ಮಂಗಳೂರು: ಸಾಹಿತ್ಯ, ಶಾಸ್ತ್ರೀಯ ಕಲಾ ಪ್ರಾಕಾರದಲ್ಲಿ ತೊಡಗಿಕೊಂಡವರ ಕಾಲ ಎಂದೂ ವ್ಯರ್ಥವಾಗದೆ ಅರ್ಥಪೂರ್ಣವಾಗಿರುತ್ತದೆ ಎಂದು ಯಕ್ಷಗಾನ ಹಿರಿಯ ಕಲಾವಿದ ಕುಂಬ್ಳೆ ಸುಂದರ ರಾವ್ ಹೇಳಿದ್ದಾರೆ.
ಕಲ್ಕೂರ ಪ್ರತಿಷ್ಠಾನ ವತಿಯಿಂದ ನಗರದ ಡಾನ್ ಬಾಸ್ಕೋ ಹಾಲ್‌ನಲ್ಲಿ ಶನಿವಾರ ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತ ಅವರಿಗೆ ಕಲ್ಕೂರ ಜೀವಮಾನ ಸಾಧನಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಲಯಬದ್ಧತೆ, ಸ್ಪಷ್ಟ ಹಾಡುಗಾರಿಕೆಯಿಂದ ವಿಶಿಷ್ಟ ಶೈಲಿಯನ್ನು ತಮ್ಮದಾಗಿಸಿಕೊಂಡು ಮೇರು ವ್ಯಕ್ತಿತ್ವವನ್ನು ಬಲಿಪರು ಹೊಂದಿದ್ದಾರೆ ಎಂದು ಅವರು ತಿಳಿಸಿದರು.
ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಅಭಿನಂದನಾ ಮಾತುಗಳನ್ನಾಡಿ, ಯಕ್ಷಗಾನಕ್ಕೆ ಗುರು ಸ್ವರೂಪಿಯಾದ ಬಲಿಪ ನಾರಾಯಣ ಭಾಗವತರು ಅದ್ಭುತ ಪ್ರತಿಭೆ ಎಂದರು. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ.ಮೊಹಮ್ಮದ್ ಹನೀಫ್, ಸೂರ್ಯನಾರಾಯಣ ಪಂಜಾಜೆ, ಬಲಿಪ ನಾರಾಯಣ ಭಾಗವತರ ಪತ್ನಿ ಜಯಲಕ್ಷ್ಮೀ ಉಪಸ್ಥಿತರಿದ್ದರು.
ಯಕ್ಷಗಾನ ವಿಮರ್ಶಕ ಡಾ.ಎಂ.ಪ್ರಭಾಕರ ಜೋಶಿ, ತೆಂಕುತಿಟ್ಟು ಹಿತರಕ್ಷಣಾ ವೇದಿಕೆ ಸಂಸ್ಥಾಪಕ ಡಾ.ಚಂದ್ರಶೇಖರ ದಾಮ್ಲೆ, ಕುವೈಟ್ ಬಂಟರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಗರಿ, ಕಾಳೇಗೌಡ ನಾಗಾವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಚಂದ್ರಹಾಸ ರೈ ಪಾಲ್ಗೊಂಡಿದ್ದರು.
ಸಂಘಟಕ ಕದ್ರಿ ನವನೀತ ಶೆಟ್ಟಿ ಸ್ವಾಗತಿಸಿದರು. ಕೆ.ವಿ.ರಮೇಶ್ ಸನ್ಮಾನ ಪತ್ರ ವಾಚಿಸಿದರು. ಮಾಧುರಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ಬಲಿಪ ಭಾಗವತರಿಂದ ಯಕ್ಷಗಾನ ಸುಧಾ ಹಾಗೂ ಬಳಿಕ ಊರ್ವಶಿ ಶಾಪ ಯಕ್ಷಗಾನ ಬಯಲಾಟ ನಡೆಯಿತು.