ಮೈಸೂರು, ಫೆ. 12: ರಾಜ್ಯದ ಪ್ರತಿಷ್ಠಿತ ಮೈಸೂರು ಸಂಸ್ಥಾನದ ಉತ್ತರಾಧಿಕಾರಿ ಆಯ್ಕೆ ವಿವಾದ ಅಂತ್ಯಗೊಂಡಿದೆ. ದಿವಂಗತ ಶ್ರೀಕಂಠದತ್ತ ಒಡೆಯರ್ ಅವರ ಹಿರಿಯ ಸಹೋದರಿ ಗಾಯತ್ರಿ ಅವರ ಮೊಮ್ಮಗ ಯದುವೀರ್ ಗೋಪಾಲರಾಜೇ ಅರಸ್ ಅವರನ್ನು ಉತ್ತರಾಧಿಕಾರಿಯಾಗಿ ನೇಮಿಸಿರುವುದಾಗಿ ಮಹಾರಾಣಿ ಪ್ರಮೋದಾದೇವಿ ಅವರು ಘೋಷಿಸಿದ್ದಾರೆ.
ಈ ಕುರಿತು ಮೈಸೂರಿನ ಅರಮನೆಯಲ್ಲಿ ಗುರುವಾರ ಪ್ರಮೋದಾ ದೇವಿ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ರಾಜಮನೆತನದ ಸಂಪ್ರದಾಯದಂತೆ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿದ್ದೇವೆ. ಅರಮನೆ ಕುರಿತು ಮಾಹಿತಿ ಹೊಂದಿರುವ ವ್ಯಕ್ತಿಗಳನ್ನು ಉತ್ತರಾಧಿಕಾರಿಯಾಗಿ ನೇಮಿಸಲಾಗಿದೆ ಎಂದು ಪ್ರಮೋದಾ ದೇವಿ ತಿಳಿಸಿದರು.
ಉತ್ತರಾಧಿಕಾರಿ ನೇಮಿಸುವ ಮೊದಲು ಕುಟುಂಬದ ಸದಸ್ಯರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು. ಉತ್ತರಾಧಿಕಾರಿಯಾಗಿ ಯದುವೀರ್ ಗೋಪಾಲರಾಜೇ ಅರಸ್ ಅವರನ್ನು ನೇಮಿಸಿರುವ ಕುರಿತು ದಾಖಲೆ ಪ್ರದರ್ಶಿಸಿದರು. ಫೆ. 23ರಂದು ದತ್ತು ಸ್ವೀಕಾರ : ಸನಾತನ ಧರ್ಮದ ಪ್ರಕಾರ ಯದುವೀರ್ ಅವರನ್ನು ಪ್ರಮೋದಾದೇವಿ ದತ್ತು ಪಡೆಯಲಿದ್ದಾರೆ. ಫೆ. 23ರಂದು ಯದುವೀರ್ ಅವರನ್ನು ದತ್ತು ಸ್ವೀಕರಿಸಲಾಗುವುದು. ರಾಜಗುರು ಪರಕಾಲ ಮಠದ ಶ್ರೀಗಳು ಸಮಾರಂಭದ ನೇತೃತ್ವ ವಹಿಸುವರು.
ಕುಟುಂಬದವರು ಹಾಗೂ ವಿಶೇಷ ಆಹ್ವಾನಿತರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಸಂಜೆ ಸಾರ್ವಜನಿಕ ಮೆರವಣಿಗೆ ನಡೆಸುವ ಉದ್ದೇಶವಿದೆ. ಸಂಪೂರ್ಣ ಕಾರ್ಯಕ್ರಮದ ರೂಪುರೇಷೆಯನ್ನು ಇನ್ನೂ ಸಿದ್ಧಪಡಿಸಿಲ್ಲ ಎಂದು ಪ್ರಮೋದಾದೇವಿ ತಿಳಿಸಿದರು. ಮೈಸೂರು ಯದುವಂಶದ ಕುಟುಂಬ ಸದಸ್ಯರು, ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ಯದುವೀರ್ ಅರಸ್ ಅವರ ತಂದೆ ಹಾಗೂ ತಾಯಿ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.