ಕನ್ನಡ ವಾರ್ತೆಗಳು

ಬಹುಭಾಷಾ ಕವಿಗೋಷ್ಠಿಯಲ್ಲಿ ಉದಯೋನ್ಮುಖ ಕವಯತ್ರಿಯ ಕವನಕ್ಕೆ ಚಪ್ಪಾಳೆಯ ಸುರಿಮಳೆ.

Pinterest LinkedIn Tumblr

kallkura_kavi_gosthi

ಮಂಗಳೂರು,ಜ.27 : ಹೆಡೆದ ಕೂಸು ಹೆಣ್ಣಂತೆ, ಅದು ಅವರಿಗೆ ಹುಣ್ಣಂತೆ… ಎಂಬ ಸಾಲುಗಳನ್ನು ಕೇಳುತ್ತಾ ಅಲ್ಲಿ ಸೇರಿದ್ದ ಸಭಿಕರು ಯುವ ಕವಯಿತ್ರಿಯ ಸಾಲುಗಳಿಗೆ ಪ್ರೋತ್ಸಾಹದ ಚಪ್ಪಾಳೆ ನೀಡಿದರು. ಅಕ್ಷತಾ ಡಿ. ಸಾಲಿಯಾನ್‌ ಎಂಬ ಉದಯೋನ್ಮುಖ ಕವಯಿತ್ರಿಯ ಕವನದಲ್ಲಿ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಮಹಿಳಾ ದೌರ್ಜನ್ಯ ವಿರೋಧದ ಧ್ವನಿ ಎದ್ದುಕಾಣುತ್ತಿತ್ತು.

ಗಣರಾಜ್ಯೋತ್ಸವದ ಅಂಗವಾಗಿ ನಗರದ ರವೀಂದ್ರ ಕಲಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಬಹುಭಾಷಾ ಕವಿಗೋಷ್ಠಿಯಲ್ಲಿ ಜಿಲ್ಲೆಯ ಕವಿ, ಕವಯಿತ್ರಿಯರು ಕವನಗಳನ್ನು ವಾಚಿಸಿದರು. ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್‌ಕುಮಾರ್‌ ಕಲ್ಕೂರ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

ಅರೆಭಾಷೆಯಲ್ಲಿ ಲೋಕೇಶ್‌ ಸುಳ್ಯ, ದೇವರಾಜ ಕುದ್ಪಾಜೆ, ಮರಾಠಿಯಲ್ಲಿ ಎಚ್‌. ಭೀಮರಾವ್‌, ಕುಂದಗನ್ನಡದಲ್ಲಿ ನಾಗರಾಜ ಖಾರ್ವಿ, ಬ್ಯಾರಿ ಭಾಷೆಯಲ್ಲಿ ಮಹಮ್ಮದ್‌ ಬಡ್ಡೂರು, ಹಿಂದಿಯಲ್ಲಿ ಡಾ. ನಾಯಕ್‌ ರೂಪ್‌ ಸಿಂಗ್‌ಜಿ ಮತ್ತು ವಜ್ರಾ ರಾವ್‌, ಕೊಂಕಣಿಯಲ್ಲಿ ಯಶವಂತ ಬಿ.ಎಸ್‌. ಮತ್ತು ಫೆಲ್ಸಿ ಲೋಬೊ ಕವನ ವಾಚನ ಮಾಡಿದರು.

ಆನಂದ್‌, ಚಂದ್ರಾವತಿ, ಮುಂಡೋಡು ಧರ್ಮಾಲ ರಾವ್‌ ಜಾಧವ್‌, ಸಜಿಪ ಮೊಹಮ್ಮದ್‌ ನಾಸಿರ್‌, ಜಯಶ್ರೀ ಇಡ್ಕಿದು ಮತ್ತಿತರರು ವಿಭಿನ್ನ ಕವನಗಳನ್ನು ಪ್ರಸ್ತುತ ಪಡಿಸಿದರು. ‘ಮೋದಿ ಸರ್ಕಾರ್‌ ಮೇರಾ ಸರ್ಕಾರ್‌’ ಎಂಬ ಕವನವನ್ನು ವಜ್ರಾರಾವ್‌ ಪ್ರಸ್ತುತಪಡಿಸಿದರೆ ವೃತ್ತಿಯಲ್ಲಿ ಪೊಲೀಸ್‌ ಆಗಿರುವ ಆನಂದ್‌ ಲಾಟಿಯ ಬಗ್ಗೆಯೇ ಕವನ ಕಟ್ಟಿದ್ದರು.

‘ಎಪ್ಪ ಚಿರಿಕಿರೋ ನೆನಪೇ ಇಲ್ಲೆ, ಇಪ್ಪ ಚಿರಿಕೆ ಬಂಡೇ ಇಲ್ಲೆ..’ ಎಂದು ಮರೆತು ಹೋದ ನಗುವಿನ ಬಗ್ಗೆ ಮಹಮ್ಮದ್‌ ಬಡ್ಡೂರು ಬ್ಯಾರಿ ಭಾಷೆಯಲ್ಲಿ ಬರೆದ ಕವನ ಪ್ರಸ್ತುತ ಸಾಮಾಜಿಕ ಸ್ಥಿತಿಗೆ ಕನ್ನಡಿ ಹಿಡಿದಂತಿತ್ತು.

ಪುರಸ್ಕಾರ: ಕಳೆದ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ 125ರಲ್ಲಿ 125 ಅಂಕಗಳನ್ನು ಪಡೆದ ಸೇಂಟ್‌ ಆಗ್ನೆಸ್‌ ಪ್ರೌಢಶಾಲೆಯ ವಿದ್ಯಾರ್ಥಿನಿ ಶಾರ್ವಾಣಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ತಹಶೀಲ್ದಾರ್‌ ಮೋಹನ ರಾವ್‌, ಮಂಗ ಳೂರು ದಕ್ಷಿಣ ವಿಭಾಗದ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್‌, ಕನ್ನಡ ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ಚಂದ್ರಹಾಸ ರೈ ಮತ್ತಿತರರು ಇದ್ದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಚಿನ್ಮಯ ಮಿಷನ್‌ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Write A Comment