ಕನ್ನಡ ವಾರ್ತೆಗಳು

ಎನ್ ಹೆಚ್ 169  ಅಭಿವೃದ್ದಿಗೊಳಿಸುವಂತೆ ಆಗ್ರಹ – ಮಿಜಾರು ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಜಿಲ್ಲಾಧಿಕಾರಿಗೆ ಮನವಿ

Pinterest LinkedIn Tumblr

dc_manavi_NH_2

ಮಂಗಳೂರು, ಫೆ.27 : ಮಂಗಳೂರು ನಂತೂರು, ಮೂಡಬಿದಿರೆ ಕಾರ್ಕಳ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 169ನ್ನು ಅಭಿವೃದ್ದಿಗೊಳಿಸುವಂತೆ ಆಗ್ರಹಿಸಿ ಮಿಜಾರು ನಾಗರಿಕ ಹಿತರಕ್ಷಣಾ ವೇದಿಕೆಯು ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿತು.

ಮನವಿಯಲ್ಲಿನ ವಿವರ: ರಾಷ್ಟ್ರೀಯ ಹೆದ್ದಾರಿ 169ರ ನಂತೂರು-ಮೂಡಬಿದಿರೆ-ಕಾರ್ಕಳ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 169ರ ಅಭಿವೃದ್ಧಿ ಯೋಜನೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು, ಕೇಂದ್ರ ಸರ್ಕಾರದ ಭೂ ಸಾರಿಗೆ ಸಚಿವಾಲಯಕ್ಕೆ ಅನುಮೋದನೆಗಾಗಿ ಕಳುಹಿಸಿ ವರ್ಷಗಳು ಕಳೆದಿದ್ದರೂ ಇದುವರೆಗೆ ಮಂಜೂರಾತಿ ದೊರಕಿಲ್ಲ.

dc_manavi_NH_1

ನಂತೂರು-ಮೂಡಬಿದಿರೆ-ಕಾರ್ಕಳ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ರಸ್ತೆಯು ಬಹಳಷ್ಟು ಕಿರಿದಾಗಿದೆ. ಈ ರಸ್ತೆಯಲ್ಲಿ ಬರುವ ಗುರುಪುರ ಸೇತುವೆಯು ಸ್ವಾತಂತ್ರ್ಯ ಪೂರ್ವದಾಗಿದ್ದು ತೀರಾ ಶಿಥಿಲವಾಗಿ ಅಪಾಯದ ಅಂಚಿನಲ್ಲಿದೆ. ಕುಲಶೇಖರ, ಗುರುಪುರ, ಎಡಪದವು, ಮೂಡಬಿದಿರೆ, ಸಾಣೂರು, ಚಿಲಿಂಬಿ, ಕಾರ್ಕಳ ಮೊದಲಾದೆಡೆ ತೀವ್ರ ಇಕ್ಕಟ್ಟಾಗಿದ್ದು ಕಡಿದಾದ ತಿರುವು ಮುರುವು ರಸ್ತೆಗಳಿವೆ. ಪ್ರತಿದಿನ ಈ ರಸ್ತೆಗಳಲ್ಲಿ ಅಪಘಾತಗಳಾಗಿ ಸಾವು ನೋವು ಸಾಮಾನ್ಯವಾಗಿ ಬಿಟ್ಟಿದೆ.

dc_manavi_NH_3

ಈ ಕುರಿತಾಗಿ ಹಲವು ಮನವಿಗಳನ್ನು ಸಂಬಂಧಪಟ್ಟ ಸಂಸದರಿಗೆ, ಶಾಸಕರಿಗೆ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅದುದರಿಂದ ನೆನೆಗುದಿಗೆ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿ 169ರ ಅಭಿವೃದ್ದಿ ಯೋಜನೆಯನ್ನು ಕೇಂದ್ರ ಸರ್ಕಾರದ ಭೂ ಸಾರಿಗೆ ಸಚಿವಾಲಯದ ಮಂಜೂರಾತಿ ಪಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ನಾಗರಿಕರ ಪರವಾಗಿ ಜಿಲ್ಲಾಧಿಕಾರಿಯಲ್ಲಿ ಕೋರಿದ್ದಾರೆ.

ಮಿಜಾರು ನಾಗರಿಕ ಹಿತರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಅಬ್ದುಲ್ ಹಮೀದ್, ಉಪಾಧ್ಯಕ್ಷ ಸುಧಾಕರ ಪೂಂಜಾ ಮಿಜಾರು, ಕಾರ್ಯದರ್ಶಿ ಉಮೇಶ್ ರಾವ್ ಮಿಜಾರು ಹಾಗೂ ರೈತ ಮುಖಂಡ ಯಾದವ ಶೆಟ್ಟಿ ಉಪಸ್ಥಿತರಿದ್ದರು.

Write A Comment