ಕನ್ನಡ ವಾರ್ತೆಗಳು

ಕುಂದಾಪುರ: ತಾಲೂಕಿನ ನಾಲ್ಕು ಕಡೆ ಪ್ರತ್ಯೇಕ ಬೆಂಕಿ ಪ್ರಕರಣ-ಅಪಾರ ನಷ್ಟ

Pinterest LinkedIn Tumblr

fire

 

(ಸಾಂದರ್ಭಿಕ ಚಿತ್ರ)

ಕುಂದಾಪುರ: ತಾಲೂಕಿನಲ್ಲಿ ಪ್ರತ್ಯೇಕವಾಗಿ ನಾಲ್ಕು ಕಡೆಗಳಲ್ಲಿ ಅಗ್ನಿ ಆಕಸ್ಮಿಕ ಘಟನೆಗಳು ಬುಧವಾರ ನಡೆದಿದ್ದು, ಜಪ್ತಿಯಲ್ಲಿ ಲಕ್ಷಾಂತರ ಮೌಲ್ಯದ ರಬ್ಬರ್ ಗಿಡ ಹಾಗೂ ಬಂಟ್ವಾಡಿಯಲ್ಲಿ 10 ಸಾವಿರ ಅಂದಾಜು ಮೌಲ್ಯದ ಒಣಹುಲ್ಲು ಹಾನಿಯಾಗಿದೆ.

ಕುಂದಾಪುರ ತಾಲೂಕಿನ ಹುಣ್ಸೆಮಕ್ಕಿ ಸಮೀಪದ ಜಪ್ತಿ ಎಂಬಲ್ಲಿ ಸಾತ್ವಿಕ್ ಅವರ ಮಾಲೀಕತ್ವದ 30 ಎಕ್ರೆಯಲ್ಲಿ 6000ರಬ್ಬರು ಗಿಡಗಳಿದ್ದು ಅವುಗಳಲ್ಲಿ ೪೦೦ಕ್ಕೂ ಅಧಿಕ ರಬ್ಬರ್ ಗಿಡಗಳು ಬೆಂಕಿಗೆ ಆಹುತಿಯಾಗಿದೆ. ಇವುಗಳ ಒಟ್ಟು ನಷ್ಟ ಒಂದು ಲಕ್ಷಕ್ಕೂ ಅಧಿಕವಾಗಿದೆ ಎನ್ನಲಾಗಿದೆ. ಬೆಂಕಿ ಆಕಸ್ಮಿಕಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ತಾಲೂಕಿನ ಗುಡ್ಡಮ್ಮಾಡಿ ಸಮೀಪದ ಬಂಟ್ವಾಡಿ ಎಂಬಲ್ಲಿ ಎಚ್.ಎಸ್. ಚಂದ್ರಕಾಂತ್ ಎನ್ನುವವರ ಮನೆ ಎದುರಿನ ಹುಲ್ಲು ಕುತ್ತರಿ (ಒಣಹುಲ್ಲು ಶೇಖರಿಸಿಡುವ ಜಾಗ)ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟಿನಿಂದ ಬೆಂಕಿ ತಗುಲಿದ್ದು, ಭಾಗಶಃ ಹುಲ್ಲಿಗಳು ಬೆಂಕಿಗಾಹುತಿಯಾಗಿದೆ. ಹುಲ್ಲು ಸುಟ್ಟು ಹೋಗಿ ಅಂದಾಜು 10 ಸಾವಿರಕ್ಕೂ ಅಧಿಕ ಹಣ ನಷ್ಟವಾಗಿದೆ. ಹುಲ್ಲಿಗೆ ಬೆಂಕಿ ತಗುಲಿದ ನಂತರದಲ್ಲಿ ಸಮೀಪದ ಮನೆಗಳಿಗೆ ಬೆಂಕಿ ವ್ಯಾಪಿಸುವ ಪರಿಸ್ಥಿತಿಯಿದ್ದು, ಸಮಯಕ್ಕೆ ಸರಿಯಾಗಿ ತೆರಳಿದ ಕುಂದಾಪುರ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿ ಸಂಭವನೀಯ ಅವಘಡವನ್ನು ತಪ್ಪಿಸಿದ್ದಾರೆ.

ಇನ್ನು ಕುಂದಾಪುರ ಅಂಕದಕಟ್ಟೆಯ ಗುಡ್ಡ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಕುಂದಾಪುರ ಅಗ್ನಿಶಾಮಕ ದಳದವರು ಹಾಗೂ ತೆಕ್ಕಟ್ಟೆ ಸಮೀಪದ ಕೆದೂರಿನ ಶಾನಾಡಿಯಲ್ಲಿ ಹಾಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಮಲ್ಪೆಯಿಂದ ಬಂದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ.

Write A Comment