ಕನ್ನಡ ವಾರ್ತೆಗಳು

ಸಾಹಿತ್ಯ ಸಂಬಂಧಿ ಕಾರ್ಯಕ್ರಮಗಳ ಮೂಲಕ ಬ್ಯಾರಿ ಕಲೆ, ಸಾಹಿತ್ಯ, ಭಾಷೆ ಉಳಿಸಿ ಬೆಳೆಸಿ : ಸಚಿವ ಯು.ಟಿ.ಖಾದರ್

Pinterest LinkedIn Tumblr

UT_Kadar_Pic

ಕೊಣಾಜೆ,ಮಾರ್ಚ್.02 : ಬ್ಯಾರಿ ಸಾಹಿತ್ಯ ಅಕಾಡೆಮಿ ಅಧೀನದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳು ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ನಿರಂತರವಾಗಿ ನಡೆಯಬೇಕು. ಅದೇ ರೀತಿ ಬ್ಯಾರಿ ಜನಾಂಗದವರು ಅವಕಾಶ ಸಿಕ್ಕಾಗ ಕಾಲಹರಣ ಮಾಡುವ ಉದ್ದೇಶದಿಂದ ಊರು ತಿರುಗುವ ಬದಲು ಸಾಹಿತ್ಯ ಸಂಬಂಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಯತ್ನಿಸುವ ಮೂಲಕ ಬ್ಯಾರಿ ಕಲೆ, ಸಾಹಿತ್ಯ, ಭಾಷೆ ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.

ಕರ್ನಾಟಕ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಪಾವೂರು ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಬಳಗದ ಸಹಕಾರದಲ್ಲಿ ಭಾನುವಾರ ಪಾವೂರು ಕಂಬಳಪದವಿನಲ್ಲಿರುವ ಪಾವೂರು ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಬ್ಯಾರಿ ಭಾಷಿಕ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ಕ್ರೀಡೋತ್ಸವ, ಸಾಂಸ್ಕೃತಿಕ ಮೇಳ ಸಮಾರೋಪದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ಬಿ.ಎ.ಮಹಮ್ಮದ್ ಹನೀಫ್ ಅವರು ಪ್ರಸ್ತುತ ಒಂದೊಂದು ಜಾತಿಗೆ ಒಂದೊಂದು ಆಂಗ್ಲ ಮಾಧ್ಯಮ ಶಾಲೆಗಳು ಇವೆ. ಆಂಗ್ಲಭಾಷೆ ಅಬ್ಬರಕ್ಕೆ ತುಳು, ಬ್ಯಾರಿ, ಕೊಂಕಣಿಭಾಷೆ ಮಾತನಾಡುವವರು ಇಲ್ಲದಂತಾಗಿದ್ದಾರೆ. ಈ ನಿಟ್ಟಿನಲ್ಲಿ ಬ್ಯಾರಿ ಭಾಷೆ, ಸಾಹಿತ್ಯ, ಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿ ಯುವ ಲೇಖಕರು, ಕಲಾವಿದರಿಗೆ ಪ್ರೋತ್ಸಾಹ ನೀಡಲಿದೆ. ಪ್ರತಿಯೊಬ್ಬರು ಕಥೆ, ಲೇಖನ, ಕಾದಂಬರಿ ಬರೆಯುವ ಮೂಲಕ ಸಾಹಿತ್ಯ ಬೆಳೆಸಲು ಮುಂದಾಗಬೇಕು ಎಂದರು.

ಅಕ್ಷರ ಸಂತ ಹರೇಕಳ ಹಾಜಬ್ಬ, ಹರೇಕಳ ದೆಬ್ಬೇಲಿಯ ನಾಟಿ ವೈದ್ಯೆ, ಸಮಾಜ ಸೇವಕಿ ರುಕಿಯಾ, ಲೇಖಕ, ವಿಮರ್ಶಕ ಇಸ್ಮತ್ ಪಜೀರ್ ಹಾಗೂ ಸ್ತ್ರೀ ಶಕ್ತಿ ಸಂಘಟನೆಯ ಝುಬೇದಾ ಮಲಾರ್ ಅವರನ್ನು ಸನ್ಮಾನಿಸಲಾಯಿತು. ಅಬುದಾಬಿ ಬ್ಯಾರಿ ಕಲ್ಚರಲ್ ಫಾರಂ ಅಧ್ಯಕ್ಷ ಮಹಮ್ಮದ್ ರಫೀಕ್ ಅವರನ್ನು ಗೌರವಿಸಲಾಯಿತು.

ಬಹುಭಾಷಾ ಕವಿ ಮಹಮ್ಮದ್ ಬಡ್ಡೂರು ತುಳು, ಬ್ಯಾರಿ, ಕೊಂಕಣಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

ಅಹ್ಮದ್ ಕಿನ್ಯ, ಹಂಝ ಮಲಾರ್, ಮುಆದ್ ಗೋಳ್ತಮಜಲು (ಬ್ಯಾರಿ), ಲಕ್ಷ್ಮಿ ನಾರಾಯಣ ರೈ ಹರೇಕಳ, ವಿಜಯಲಕ್ಷ್ಮಿ ಕಟೀಲು (ತುಳು) ಹಾಗೂ ಎಡ್ವರ್ಡ್ ಲೋಬೋ, ಜೆವಿತಾ ಸಿಕ್ವೇರಾ (ಕೊಂಕಣಿ) ಕವಿಗಳು ಭಾಗವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಮೆಲ್ವಿನ್ ಡಿಸೋಜ, ಸಂತೋಷ್ ಕುಮಾರ್ ರೈ ಬೋಳಿಯಾರು, ಎನ್.ಎಸ್.ಕರೀಂ, ತಾಲೂಕು ಪಂಚಾಯಿತಿ ಸದಸ್ಯರಾದ ಮಹಮ್ಮದ್ ಮುಸ್ತಫಾ ಹರೇಕಳ, ಮಹಮ್ಮದ್ ಮೋನು, ಪಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿಫಾತಿಮ, ಬೋಳಿಯಾರು ಗ್ರಾ.ಪಂ.ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಪಾವೂರು ಸರಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಡಾ. ಪ್ರಶಾಂತ್ ಕೆ.ಎಸ್., ಗ್ರಾಮ ಪಂಚಾಯಿತಿ ಸದಸ್ಯ ವಲೇರಿಯನ್ ಡಿಸೋಜ, ಮಹಮ್ಮದ್, ಮಾಜಿ ಅಧ್ಯಕ್ಷ ಬಾಬು ಪೂಜಾರಿ, ಕಿನ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಮೀದ್ ಕಿನ್ಯ, ಅಕಾಡೆಮಿ ಸದಸ್ಯ ಸಂಚಾಲಕ ಯೂಸುಫ್ ವಕ್ತಾರ್ ಹಾಗೂ ಆಲಿಯಬ್ಬ ಜೋಕಟ್ಟೆ ಉಪಸ್ಥಿತರಿದ್ದರು. ಅಕಾಡೆಮಿ ರಿಜಿಸ್ಟ್ರಾರ್ ಸ್ವಾಗತಿಸಿದರು. ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ಅತಿಥಿಗಳಿಂದ ಬ್ಯಾರಿ ಭಷಣ ಪ್ರಯತ್ನ: ಅತಿಥಿಗಳಾಗಿ ಭಾಗವಹಿಸಿದ್ದ ಬ್ಯಾರಿ ಸಮುದಾಯದ ಜನಪ್ರತಿನಿಧಿಗಳನ್ನು ಹೊರತುಪಡಿಸಿ ಸಂತೋಷ್ ಕುಮಾರ್ ರೈ ತಮಗೆ ಗೊತ್ತಿದ್ದಷ್ಟು ಬ್ಯಾರಿ ಭಾಷೆಯ ಜೊತೆ ಇತರ ಭಾಷೆಗಳನ್ನು ಬೆರೆಸಿ ಭಾಷಣ ಮಾಡಿ ಶ್ಲಾಘನೆಗೆ ಕಾರಣರಾದರು. ಮೆಲ್ವಿನ್ ಡಿಸೋಜ ಬ್ಯಾರಿ ಭಾಷೆಯಿಂದ ಭಾಷಣ ಆರಂಭಿಸಿ ಬಳಿಕ ಕನ್ನಡದಲ್ಲಿ ಮಾತನಾಡಿದರು. ಸಚಿವ ಯು.ಟಿ.ಖಾದರ್ ಒಂದಷ್ಟು ಬ್ಯಾರಿ ಹಾಗೂ ಕನ್ನಡದಲ್ಲಿ ಭಾಷಣ ಮಾಡಿದರು.

Write A Comment