ಕನ್ನಡ ವಾರ್ತೆಗಳು

ಕಾರ್ಮಿಕರ ರಾಜ್ಯ ವಿಮಾ ನಿಗಮದ ಕಾರ್ಮಿಕರಿಗೆ ಸೌಲಭ್ಯ ವಿಸ್ತರಣೆ ಸದ್ಯಕ್ಕೆ ಇಲ್ಲ – ಮೈಕೆಲ್ ಡಯಾಸ್‌ ಹೇಳಿಕೆ

Pinterest LinkedIn Tumblr

 

ESI_cropration_pic_1

ಮಂಗಳೂರು,ಫೆ.11 : ‘ಮಾಸಿಕ ರೂ15 ಸಾವಿರ ವೇತನ ಪಡೆಯುತ್ತಿರುವವರಿಗೆ ಕಾರ್ಮಿಕರ ರಾಜ್ಯ ವಿಮಾ ಯೋಜನೆಯ ಸೌಲಭ್ಯ ಒದಗಿಸಲಾಗುತ್ತಿದೆ. ಇದನ್ನು ಮಾಸಿಕ 25 ಸಾವಿರದವರೆಗೆ ವೇತನ ಪಡೆಯುವವರಿಗೂ ವಿಸ್ತರಿಸುವ ಪ್ರಸ್ತಾವ ಇದೆಯಾದರೂ, ಅದನ್ನು ಸದ್ಯಕ್ಕೆ ಜಾರಿಗೊಳಿಸಲಾಗದು’ ಎಂದು ಕಾರ್ಮಿಕರ ರಾಜ್ಯ ವಿಮಾ ನಿಗಮದ (ಇಎಸ್‌ಐಸಿ) ಸದಸ್ಯ ಮೈಕೆಲ್ ಡಯಾಸ್‌ ತಿಳಿಸಿದರು.
ಇಎಸ್‌ಐಸಿ ಉಪಪ್ರಾದೇಶಿಕ ಕಚೇರಿಯಲ್ಲಿ ಗ್ರಾಹಕರ ಅಹವಾಲುಗಳನ್ನು ಆಲಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು. ‘ಮಾಸಿಕ ರೂ15 ಸಾವಿರ ವೇತನ ಪಡೆಯುವವರಿಗೆ ಪೂರ್ಣ ಪ್ರಮಾಣದಲ್ಲಿ ಸವಲತ್ತುಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಮಾಹಿತಿ ತಂತ್ರಜ್ಞಾನದ ಬೆಳವಣಿಗೆಗಳನ್ನು ಬಳಸಿ ಸೇವೆಯ ಗುಣಮಟ್ಟವನ್ನು ಹೆಚ್ಚಿಸುವುದು ನಮ್ಮ ಆದ್ಯತೆ’ ಎಂದರು.

ESI_cropration_pic_2

‘ದೇಶದ ಇತರ ಭಾಗಗಗಳ ಇಎಸ್‌ಐ ಆಸ್ಪತ್ರೆಗಳಿಗೆ ಹೋಲಿಸಿದರೆ, ಮಂಗಳೂರಿನ ಆಸ್ಪತ್ರೆ ಉತ್ತಮವಾಗಿದೆ. ಇಲ್ಲಿ ವೈದ್ಯರ ಕೊರತೆ ಇದೆ. ರಾಜ್ಯ ಸರ್ಕಾರ ವೈದ್ಯರನ್ನು ಒದಗಿಸಬೇಕು. ಉತ್ತಮ ಸಂಬಳ ನೀಡಿದರೂ ವೈದ್ಯರು ಲಭಿಸುತ್ತಿಲ್ಲ. ಹಾಗಾಗಿ ಅನ್ಯ ಆಸ್ಪತ್ರೆಗಳ ವೈದ್ಯರನ್ನು ಅವಲಂಬಿಸುವುದು ಅನಿವಾರ್ಯವಾಗಿದೆ’ ಎಂದರು.

ESI_cropration_pic_4 ESI_cropration_pic_3

‘ಇಎಸ್‌ಐ ಆಸ್ಪತ್ರೆ ಸಿಬ್ಬಂದಿಗೆ ಸ್ಥಳೀಯ ಭಾಷೆ ಬರುವುದಿಲ್ಲ. ಅವರು ರೋಗಿಗಳ ಜತೆ ಸೌಜನ್ಯದಿಂದ ವರ್ತಿಸುತ್ತಿಲ್ಲ. ಸ್ವಾಗತಕಾರರನ್ನಾದರೂ ಸ್ಥಳೀಯರನ್ನು ನೇಮಿಸಿ’ ಎಂದು ಕೃಷ್ಣ ಭಟ್‌ ಕೋರಿದರು.

ಇಎಸ್‌ಐ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆಯ ಬಗ್ಗೆ ಹಾಗೂ ವೈದ್ಯಕೀಯ ಪರಿಕರಗಳ ನಿರ್ವಹಣೆ ಸಮರ್ಪಕವಾಗಿ ಆಗದಿರುವ ಬಗ್ಗೆ ಚೆಂದಪ್ಪ ಅಂಚನ್‌ ದೂರಿದರು.‘ಶೀಘ್ರವೇ ಇಎಸ್‌ಐ ಆಸ್ಪತ್ರೆಗಳಿಗೂ ವೈದ್ಯರ ನೇಮಕವಾಗಲಿದೆ’ ಎಂದು ಇಎಸ್‌ಐಎಸ್‌ ವೈದ್ಯಕೀಯ ಸೇವಾ ವಿಭಾಗದ ನಿರ್ದೇಶಕಿ ಡಾ.ಶ್ರೀದೇವಿ ಭರವಸೆ ನೀಡಿದರು.

ರಾಜ್ಯ ವೈದ್ಯಕೀಯ ಸಹಾಯಕ ಆಯುಕ್ತರಾದ ಡಾ.ರವೀಂದರ್‌ ಕೌರ್‌, ನೌಕರರ ಸಂಘದ ಕಾರ್ಯದರ್ಶಿ ಆರ್‌.ಎಸ್‌.ರಾವ್‌, ವೈದ್ಯಕೀಯ ಅಧೀಕ್ಷಕ ಅಶೋಕ್‌ ಕುಮಾರ್‌ ನಾಯ್ಕ ಉಪಸ್ಥಿತರಿದ್ದರು

Write A Comment