ಕನ್ನಡ ವಾರ್ತೆಗಳು

ಸಂಪಾಜೆ ಕಾರು ಅಪಾಘಾತ : ಗಾಯಾಳು ಮಗು ಚಿಕಿತ್ಸೆ ಫಲಕಾರಿಯಾಗದೇ ಮೃತ.

Pinterest LinkedIn Tumblr

abhi_nanda_photo_#

ಸುಳ್ಯ,ಫೆ.23 ಸಂಪಾಜೆ ಗ್ರಾಮದ ಕಡಪಳ ಎಂಬಲ್ಲಿ ಫೆ. 18ರಂದು ಸಂಜೆ ಕಾರು ಹಾಗೂ ಟಿಪ್ರ್ ಲಾರಿ ಮಧ್ಯೆ ಸಂಭವಿಸಿದ ಭೀಕರ ರಸ್ತೆ ದುರಂತದಲ್ಲಿ ಗಾಯಗೊಂಡಿದ್ದ ಪಂಬೆತ್ತಾಡಿಯ ದಿ. ಅವಿನಾಶ್ ಭೀಮಗುಳಿ ಅವರ ಮಗು ಅಭಿನಂದನ್ (6 ) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಅಪಘಾತದಲ್ಲಿ ಪಂಬೆತ್ತಾಡಿ ಗ್ರಾಮದ ಲಕ್ಷ್ಮೀನಾರಾಯಣ ಭೀಮಗುಳಿ, ಅವರ ಪತ್ನಿ ಚಿನ್ನಮ್ಮ, ಪುತ್ರ ಅವಿನಾಶ್ ಮೃತಪಟ್ಟಿದ್ದರು. ತೀವ್ರ ಗಾಯಗೊಂಡಿದ್ದ ಅವಿನಾಶ್‌ರ ಪತ್ನಿ ಭವ್ಯಾ ಹಾಗೂ ಪುತ್ರ ಅಭಿನಂದನ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಭಿನಂದನ್ ಭಾನುವಾರ ಮೃತಪಟ್ಟಿದ್ದಾನೆ.

ಘಟನೆಯ ವಿವರ :
ಲಕ್ಷ್ಮಿನಾರಾಯಣ ಅವರ ಕುಟುಂಬ ಅವರ ಪತ್ನಿ ಚಿನ್ನಮ್ಮ ಅವರ ಸಂಬಂಕರ ಮನೆ ವಿರಾಜಪೇಟೆಯಲ್ಲಿ ಉತ್ತರಕ್ರಿಯೆ ಕಾರ್ಯಕ್ರಮ ಮುಗಿಸಿ ಸಂಜೆ 5.15 ಗಂಟೆ ಹೊತ್ತಿಗೆ ಕಡಪಳದಲ್ಲಿ ತನ್ನ ಆಲ್ಟೋ ಕಾರಿನಲ್ಲಿ ಬರುತ್ತಿದ್ದಾಗ ಬಿ.ಸಿ.ರೋಡ್‌ನಿಂದ ಮಡಿಕೇರಿಗೆ ಮರಳು ತುಂಬಿ ಹೋಗುತ್ತಿದ್ದ ಟಿಪ್ಪರ್ ರಾಂಗ್ ಸೈಡ್‌ನಲ್ಲಿ ಬಂದು ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಲಕ್ಷ್ಮಿನಾರಾಯಣ ಮತ್ತು ಅವಿನಾಶ್ ಅವರು ಸ್ಥಳದಲ್ಲೇ ಮತಪಟ್ಟರು. ಚಿನ್ನಮ್ಮ ಅವರನ್ನು ಸುಳ್ಯ ಸರ್ಕಾರಿ ಅಸ್ಪತ್ರೆಗೆ ಕರೆತಂದು ಮಂಗಳೂರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮತಪಟ್ಟರು. ಅಪಘಾತ ರಭಸಕ್ಕೆ ನಜ್ಜುಗುಜ್ಜಾಗಿದ್ದ ಕಾರಿನಲ್ಲಿ ಸಿಲುಕಿದ ಲಕ್ಷ್ಮಿನಾರಾಯಣ ಮತ್ತು ಅವಿನಾಶ್ ಹಾಗೂ ಗಾಯಗೊಂಡವರನ್ನು ಹೊರತೆಗೆಯಲು ಅಲ್ಲಿನ ನಾಗರಿಕರು ಹರಸಾಹಸಪಟ್ಟರು.ಟಿಪ್ಪರ್ ಘಟನಾ ಸ್ಥಳದಲ್ಲೇ ಪಲ್ಟಿಯಾಗಿದೆ. ಅದರ ಚಾಲಕ ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ನಿವಾಸಿ ಇಸ್ಮಾಯಿಲ್ ಅಲ್ಪ ಗಾಯಗೊಂಡು ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.  

ರಸ್ತೆ ಕಾಮಗಾರಿ ಕಾರಣ?: ಮಾಣಿ ಮೈಸೂರು ರಸ್ತೆಯ ಒಂದು ಬದಿಗೆ ಸುಂದರವಾಗಿ ಡಾಮರೀಕರಣ ಮಾಡಲಾಗಿದೆ. ಇನ್ನೊಂದು ಬದಿ ಡಾಮರೀಕರಣ ಆಗಬೇಕಿದೆ. ಟಿಪ್ಪರ್ ಈ ಕಡೆಯಿಂದ ಬಲ ಬದಿಗೆ ಸುಂದರ ರಸ್ತೆಯಲ್ಲಿ ವೇಗದಲ್ಲಿ ಚಲಾಯಿಸುತ್ತಿದ್ದ. ಅ ಕಡೆಯಿಂದ ತನ್ನದೇ ಆದ ಬದಿ ಎಡ ಬದಿಯಲ್ಲಿ ಅವಿನಾಶ್ ಅವರು ತನ್ನ ಕಾರು ಚಲಾಯಿಸುತ್ತಿದ್ದರು. ಇದರಿಂದ ಈ ಅಪಘಾತ ಆಗಿದೆ ಎಂದು ಸ್ಥಳೀಯರು ಮಾಹಿತಿ ನೀಡುತ್ತಾರೆ.

ಧಾರ್ಮಿಕ, ಸಾಮಾಜಿಕ, ಸಹಕಾರಿ ಕ್ಷೇತ್ರದಲ್ಲಿ ಸೇವೆ ಮಾಡುತ್ತಿದ್ದ ಪ್ರತಿಷ್ಠಿತ ಭೀಮಗುಳಿ ಕುಟುಂಬದ ಲಕ್ಷ್ಮಿನಾರಾಯಣ ಅವರು ಅಲ್ಲಿ ಜನಾನುರಾಗಿ ಆಗಿದ್ದರು. ಪಂಬೆತ್ತಾಡಿ ಸಹಕಾರಿ ಬ್ಯಾಂಕ್, ಹಾಲು ಸಹಕಾರಿ ಸಂಘದಲ್ಲಿ ನಿರ್ದೇಶಕರಾಗಿದ್ದರು. ಮಗ ಅವಿನಾಶ್ ಜೇಸಿಸ್ ಸಂಸ್ಥೆಯಲ್ಲಿ ಅಧ್ಯಕ್ಷರಾಗಿ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು.

Write A Comment