ಕನ್ನಡ ವಾರ್ತೆಗಳು

ಬಂಟ್ವಾಳ ತಾಲೂಕು ಮಟ್ಟದ ಯುವಜನ ಮೇಳ – ಬೆಂಜನಪದವಿನಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 7 ಎಕ್ರೆ ಭೂಮಿ : ಸಚಿವ ರೈ

Pinterest LinkedIn Tumblr

rai-rai

ಬಂಟ್ವಾಳ, ಫೆ.2: ತಾಲೂಕಿಗೆ ಸುಸಜ್ಜಿತ ಕ್ರೀಡಾಂಗಣ ಬಹುವರ್ಷದ ಬೇಡಿಕೆಯಾಗಿದ್ದು, ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯ ನೆರವಿನಲ್ಲಿ ಬೆಂಜನಪದವಿನಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 7 ಎಕ್ರೆ ಭೂಮಿ ಕಾಯ್ದಿರಿಸಲಾಗಿದೆ. ಸದ್ಯ ಇದಕ್ಕೆ ಮಂಜೂರಾತಿ ಸಿಕ್ಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಅವರು ರವಿವಾರ ದ.ಕ. ಜಿಪಂ, ಬಂಟ್ವಾಳ ತಾಪಂ, ಕೊಳ್ನಾಡು ಗ್ರಾಪಂ, ಬಂಟ್ವಾಳ ತಾಲೂಕು ಯುವಜನ ಒಕ್ಕೂಟ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆ, ಶ್ರೀ ವಾರಾಹಿ ಯುವ ವೃಂದ, ಶ್ರೀಮಹಮ್ಮಾಯಿ ಯುವಕ ವೃಂದ ಪೆರ್ಲದಬೈಲು ಇವುಗಳ ಜಂಟಿ ಆಶ್ರಯದಲ್ಲಿ ಸಾಲೆತ್ತೂರು ಸಾರ್ವಜನಿಕ ರಂಗಮಂದಿರದ ವಠಾರದಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ 2014-15ನೆ ಸಾಲಿನ ಯುವಜನ ಮೇಳವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಗ್ರಾಮೀಣ ಪ್ರದೇಶವಾದ ಕೊಳ್ನಾಡುವಿನಲ್ಲಿ ಅದ್ದೂರಿಯಾಗಿ ಯುವಜನ ಮೇಳ ಆಯೋಜಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ರೈ, ಯುವಕ ಮಂಡಲ, ಯುವತಿ ಮಂಡಲಗಳು ಅರ್ಥಪೂರ್ಣವಾಗಿ ಬೆಳೆಯಲು ಸರಕಾರದ ಕಡೆಯಿಂದ ಸಹಾಯಧನ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬಂಟ್ವಾಳ ತಾಪಂ ಅಧ್ಯಕ್ಷ ಯಶವಂತ ದೇರಾಜೆ, ಯುವಜನ ಮೇಳಗಳಲ್ಲಿ ಪ್ರತಿಭೆೆಗಳು ಪ್ರಕಾಶಿಸಲು ಹಲವಾರು ಅವಕಾಶಗಳಿದ್ದು, ಯುವಕ ಯುವತಿಯರು ಸದ್ವಿನಿಯೋಗಿಸಬೇಕು ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಗ್ರಾಮೀಣ ಪರಿಸರದ 5 ಜನ ಸಾಧಕರಾದ ಸಾಮಾಜಿಕ ಕಾರ್ಯಕರ್ತ, ಶಿಕ್ಷಣ ಸಂಘಟಕ ಎಸ್.ಎಂ.ಅಬೂಬಕರ್, ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕಿ, ಕವಯತ್ರಿ ವಿಜಯಾ ಶೆಟ್ಟಿ ಸಾಲೆತ್ತೂರು, ದೈವ ನರ್ತಕ ವೆಂಕಪ್ಪನಲಿಕೆ ಪಾಣಾಜೆ ಕೋಡಿ, ನಿವೃತ್ತ ಅಂಚೆಯಣ್ಣ ಸಂಜೀವ ಪುರುಷ, ವಿಕಲಚೇತನ ಸಾಧಕ ಸವೇರ ಕುಟಿನ್ಹಾರನ್ನು ಸನ್ಮಾನಿಸಲಾಯಿತು.  ಸಮಾರಂಭದಲ್ಲಿ ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್, ತಾಪಂ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಐಡಾ ಸುರೇಶ್, ತಾಪಂ ಸದಸ್ಯರಾದ ದೇವಿಕಾ ಆರ್. ರೈ, ಲವೀನ ಡಿಸೋಜ, ಕೊಳ್ನಾಡು ಗ್ರಾಪಂ ಅಧ್ಯಕ್ಷೆ ಮಂಜುಳಾ ಮಾಧವ ಮಾವೆ, ಉಪಾಧ್ಯಕ್ಷ ಮುಹಮ್ಮದ್ ಮಂಚಿ, ಬೆಂಗಳೂರು ಉದ್ಯಮಿ ಮಾಧವ ಮಾವೆ, ಕೊಡಂಗೈ ವಿ.ಪ.ವ್ಯ. ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ರೈ ಮೂರ್ಜೆಬೆಟ್ಟು, ಸುದರ್ಶನ ಪಡಿಯಾರ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ, ಕುಳಾಲು ಶ್ರೀ ವಾರಾಹಿ ಯುವ ವೃಂದದ ಅಧ್ಯಕ್ಷ ಹರಿಕೃಷ್ಣ ಗೌಡ, ಪೆರ್ಲದಬೈಲು ಶ್ರೀಮಹಮ್ಮಾಯಿ ಯುವ ವೃಂದದ ಅಧ್ಯಕ್ಷ ಪ್ರವೀಣ್ ಕೆ. ಉಪಸ್ಥಿತರಿದ್ದರು.

ಬಂಟ್ವಾಳ ತಾಲೂಕು ಕ್ರೀಡಾಧಿಕಾರಿ ನವೀನ್ ಪಿ.ಎಸ್. ಸ್ವಾಗತಿಸಿದರು. ಬಂಟ್ವಾಳ ಯುವಜನ ಒಕ್ಕೂಟದ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಪ್ರಸ್ತಾವನೆಗೈದರು. ಪೆರ್ಲದಬೈಲು ಶ್ರೀಮಹಮ್ಮಾಯಿ ಯುವ ವೃಂದದ ಸಂಚಾ ಲಕ ವಿಶ್ವನಾಥ ಶೆಟ್ಟಿ ವಂದಿಸಿದರು.

ಮಾಹಿತಿ – ಪ್ರದರ್ಶನ : ಸಾಲೆತ್ತೂರು ಕೊಳ್ನಾಡು ಭಾಗದ ಆರೋಗ್ಯ ಸಹಾಯಕಿ ಹೇಮಲತಾ ಅವರ ತಂಡದಿಂದ ಆರೋಗ್ಯ ಮಾಹಿತಿಗಳನ್ನೊಳಗೊಂಡ ಸ್ಟಾಲ್, ಪುಸ್ತಕ ಪ್ರದಶರ್ನಗಳು ಹಾಗೂ ವಿ.ಮುರಳೀಧರ ಅವರ ಚುಕ್ಕಿ ಚಿತ್ರ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ಗಮನಸೆಳೆದ ಆಕರ್ಷಕ ಮೆರವಣಿಗೆ:
ಯುವಜನ ಮೇಳದ ಪ್ರಯುಕ್ತ ಇಂದು ಬೆಳಗ್ಗೆ 9 ಗಂಟೆಗೆ ಪೆರ್ಲದಬೈಲು ತಾಮ ರಾಜೆಯಿಂದ ಪ್ರಾರಂಭಗೊಂಡ ಮೆರವಣಿಗೆ ವಿವಿಧ ಕಲಾ ತಂಡಗಳು, ಚೆಂಡೆ, ವಾದ್ಯ ಘೋಷಗಳ ಆಕರ್ಷಣೆಯೊಂದಿಗೆ ಶ್ರೀಪೆರ್ಲದಬೈಲು ಅಮೃತ ರಾಯ ಸ್ವಾಗತ ದ್ವಾರದ ಮೂಲಕ ಮಠ ಮಹಾಬಲ ಶೆಟ್ಟಿ ಸಭಾಂಗಣಕ್ಕೆ ಆಗಮಿಸಿತು.

ಮೆರವಣಿಗೆಯನ್ನು ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್ ಉದ್ಘಾಟಿಸಿದರು. ಮೆರವಣಿಗೆಯಲ್ಲಿ ಕೇರಳದ ಚೆಂಡೆ ತಂಡ, ಸಾಲೆತ್ತೂರು ಪ್ರೌಢಶಾಲಾ ವಿದ್ಯಾರ್ಥಿ ಗಳ ಬ್ಯಾಂಡ್, ಸ್ಕೌಟ್ಸ್ ಮತ್ತು ಗೈಡ್ಸ್, ಕಾಡುಮಠ ಪ್ರೌಢಶಾಲಾ ವತಿ ಯಿಂದ ಬ್ಯಾಂಡ್ ಮಾರ್ಚ್ ಪಾಸ್ಟ್, ಬಿ.ಸಿ.ರೋಡ್ ಹೊಳ್ಳ ಆರ್ಟ್ಸ್ ಇವರಿಂದ ಬೊಂಬೆ ಕುಣಿತ, ಯಕ್ಷಗಾನದ ನಾನಾ ವೇಷಗಳು ಗಮನ ಸೆಳೆದವು.

Write A Comment