನ್ನಡಿಗರು ಹಾಗೂ ಭಾರತೀಯರಿಗೆ ಸಂಬಂಧಿಸಿದಂತೆ ವಿವಿಧ ಸಾಮಾಜಿಕ, ಸಾಂಘಿಕ, ಸಾಹಿತ್ಯಿಕ ಹಾಗೂ ಜನಪರ ಸೇವಾ ಕಾರ್ಯಚಟುವಟಿಕೆಗಳಲ್ಲಿ ಸದಾ ನಿರತರಾಗಿದ್ದಾರೆ. ಇವರೋರ್ವ ಚತುರ ಸಂಘಟಕ, ಸಮಾಜ ಸೇವಾ ಕಾರ್ಯಕರ್ತ, ಪ್ರಶಸ್ತಿ ವಿಜೇತ ರಂಗ ಕಲಾವಿದ, ಯುವ ಸಾಹಿತಿ, ಸಮಾಜಮುಖಿ ಚಿಂತನೆಯ ತಥಾ ಪ್ರಗತಿಪರ ವಿಚಾರಧಾರೆಯ ಯುವ ಸಾಮಾಜಿಕ ಮುಂದಾಳುವಾಗಿ ನಾಡಿನ ಮತ್ತು ಹೊರನಾಡಿನ ತುಳುವರು, ಕನ್ನಡಿಗರು ಹಾಗೂ ಭಾರತೀಯರ ಮಧ್ಯೆ ಬಹಳವಾಗಿ ಗುರುತಿಸಿಕೊಂಡವರಾಗಿದ್ದಾರೆ.

ಮಂಗಳೂರು ಮತ್ತು ಮುಂಬೈಯಲ್ಲಿ ವ್ಯಾಸಂಗವನ್ನು ಗೈದಿರುವ ಇವರು ನಾಯಕತ್ವವನ್ನು ತಾರುಣ್ಯದಿಂದಲೂ ಮೈಗೂಡಿಸಿಕೊಂಡಿದ್ದು, ಈ ಹಿಂದೆ ಸರ್ವ ಕಾಲೇಜು ವಿದ್ಯಾರ್ಥಿ ಕ್ಷೇತ್ರದ ಪ್ರತಿನಿಧಿಯಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟರ್ ಆಗಿಯೂ ಆಯ್ಕೆಗೊಂಡಿದ್ದರು. ಬಹ್ರೈನ್‍ನಲ್ಲಿ ಇಂಡಿಯನ್ ಕ್ಲಬ್, ಕರ್ನಾಟಕ ಸೋಶಿಯಲ್ ಕ್ಲಬ್, ಮಹಾರಾಷ್ಟ್ರ ಕಲ್ಚರಲ್ ಸೊಸೈಟಿ ಮುಂತಾದ ಸಂಸ್ಥೆಗಳಲ್ಲಿ ಸದಸ್ಯರಾಗಿರುವ ಇವರು ಸದ್ಯ ಮೊಗವೀರ್ಸ್ ಬಹ್ರೈನ್ ಸಂಸ್ಥೆಯ ದಶಮಾನೋತ್ಸವ ಅವಧಿಯ ಅಧ್ಯಕ್ಷರಾಗಿಯೂ ಸದಾ ಸಕ್ರಿಯರಾಗಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಯೋರ್ವರನ್ನು ಕೊಲ್ಲಿಯ ನೆಲದಲ್ಲಿ ಕಾಣುವ ಬಹ್ರೈನ್ ಕನ್ನಡಿಗರ ಬಹು ಕಾಲದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ತಾನು ಏಕಾಂಗಿಯಾಗಿ ಪ್ರಯತ್ನಿಸಿ 2008ರ ನವೆಂಬರ್‌ನಲ್ಲಿ ಕರ್ನಾಟಕದ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಉನ್ನತ ಮಟ್ಟದ ಸರಕಾರಿ ನಿಯೋಗ ಸಹಿತವಾಗಿ ಬಹ್ರೈನ್‍ಗೆ ಭೇಟಿ ನೀಡುವಂತೆಯೂ ಮತ್ತು ಅಲ್ಲಿ ಕನ್ನಡ ಭವನದ ಸ್ಥಾಪನೆಗೆ ಅವರು ರೂ.1 ಕೋಟಿಯ ವಾಗ್ದಾನವೀಯುವಂತೆಯೂ ಮಾಡಿದುದು ಇವರು ವಿದೇಶದಲ್ಲಿ ಗೈದ ಮಹತ್ವದ ಸಮಾಜಮುಖಿ ಸಾಧನೆಗಳಲ್ಲಿ ಒಂದಾಗಿದೆ. ನಾಡು ಮತ್ತು ಹೊರನಾಡಿನಲ್ಲಿ ಕೆಲವು ಸಾಮಾಜಿಕ ಸಂಘಟನೆಗಳ ಸ್ಥಾಪನೆಯ ರೂವಾರಿಯೂ ಆಗಿರುವ ಇವರು, ತನ್ನದೇ ಸಂಯೋಜಕತ್ವದ ಕಾಂಚನ್ ಪ್ರತಿಷ್ಠಾನದ ಮೂಲಕವೂ ಆಗಾಗ ವೈವಿಧ್ಯಮಯ ಜನಪರ ಚಟುವಟಿಕೆಗಳನ್ನು ಗೈಯುತ್ತಿರುತ್ತಾರೆ.

ಗತ ಸುಮಾರು 28 ವರ್ಷಗಳಿಂದ ಸಂಘಟನೆ ಮತ್ತು ಸಮಾಜ ಸೇವಾ ಕ್ಷೇತ್ರಕ್ಕೆ ಇವರು ನಿರಂತರವಾಗಿ ನೀಡುತ್ತಾ ಬಂದಿರುವ ಮೌಲಿಕ ಕೊಡುಗೆಗಳನ್ನು ಪರಿಗಣಿಸಿ ನವ ದೆಹಲಿಯ ‘ಆಲ್ ಇಂಡಿಯಾ ನ್ಯಾಷನಲ್ ಯೂನಿಟಿ ಕೌನ್ಸಿಲ್’ ಸಂಸ್ಥೆಯು ಇವರನ್ನು ತನ್ನ ರಾಷ್ಟ್ರ ಮಟ್ಟದ ಪ್ರತಿಷ್ಠಿತ ‘ರಾಷ್ಟ್ರೀಯ ಏಕತಾ ಪ್ರಶಸ್ತಿ’ಗೆ ಆಯ್ಕೆಗೊಳಿಸಿದ್ದು, ಪ್ರಶಸ್ತಿಯನ್ನು ಬರುವ ಮಾರ್ಚ್ 23ರಂದು ನವ ದೆಹಲಿಯ ಚಾಣಕ್ಯಪುರಿಯ ತೀನ್‍ಮೂರ್ತಿ ಭವನದಲ್ಲಿ ಜರುಗಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಸಂಸ್ಮರಣೆಯ ರಾಷ್ಟ್ರೀಯ ಐಕ್ಯತಾ ಉತ್ಸವದ ಸಮಾರಂಭದಲ್ಲಿ ಪ್ರದಾನಿಸಲಾಗುವುದು ಎಂದು ಸಂಸ್ಥೆಯ ಕಾರ್ಯದರ್ಶಿ ಎಸ್.ಪಿ. ಸಿಂಗ್ ಅವರು ಅಧಿಕೃತವಾಗಿ ತಿಳಿಸಿರುತ್ತಾರೆ. ವಿಜೇತ ಸಾಧಕ ಲೀಲಾಧರ್ ಬೈಕಂಪಾಡಿಯವರು ಈ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಮಾಜಿ ರಾಜ್ಯಪಾಲರುಗಳಾದ ಡಾ. ಭೀಷ್ಮ ನಾರಾಯಣ ಸಿಂಗ್ ಮತ್ತು ಡಾ. ದೇವಾನಂದ ಕೊನ್ವರ್ ಹಾಗೂ ಆಲ್ ಇಂಡಿಯಾ ಕಾಂಗ್ರೆಸ್ಸ್ ಕಮಿಟಿಯ ಕಾರ್ಯದರ್ಶಿಯಾದ ಹರಿಕೇಶ್ ಬಹಾದ್ದೂರ್ ಮುಂತಾದ ಉನ್ನತ ಮಟ್ಟದ ಗಣ್ಯ ಅತಿಥಿಗಳ ಘನ ಉಪಸ್ಥಿತಿಯಲ್ಲಿ ಸ್ವೀಕರಿಸಲಿದ್ದಾರೆ.

Write A Comment