ಪುತ್ತೂರು /ಉಪ್ಪಿನಂಗಡಿ. ಮಾ.19: ಎರಡು ದ್ವಿಚಕ್ರ ವಾಹನ ಹಾಗೂ ಓಮ್ನಿ ಕಾರು ನಡುವೆ ನಡೆದ ಸರಣಿ ಅಪಘಾತದಲ್ಲಿ ಓರ್ವ ಬೈಕ್ ಸವಾರ ಮೃತಪಟ್ಟು, ಐವರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿಯ ಕುಮಾರಧಾರಾ ಸೇತುವೆಯ ಬಳಿ ಮಂಗಳವಾರ ತಡರಾತ್ರಿ ನಡೆದಿದೆ.
ಉಪ್ಪಿನಂಗಡಿ ಸಮೀಪದ ಕರ್ವೇಲು ನಿವಾಸಿ ಅಬೂಬಕರ್ ಎಂಬವರ ಪುತ್ರ ಅರ್ಫಾನ್(20) ಮೃತಪಟ್ಟ ಯುವಕ. ಬೆಳಿಯೂರು ಮಸೀದಿಯ ಖತೀಬ್ ಅಬ್ದುರ್ರಝಾಕ್ ಝುಹ್‌ರಿ(32), ಬೈಕ್ ಸವಾರರಾದ ಇಸ್ಮಾಯೀಲ್ ಹಾಗೂ ಮುಸ್ತಫಾ ಎಂಬವರು ಗಾಯಗೊಂಡಿದ್ದು, ಈ ಪೈಕಿ ಖತೀಬ್‌ರ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದು ಬಂದಿದೆ.
ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಅರ್ಫಾನ್ ಸಹಿತ ನಾಲ್ವರು ಉಪ್ಪಿನಂಗಡಿಯಲ್ಲಿ ನಡೆದ ಧಾರ್ಮಿಕ ಕಾರ್ಯ ಕ್ರಮವೊಂದರಲ್ಲಿ ಪಾಲ್ಗೊಂಡು ಮನೆಗೆ ಹಿಂದಿರುಗುತ್ತಿದ್ದ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಓಮ್ನಿಯಲ್ಲಿ ಪ್ರಯಾಣಿಸುತ್ತಿದ್ದ ಕೌಕ್ರಾಡಿ ಗ್ರಾಮದ ದೋಂತಿಲ ನಿವಾಸಿ ಉಮೇಶ್(29) ಅವರ ಪತ್ನಿ ಪ್ರಿಯಾಂಕಾ ಶೆಟ್ಟಿ(22) ಗಾಯಗೊಂಡಿದ್ದು ಅವರಿ ಬ್ಬರನ್ನೂ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅರ್ಫಾನ್ ಮತ್ತು ಅಬ್ದುರ್ರಝಾಕ್ ಝುಹ್‌ರಿ ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನ ಹೋಂಡಾ ಆ್ಯಕ್ಟಿವಾ ಹಾಗೂ ಮಂಗಳೂರಿನಿಂದ ನೆಲ್ಯಾಡಿಗೆ ತೆರಳುತ್ತಿದ್ದ ಓಮ್ನಿ ಮತ್ತು ಉಪ್ಪಿನಂಗಡಿಯಿಂದ ಪುತ್ತೂರಿಗೆ ತೆರಳುತ್ತಿದ್ದ ಬೈಕ್ ನಡುವೆ ಈ ಸರಣಿ ಅಪಘಾತ ಸಂಭವಿಸಿದೆ.
ಮಂಗಳೂರಿನ ಮೊಬೈಲ್ ಅಂಗಡಿಯೊಂದರಲ್ಲಿ ಉದ್ಯೋಗಿಯಾಗಿದ್ದ ಅರ್ಫಾನ್ ಮಂಗಳವಾರ ಸಂಜೆ ಬಿ.ಸಿ.ರೋಡ್‌ನಲ್ಲಿರುವ ಸಂಬಂಧಿಕರೊಬ್ಬರ ಆ್ಯಕ್ಟಿವಾ ಹೋಂಡಾವನ್ನು ಪಡೆದುಕೊಂಡು ಅದರಲ್ಲಿ ಮನೆಗೆ ಆಗಮಿಸಿದ್ದರು. ರಾತ್ರಿ ಉಪ್ಪಿನಂಗಡಿಯಲ್ಲಿ ನಡೆದ ಧಾರ್ಮಿಕ ಸಮಾವೇಶಕ್ಕೆ ತೆರಳಿ ಮನೆಗೆ ಹಿಂದಿರುಗುತ್ತಿದ್ದ ವೇಳೆಯಲ್ಲಿ ದುರ್ಘಟನೆ ಸಂಭವಿಸಿತ್ತು. ಘಟನೆ ಬಗ್ಗೆ ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.