ಕನ್ನಡ ವಾರ್ತೆಗಳು

ಆಸ್ತಿ ತೆರಿಗೆಯಲ್ಲಿ ಶೇ.15 ಹೆಚ್ಚಳ ರದ್ದುಪಡಿಸಿ ಕೈಗೊಂಡ ನಿರ್ಣಯ ಪುನರ್ ಪರಿಶೀಲಿಸುವಂತೆ ಸರಕಾರಕ್ಕೆ ಪತ್ರ : ಮೇಯರ್

Pinterest LinkedIn Tumblr

MCC_news_photo_1

ಮಂಗಳೂರು: ಆಸ್ತಿ ತೆರಿಗೆಯಲ್ಲಿ ಶೇ.15 ಹೆಚ್ಚಳ ರದ್ದುಪಡಿಸಿ ಕೈಗೊಂಡ ನಿರ್ಣಯಕ್ಕೆ ಸರಕಾರ ನೋಟಿಸ್ ನೀಡಿರುವುದನ್ನು ಪುನರ್ ಪರಿಶೀಲಿಸುವಂತೆ ಮತ್ತೆ ಸರಕಾರಕ್ಕೆ ಪತ್ರ ಬರೆಯುವ ತೀರ್ಮಾನವನ್ನು ಮಂಗಳೂರು ಮಹಾನಗರ ಪಾಲಿಕೆ ಕೈಗೊಂಡಿದೆ. ಮೇಯರ್ ಮಹಾಬಲ ಮಾರ್ಲ ಅಧ್ಯಕ್ಷತೆಯಲ್ಲಿ ಶನಿವಾರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು.

2014ರ ಏ.1ರಿಂದ ಆಸ್ತಿ ತೆರಿಗೆಯಲ್ಲಿ ಶೇ.15 ಹೆಚ್ಚಳಗೊಳಿಸಿ ಆಡಳಿತಾಧಿಕಾರಿ ಆದೇಶ ನೀಡಿದ್ದು, ಹೆಚ್ಚಳವನ್ನು ರದ್ದುಗೊಳಿಸಿ ಜುಲೈಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.

ಪಾಲಿಕೆಯ ನಿರ್ಣಯ ಪೌರ ನಿಗಮ ಕಾಯಿದೆ ಉಲ್ಲಂಘನೆಯಾಗಿದೆ ಎಂಬ ಹಿನ್ನೆಲೆಯಲ್ಲಿ ಸರಕಾರ ಸೂಕ್ತ ಸಮಜಾಯಿಷಿ ಕೋರಿರುವ ಹಿನ್ನೆಲೆಯಲ್ಲಿ ನಿರ್ಣಯದಲ್ಲಿ ಯಾವುದೇ ಬದಲಾವಣೆಯಿಲ್ಲದೆ ಮತ್ತೆ ಸರಕಾರಕ್ಕೆ ಪುನರ್ ಪರಿಶೀಲನೆಗೆ ಸಲ್ಲಿಸಲಾಗುವುದು ಎಂದು ಮೇಯರ್ ಮಹಾಬಲ ಮಾರ್ಲ ತಿಳಿಸಿದರು.

MCC_news_photo_2 MCC_news_photo_3 MCC_news_photo_4

ಸ್ವಯಂಘೋಷಿತ ಆಸ್ತಿ ತೆರಿಗೆ ಜಾರಿ ಮಾಡಿದವರು ನೀವು, ನೀವು ಎಂಬ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಚರ್ಚೆ ನಡೆಯಿತು. ಪ್ರತಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ತಿಲಕ್ ರಾಜ್, ಸುಧೀರ್ ಕಣ್ಣೂರು ಅವರು ಆಡಳಿತ ಪಕ್ಷದತ್ತ ಬೊಟ್ಟು ಮಾಡಿದರೆ, ಸಚೇತಕ ಎಂ.ಶಶಿಧರ ಹೆಗ್ಡೆ, ಹರಿನಾಥ್ ಅವರು ಪ್ರತಿಪಕ್ಷದತ್ತ ಬೊಟ್ಟು ಮಾಡಿದರು.

ವಿಶೇಷ ಸಭೆ ಯಾಕೆ ನಡೆಸಿಲ್ಲ: ಕಟ್ಟಡಗಳ ನಿಯಮಾವಳಿ ಮತ್ತು ಕುಡ್ಸೆೆಂಪ್ ಕಾಮಗಾರಿ ಕುರಿತು ವಿಶೇಷ ಸಭೆ ನಡೆಸುವ ಬಗ್ಗೆ ಮೇಯರ್ ಹಿಂದಿನ ಸಭೆಯಲ್ಲಿ ನೀಡಿದ ಭರವಸೆಯಂತೆ ಯಾಕೆ ಸಭೆ ನಡೆಸಿಲ್ಲ ಎಂದು ಪಕ್ಷಬೇಧ ಮರೆತು ಕಾರ್ಪೊರೇಟರ್‌ಗಳು ಪ್ರಶ್ನಿಸಿದರು. ಆಡಳಿತ ಪಕ್ಷದ ಕಾರ್ಪೊರೇಟರ್‌ಗಳಾದ ದೀಪಕ್ ಪೂಜಾರಿ, ನವೀನ್ ಡಿಸೋಜ, ರವೂಫ್, ಪ್ರತಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಮಧುಕಿರಣ್, ಸುಧೀರ್ ಕಣ್ಣೂರು ಪ್ರಶ್ನಿಸಿದರು.

ಮೇಯರ್ ಮಹಾಬಲ ಮಾರ್ಲ ಮಾತನಾಡಿ, ಫೆ.16ಕ್ಕೆ ವಿಶೇಷ ಸಭೆ ನಡೆಸುವಂತೆ ಪಾಲಿಕೆ ಕಾಯಿದೆ ಅನ್ವಯ 20 ಕಾರ್ಪೊರೇಟರ್‌ಗಳ ಸಹಿ ಪಡೆದು ಆಯುಕ್ತರಿಗೆ ನೀಡಿದ್ದರೂ ಸಭೆ ನಡೆಸಿಲ್ಲ ಎಂದರು.

ಆಯುಕ್ತೆ ಹೆಫ್ಸಿಬಾ ರಾಣಿ ಕೊರ್ಲಪಟ್ಟಿ ಮಾತನಾಡಿ, ಕುಡ್ಸೆಂಪ್ ವಿಶೇಷ ಸಭೆ ನಡೆಸುವ ಮುನ್ನ ಕಾಮಗಾರಿಯ ಕುರಿತು ಸಮಗ್ರ ಅಧ್ಯಯನ ನಡೆಸಬೇಕಾಗಿದೆ. ಅನುಷ್ಠಾನ ಹಾಗೂ ಉಳಿಕೆ ಕಾಮಗಾರಿ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆಯಿದೆ ಎಂದರು.

ಈ ಹಿನ್ನೆಲೆಯಲ್ಲಿ ಕೆಯುಐಡಿಎಫ್‌ಸಿಯ ಆಡಳಿತ ನಿರ್ದೇಶಕ ದರ್ಪನ್ ಜೈನ್ ಅವರ ಜತೆಗೆ ಮಾತುಕತೆ ನಡೆಸಲಾಗಿದ್ದು, ಮಾರ್ಚ್‌ನಲ್ಲಿ ಅವರು ಪರಿಶೀಲನೆ ನಡೆಸುವ ಕಾರಣ ವಿಶೇಷ ಸಭೆ ನಡೆಸಲಾಗಿಲ್ಲ ಎಂದು ಆಯುಕ್ತೆ ಉತ್ತರಿಸಿದರು.

ಫುಟ್ಪಾತ್, ಚರಂಡಿಯಿಲ್ಲ: ಪ್ರತಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ ಮಾತನಾಡಿ, ಕಾಂಕ್ರೀಟ್ ರಸ್ತೆ ನಿರ್ಮಿಸುವಾಗಲೇ ಎರಡು ಬದಿಯಲ್ಲಿ ಚರಂಡಿ ಮತ್ತು ಫುಟ್‌ಪಾತ್‌ನ್ನು ರಚಿಸಲಾಗುವುದು ಎಂಬುದಾಗಿ ಹೇಳಲಾಗಿದ್ದರೂ, ಇತ್ತೀಚೆಗೆ ಉದ್ಘಾಟನೆಗೊಂಡ ಬಂಟ್ಸ್‌ಹಾಸ್ಟೆಲ್ ರಸ್ತೆಯಲ್ಲಿ ಚರಂಡಿ, ಫುಟ್‌ಪಾತ್ ಇಲ್ಲ ಎಂದರು.

ಮೇಯರ್ ಮಹಾಬಲ ಮಾರ್ಲ ಮಾತನಾಡಿ, ವಾಹನ ಸಂಚಾರಕ್ಕೆ ತಕ್ಷಣ ಬಿಟ್ಟುಕೊಡಬೇಕಾದ ಹಿನ್ನೆಲೆಯಲ್ಲಿ ರಸ್ತೆ ಉದ್ಘಾಟನೆ ನಡೆಸಲಾಗಿದೆ. ಮುಂದೆ ಕೈಗೊಳ್ಳಲಾಗುವ ಎಲ್ಲ ಕಾಂಕ್ರಿಟ್ ರಸ್ತೆ ಕಾಮಗಾರಿಯಲ್ಲಿ ಫುಟ್‌ಪಾತ್ ಮತ್ತು ಚರಂಡಿ ರಚನೆ ಕಾಮಗಾರಿ ಒಟ್ಟಾಗಿ ಸೇರ್ಪಡೆಗೊಳ್ಳಲಿದೆ ಎಂದರು.

ಪುರಭವನ ಕಾಮಗಾರಿಗೆ ಶಾರ್ಟ್ ಟೆಂಡರ್: ಕಲಾವಿದರು ಹಾಗೂ ಸಾರ್ವಜನಿಕರು ಮನವಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ಮಂಗಳೂರು ಪುರಭವನ ಕಾಮಗಾರಿಗೆ ಮತ್ತೆ ಚಾಲನೆ ನೀಡಲು ಶಾರ್ಟ್ ಟೆಂಡರ್ ಕರೆಯುವಂತೆ ಮೇಯರ್ ಮಹಾಬಲ ಮಾರ್ಲ ಸೂಚಿಸಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಪುರಭವನ ಕಾಮಗಾರಿ ವಿಚಾರದಲ್ಲಿ ಅಧಿಕಾರಿಗಳು ಉದಾಸೀನ ಭಾವನೆ ತೋರುತ್ತಿದ್ದು, ಮೂರು ತಿಂಗಳೊಳಗೆ ಕಾಮಗಾರಿ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದರು.

ತೆರೆದ ವಾಹನದಲ್ಲಿ ತ್ಯಾಜ್ಯ: ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಹೊಸ ಯೋಜನೆ ಸೂಕ್ತವಾಗಿ ನಡೆಯುತ್ತಿಲ್ಲ ಮಾತ್ರವಲ್ಲದೆ ಇನ್ನೂ ಕೂಡಾ ತೆರೆದ ವಾಹನದಲ್ಲಿ ಘನತ್ಯಾಜ್ಯ ಸಾಗಿಸಲಾಗುತ್ತಿದೆ ಎಂದು ಕಾರ್ಪೊರೇಟರ್ ದಯಾನಂದ ಶೆಟ್ಟಿ, ಅಬ್ದುಲ್ ಅಜೀಜ್ ಹೇಳಿದರು.

ಆಯುಕ್ತೆ ಹೆಪ್ಸಿಬಾ ರಾಣಿ ಕೊರ್ಲಪಟ್ಟಿ ಮಾತನಾಡಿ, ತ್ಯಾಜ್ಯ ವಿಲೇವಾರಿ ಬಗ್ಗೆ ನಿರಂತರ ಪರಿಶೀಲನೆ ನಡೆಯುತ್ತಿದ್ದು, ಈಗಾಗಲೇ ಎರಡು ನೋಟಿಸ್‌ನ್ನು ಕಂಪನಿಗೆ ನೀಡಲಾಗಿದೆ. ಪಾಲಿಕೆಯ ವೆಬ್‌ಸೈಟ್‌ಗೆ ತ್ಯಾಜ್ಯ ವಿಲೇವಾರಿ ಬಗ್ಗೆ ಲಿಂಕ್ ನೀಡಲಾಗುವುದು ಎಂದರು.

ಮೇಯರ್ ಮಹಾಬಲ ಮಾರ್ಲ ಮಾತನಾಡಿ, ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ಸಿಸಿ ಕ್ಯಾಮೆರಾ ಹಾಗೂ ತ್ಯಾಜ್ಯ ವಿಲೇವಾರಿ ವಾಹನದಲ್ಲಿ ಜಿಪಿಎಸ್ ಅಳವಡಿಸಲಾಗುತ್ತಿದೆ ಎಂದರು. ಉಪಮೇಯರ್ ಕವಿತಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ಡಿ.ಕೆ., ಜೆಸಿಂತಾ ವಿಜಯ ಆಲ್ಫ್ರೆಡ್, ಪುರುಷೋತ್ತಮ ಚಿತ್ರಾಪುರ ಉಪಸ್ಥಿತರಿದದರು.

Write A Comment