ಮಂಗಳೂರು,ಮಾರ್ಚ್.11 : ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು, ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ನೂರಾರು ಪೊಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ರೈತರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಕೇಂದ್ರದ ಮೋದಿ ನೇತ್ರತ್ವದ ಬಿಜೆಪಿ ಸರ್ಕಾರ ಕಾರ್ಪೋ ರೇಟ್ ಬಂಡವಾಳಗಾರರ ಪರವಾಗಿ ಕೆಲಸ ಮಾಡುತ್ತಾ ಅವರಿಗೆ ಬೆಂಬಲ ನೀಡುತ್ತಿದೆ, ರೈತ ವಿರೋಧಿಯಾಗಿದೆ. ಈ ಸರ್ಕಾರದ ವಿರುದ್ಧ ದೇಶದ ಜನತೆ ಹೋರಡಬೇಕಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಭೂ ಸ್ವಾಧೀನ ಕಾಯ್ದೆ ತಿದ್ದುಪಡಿಯು ರೈತ ವಿರೋದಿ ತಿದ್ದುಪಡಿಯಾಗಿದ್ದು, ನೂತನ ಕಾಯ್ದೆಯಿಂದ ಉದ್ಯಮಿಗಳು ಲಾಭ ಪಡೆಯಲಿದ್ದಾರೆ, ರೈತರು ಬೀದಿಪಾಲಾಗಲಿದ್ದಾರೆ. ಬಿಜೆಪಿ ಸರ್ಕಾರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದು ರೈತರ ಅಭಿಪ್ರಾಯ ಕೇಳದೆ, ಫಲವತ್ತಾದ ಕೃಷಿ ಭೂಮಿಯನ್ನು ರೈತರಿಂದ ಬಲವಂತ ದಿಂದ ಕಸಿದುಕೊಳ್ಳಲು ಬಲಾಢ್ಯ ಕಂಪನಿಗಳಿಗೆ ಅವಕಾಶ ಕಲ್ಪಿಸುತ್ತಿದೆ. ಕಾಯ್ದೆ ತಿದ್ದುಪಡಿಯಿಂದ ಕಂಪನಿಗಳು ರೈತರ ಭೂಮಿಯ ಮೇಲೆ ಒಡೆತನ ಸ್ಥಾಪಿಸಲಿವೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಅವರು ಆರೋಪ ಮಾಡಿದರು.
ಶಾಸಕ ಜೆ.ಆರ್ ಲೋಬೋ, ಮೂಡ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮೇಯರ್ ಮಹಾಬಲ ಮಾರ್ಲ, ಮಾಜಿ ಶಾಸಕ ವಿಜಯ್ ಕುಮಾರ್ ಶೆಟ್ಟಿ, ಮೂಡದ ಮಾಜಿ ಅಧ್ಯಕ್ಷ ಸುರೇಶ್ ಬಳ್ಳಾಲ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಉಪಮೇಯರ್ ಕವಿತಾ ವಾಸು, ವಿಶ್ವಾಸ್ ದಾಸ್, ನಾಗೇಂದ್ರ, ಸದಾಶಿವ ಉಳ್ಳಾಲ್, ಟಿ.ಕೆ ಸುಧೀರ್ ಮತ್ತಿತರ ಅನೇಕ ಕಾಂಗ್ರೆಸ್ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.