ಮಂಗಳೂರು, ಮಾ.10 : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ, ಮಂಗಳೂರು, ಮಂಗಳೂರು ವಕೀಲರ ಸಂಘ ಮತ್ತು ರಾಮ ಕ್ಷತ್ರಿಯಾ ಮಹಿಳಾ ವೃಂದ, ಜೆಪ್ಪು, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಯನ್ನು ಜಪ್ಪು ರಾಮ ಕ್ಷತ್ರಿಯಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ 6 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಹೆಚ್. ಪುಷ್ಪಾಂಜಲಿ ದೇವಿ ಮಾತನಾಡುತ್ತಾ, ಮಹಿಳೆಯರಿಗೆ ಪ್ರಾಚೀನ ಕಾಲದಿಂದಲೂ ಪ್ರಾಧಾನ್ಯತೆ ನೀಡುತ್ತಿದ್ದರೂ ಸಹಾ ಸಮಾಜದಲ್ಲಿರುವ ಬಡತನ ಮತ್ತು ಪುರುಷ ಪ್ರಾಧೀನ್ಯತೆಯಿಂದ ಮಹಿಳೆ ಶೋಷಣೆಗೆ ಒಳಗಾಗುತ್ತಿದ್ದು, ಮಹಿಳೆಯರು ನಾವು ಯಾವ ರಂಗದಲ್ಲೂ ಕಡಿಮೆಯಿಲ್ಲ ಎಂದು ಸಾಧಿಸಿ ತೋರಿಸಿದ್ದೇವೆ. ಇತ್ತೀಚಿನ ಅಂಕಿ ಅಂಶಗಳು ಇದಕ್ಕೆ ಪೂರಕವಾಗಿವೆ ಆದುದ್ದರಿಂದ ನಾವು ಸಾಧನೆಗೈದ ಮಹಿಳೆಯರನ್ನು ಸ್ಮರಿಸುವ ಮುಖಾಂತರ ಮತ್ತು ಅವರನ್ನು ಆದರ್ಶ ಪ್ರಾಯದಾಯಕವಾಗಿ ಅಳವಡಿಸಿಕೊಳ್ಳುವುದರ ಮುಖಾಂತರ ಹೆಚ್ಚು ಹೆಚ್ಚು ಸಾಧನೆಗಳನ್ನು ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಣೇಶ ಬಿ. ಮಾತಾನಾಡುತ್ತಾ, ಹಿಂದಿನ ಕಾಲದಿಂದಲೂ ಸಹಾ ಮಹಿಳೆ ತನ್ನ ದಿಟ್ಟತನವನ್ನು ತೋರುತ್ತಿದ್ದು, ಈಗಿನ ಪ್ರಪಂಚದಲ್ಲಿ ಎಲ್ಲಾ ರಂಗದಲ್ಲೂ ಗಂಡಸರನ್ನು ಹಿಂದಿಕ್ಕುವಲ್ಲಿ ಮುಂಚೂಣಿಯಲ್ಲಿದ್ದು, ಮಹಿಳೆಯರಿಗೆ ಅಸಾಧ್ಯವಾದದು ಯಾವುದೂ ಇರುವುದಿಲ್ಲ. ಆದರೆ ಈಗ ಸಮಾಜದಲ್ಲಿ ಮಹಿಳೆಯರ ಅಸ್ಥಿತ್ವಕ್ಕೆ ಆತಂಕ ಒಡ್ಡಿದ್ದು, ಮನುಷ್ಯ ಮನುಷ್ಯತ್ವವನ್ನು ಕಳೆದುಕೊಂಡು ಮಕ್ಕಳನ್ನು ಸಹಾ ಬಿಡದೇ ಕ್ರೂರತನವನ್ನು ಬಿಂಬಿಸುತ್ತಿದ್ದು, ಇದರಿಂದ ಪಾರಾಗಲು ಮಹಿಳೆಯರು ಸ್ವರಕ್ಷಣೆಯ ಬಗ್ಗೆ ಕ್ರಮಗಳನ್ನು ತೆಗೆದುಕೊಂಡು ಮಾನಸಿಕವಾಗಿ ಸಿದ್ಧಗೊಳ್ಳಬೇಕು ಮತ್ತು ಮಕ್ಕಳನ್ನು ಈ ಕ್ರೂರತನದಿಂದ ಪಾರು ಮಾಡಲು ಪೋಷಕರು ಮಕ್ಕಳನ್ನು ಸರಿಯಾಗಿ ಪಾಲನೆ ಮಾಡಿ, ಆ ಮಕ್ಕಳು ಸಮಾಜವನ್ನು ಎದುರಿಸುವಲ್ಲಿ ಸಶಕ್ತರನ್ನಾಗಿ ಮಾಡಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸನ್ಮಾನ ಮಾಡಲಾಯಿತು. ವಕೀಲರ ಸಂಘದ ಅಧ್ಯಕ್ಷ ಎಸ್.ಪಿ. ಚಂಗಪ್ಪ, ರಾಮ ಕ್ಷತ್ರಿಯಾ ಸಂಘದ ಅಧ್ಯಕ್ಷ ಜಿ.ಕೆ. ರಾವ್, ವಾರಿಜಾ ಉಪಸ್ಥಿತರಿದ್ದರು. ರಾಮ ಕ್ಷತ್ರಿಯಾ ಮಹಿಳಾ ವೃಂದದ ಅಧ್ಯಕ್ಷೆ ಶಾಲಿನಿ ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು.