ಕನ್ನಡ ವಾರ್ತೆಗಳು

ಮಂಗಳೂರು : ಗಟ್ಟಿ ಬಿತ್ತ್‌ಲ್‌ನ ಎಂಟು ಮನೆಗಳ ತೆರವಿಗೆ ಕೋರ್ಟ್ ಆದೇಶ – ಬೀದಿಗೆ ಬಂದ ಕುಟುಂಬಗಳು

Pinterest LinkedIn Tumblr

Gattibithl_Problums_1

ಮಂಗಳೂರು, ಜ.29 : ನಗರದ ರಮಾಕಾಂತಿ ಮತ್ತು ರೂಪವಾಣಿ ಚಿತ್ರಮಂದಿರಗಳ ಮಧ್ಯೆ ಭವಂತಿ ರಸ್ತೆಯ ಸಮೀಪವಿರುವ ಗಟ್ಟಿ ಬಿತ್ತ್‌ಲ್ ಎಂದೇ ಖ್ಯಾತಿ ಪಡೆದ ಸುಮಾರು 30ಕ್ಕೂ ಹೆಚ್ಚು ಮನೆಗಳಿರುವ ವಠಾರವೊಂದರಲ್ಲಿರುವ ಕೆಲವು ಕುಟುಂಬಗಳ ಮನೆಯನ್ನು ಖಾಲಿ ಮಾಡಲು ಪೊಲೀಸರು ಮುಂದಾದ ಘಟನೆ ಗುರುವಾರ ನಡೆದಿದ್ದು, ಇದೀಗ ಅಲ್ಲಿ ವಾಸ್ತವ್ಯ ಹೊಂದಿರುವ ಜನರು ಆತಂಕೀಡಾಗಿದ್ದಾರೆ.

ಜಮೀನು ಮಾಲಕರು ಹಾಗೂ ಇಲ್ಲಿ ಹಲವಾರು ವರ್ಷಗಳಿಂದ ನೆಲೆಸಿದ್ದ ಕೆಲವು ಕುಟುಂಬಗಳ ಜಾಗದ ತಕರಾರು ನ್ಯಾಯಾಲಯದ ಮೆಟ್ಟಲು ಹತ್ತಿದ್ದರಿಂದ ಗಟ್ಟಿ ಬಿತ್ತ್‌ಲ್‌ನ ಈ ವಿಶಾಲವಾದ ಜಾಗದಲ್ಲಿರುವ 8 ಕುಟುಂಬಗಳು ಮನೆಯನ್ನು ಖಾಲಿ ಮಾಡಬೇಕೆಂದು ನ್ಯಾಯಾಲಯ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಜಮೀನಿನ ಮಾಲೀಕರು ಇಂದು ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿ ಮನೆಯನ್ನು ತೆರವುಗೊಳಿಸಲು ಮುಂದಾದಾಗ ಇಲ್ಲಿ ವಾಸ್ತವ್ಯ ಹೊಂದಿರುವ ಕುಟುಂಬದ ಮನೆಯವರು ಪ್ರತಿರೋಧ ತೋರಿದರು.

Gattibithl_Problums_2 Gattibithl_Problums_3 Gattibithl_Problums_5

ಈ ಸಂದರ್ಭದ ಸ್ಥಳಕ್ಕೆ ಆಗಮಿಸಿದ ಶ್ರೀರಾಮ ಸೇನೆಯ ಮುಖಂಡ ಕುಮಾರ್ ಮಾಲೆಮಾರ್ ಅವರು, ಕುಟುಂಬಸ್ಥರ ಪರವಾಗಿ ಮಾತನಾಡಿ, ತಕ್ಷಣ ಮನೆ ಖಾಲಿ ಮಾಡಲು ಸಾಧ್ಯವಿಲ್ಲ. ಮನೆ ಖಾಲಿ ಮಾಡಲು ಮತ್ತಷ್ಟು ಸಮಯಾವಕಾಶ ನೀಡಬೇಕು ಎಂದು ಆಗ್ರಹಿಸಿದರು. ಮಾತ್ರವಲ್ಲದೇ ಇಲ್ಲಿ ವಾಸಿಸುತ್ತಿರುವ ಜನರಿಗೆ ಏಕಾಏಕಿ ಮನೆಖಾಲಿ ಮಾಡಲು ಸಾದ್ಯವಾಗದ ಹಿನ್ನೆಲೆಯಲ್ಲಿ ಮನೆಯನ್ನು ತೆರವುಗೊಳಿಸಲು ಎಪ್ರಿಲ್‌ ತನಕ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.

Gattibithl_Problums_6 Gattibithl_Problums_7 Gattibithl_Problums_8

 

ಆದರೆ ಸ್ಥಳದ ಮಾಲೀಕರಾದ ಸುರೇಶ್ ಭಟ್ ಅವರು ಇದಕ್ಕೆ ಒಪ್ಪದೇ ಬರುವಾ ಗುರುವಾರದೊಳಗೆ ಮನೆಗಳನ್ನು ಖಾಲಿ ಮಾಡ ಬೇಕು. ಒಂದು ವಾರದ ಕಾಲಾವಕಾಶ ಮಾತ್ರ ನೀಡುವುದಾಗಿ ತಿಳಿಸಿದರು. ಮಾತ್ರವಲ್ಲದೇ ಗುರುವಾರದೊಳಗೆ ಮನೆ ಖಾಲಿ ಮಾಡದಿದ್ದರೆ ನ್ಯಾಯಾಲಯದ ಆದೇಶದಂತೆ ಬೀಗ ಹಾಕಲಾಗುವುದು. ಅದಕ್ಕಿಂತ ಮೊದಲು ಮನೆಯಲ್ಲಿರುವ ವಸ್ತುಗಳನ್ನು ತೆಗೆದುಕೊಂಡು ಹೋಗಲು ಈ ಕುಟುಂಬದ ಸದಸ್ಯರಿಗೆ ಅವಕಾಶ ನೀಡುವುದಾಗಿ ಸುರೇಶ್ ಭಟ್ ಭರವಸೆ ನೀಡಿದರು.

ದಶಕಗಳಿಂದ ಕಾನೂನು ಹೋರಾಟ :

ರಮಾಕಾಂತಿ ಮತ್ತು ರೂಪವಾಣಿ ಚಿತ್ರಮಂದಿರಗಳ ನಡುವಿನ ಈ ಗಟ್ಟಿ ಬಿತ್ತ್‌ಲ್ ಹೆಸರಿನ ಜಮೀನು ಸುರೇಶ್ ಭಟ್ ಮತ್ತು ಮುಂಬೈ ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದ್ದಾಗಿದೆ. ಈ ಜಾಗದ ಬಗ್ಗೆ ದಶಕಗಳ ಹಿಂದಿನಿಂದಲೂ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಯುತ್ತಿದೆ.

Gattibithl_Problums_9 Gattibithl_Problums_10 Gattibithl_Problums_11 Gattibithl_Problums_12 Gattibithl_Problums_13 Gattibithl_Problums_4

1999ರಲ್ಲಿ ಈ ಜಮೀನನ್ನು ಅದರ ಮಾಲೀಕರಾದ ಸುರೇಶ್ ಭಟ್ ಅವರಿಗೆ ಒಪ್ಪಿಸುವಂತೆ ಕೋರ್ಟ್ ಆದೇಶ ನೀಡಿತ್ತು. ಆದರೆ, ಈ ಆದೇಶದ ವಿರುದ್ಧ ಅಲ್ಲಿ ನೆಲೆಸಿದ್ದ ಕುಟುಂಬದವರು ಮೇಲ್ಮನವಿ ಸಲ್ಲಿಸಿದ ಕಾರಣ ಪುನಃ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಇದೀಗ ನ್ಯಾಯಾಲಯ ಮನೆ ತೆರವು ಆದೇಶ ಹೊರಡಿಸಿರುವುದರಿಂದ ಈ ಎಂಟು ಕುಟುಂಬಗಳು ಮನೆಯನ್ನು ಅನಿವಾರ್ಯವಾಗಿ ತೆರವು ಮಾಡಬೇಕಾಗಿ ಬಂದಿದೆ.

*******************************************************************

ತಡವಾಗಿ ಬಂದ ವರದಿ :

ಗಟ್ಟಿಹಿತ್ಲು ಮನೆ ತೆರವಿಗೆ ಪ್ರತಿರೋಧ – ವಿರೋಧದ ನಡುವೆಯೂ 8 ಮನೆಗೆ ಬೀಗ

ಮಂಗಳೂರು: ನಗರದ ಕಾರ್‌ಸ್ಟ್ರೀಟ್ ಬಳಿಯ ಗಟ್ಟಿಹಿತ್ಲುನಲ್ಲಿ ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಗುರುವಾರ ಮನೆಗಳನ್ನು ತೆರವುಗೊಳಿಸಲು ಬಂದಾಗ ಗೊಂದಲ ಏರ್ಪಟ್ಟು, ಬಳಿಕ ಮಾತುಕತೆ ನಡೆಸಿ ಮನೆಯೊಳಗಿದ್ದ ಸಾಮಾಗ್ರಿಗಳನ್ನು ಹೊರಗಿಟ್ಟು ಬೀಗ ಜಡಿಯಲಾಯಿತು.

ಗಟ್ಟಿಹಿತ್ಲು ಪ್ರದೇಶದಲ್ಲಿ ಸುಮಾರು 32 ಮನೆಗಳಿವೆ. 350ರಷ್ಟು ಮಂದಿ ವಾಸ ಮಾಡುತ್ತಿದ್ದಾರೆ. ಈ ಜಾಗ ಮಾಧವ ಭಟ್ ಎಂಬವರಿಗೆ ಸೇರಿದ್ದಾಗಿದೆ. ಅವರು ನಿಧನರಾಗಿದ್ದು, ಇದೀಗ ಅವರ ಮೊಮ್ಮಗ ಸುಭಾಶ್ ಭಟ್ ಅವರು ಜಾಗ ತಮಗೆ ಸೇರಿದ್ದು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯ ಅಲ್ಲಿರುವ 8 ಮನೆಗಳನ್ನು ತೆರವುಗೊಳಿಸಲು ಆದೇಶ ನೀಡಿತ್ತು.

ನ್ಯಾಯಾಲಯದ ಆದೇಶ ಬಳಿಕ ಹಲವು ಬಾರಿ ಸುಭಾಶ್ ಭಟ್ ಅಲ್ಲಿನ ನಿವಾಸಿಗಳಾದ ಸೀತಾ, ಜಲಜ, ಸೀತು, ಯಮುನಾ, ಲಕ್ಷ್ಮೀ, ಕಮಲಾಕ್ಷಿ, ಜನಾರ್ದನ ಗಟ್ಟಿ ಹಾಗೂ ಸುಂದರಿ ಅವರಿಗೆ ಮನೆ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದ್ದರು. ಆದರೆ ಈ ತನಕ ಮನೆ ತೆರವುಗೊಳಿಸದೇ ಇದ್ದುದರಿಂದ ಪೊಲೀಸ್ ಭದ್ರತೆಯೊಂದಿಗೆ ಮನೆ ತೆರವುಗೊಳಿಸಲು ಬಂದಿದ್ದರು. ಈ ಸಂದರ್ಭ ಅಲ್ಲಿನ ನಿವಾಸಿಗಳು ಮನೆ ತೆರವುಗೊಳಿಸುವುದರ ವಿರುದ್ಧ ಪ್ರತಿರೋಧ ಒಡ್ಡಿದರು.

ಈ ಸಂದರ್ಭ ಅಲ್ಲಿಗಾಗಮಿಸಿದ ಜಾಗದ ಮಾಲಕ ಸುಭಾಶ್ ಭಟ್, 2012 ರಲ್ಲಿ ನ್ಯಾಯಾಲಯದ ಆದೇಶವಾಗಿದೆ. ಮನೆ ತೆರವುಗೊಳಿಸಲು ಮೂರು ವರ್ಷಗಳ ಕಾಲ ಮಾನವೀಯ ನೆಲೆಯಲ್ಲಿ ಕಾಲಾವಕಾಶ ನೀಡಿದ್ದೇನೆ. ಆದ್ದರಿಂದ ಇನ್ನು ಸಮಯವಕಾಶ ನೀಡುವುದಿಲ್ಲ’ ಎಂದರು.

`ತಾವು ವಾಸವಿರುವ ಜಾಗ ನಮಗೇ ನೀಡುವುದಾಗಿ ಸುಭಾಶ್ ಭಟ್ ಅವರ ಅಜ್ಜ 7.20 ಲಕ್ಷ ರೂಪಾಯಿ ತೆಗೆದುಕೊಂಡಿದ್ದಾರೆ. ಇದೀಗ ಅವರು ನಿಧನ ಹೊಂದಿದ್ದಾರೆ. ಇದೀಗ ಹಣವೂ ಇಲ್ಲ, ಮನೆಯೂ ಇಲ್ಲದಂತಾಗಿದೆ. ಮುಂಚಿತವಾಗಿ ನೊಟೀಸು ನೀಡದೆ ಏಕಾ‌ಏಕಿ ಮನೆ ತೆರವುಗೊಳಿಸುವುದು ಸರಿಯಲ್ಲ’ ಎಂದು ಶೇಖರ ಗಟ್ಟಿ ಹೇಳಿದರು. ಹಣ ನೀಡಿರುವ ಬಗ್ಗೆ ಇಲ್ಲಿನ ನಿವಾಸಿಗಳಲ್ಲಿ ಯಾವುದೇ ದಾಖಲೆಗಳಿಲ್ಲ.

ನ್ಯಾಯಾಲಯದ ಆದೇಶದಂತೆ 8 ಮನೆಗಳ ಒಳಗಿದ್ದ ಸಾಮಾಗ್ರಿಗಳನ್ನು ಹೊರಗಿಟ್ಟು ಮನೆಗೆ ಬೀಗ ಹಾಕಲಾಯಿತು. ಬಂದರು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಚೆಲುವರಾಜ್, ಕದ್ರಿ ಇನ್‌ಸ್ಪೆಕ್ಟರ್ ಟಿ.ಡಿ.ನಾಗರಾಜ್ ನೇತೃತ್ವದಲ್ಲಿ ಬಂದರು, ಬರ್ಕೆ, ಕದ್ರಿ ಪೊಲೀಸರು ಬಂದೋಬಸ್ತ್ ಕೈಗೊಂಡರು.

Write A Comment