ಕನ್ನಡ ವಾರ್ತೆಗಳು

ಕಾರ್ಕಳ ಗೊಮ್ಮಟನ ಮಹಾಮಜ್ಜನಕ್ಕೆ ಭರದ ಸಿದ್ದತೆ : ನಾಳೆಯಿಂದ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಆರಂಭ

Pinterest LinkedIn Tumblr

Karkala_gomata_siddate_1

ಕಾರ್ಕಳ, ಜ.20: ಕಾರ್ಕಳದ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕಕ್ಕೆ ಇನ್ನು ಕೇವಲ ಒಂದು ದಿನ ಮಾತ್ರ ಬಾಕಿ ಇದ್ದು, ಮಹಾಮಸ್ತಕಾಭಿಷೇಕದ ಶುಭಾವಸರದಲ್ಲಿ ಆತ್ಮಕಲ್ಯಾಣದೊಂದಿಗೆ ಲೋಕ ಕಲ್ಯಾಣಾರ್ಥ ಹತ್ತು ಹಲವು ಜನಕಲ್ಯಾಣ ಯೋಜನೆಗಳನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದು ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ಕಾರ್ಕಳದ ಗೊಮ್ಮಟ ಬೆಟ್ಟದ ತಪ್ಪಲಲ್ಲಿರುವ ಸಮಿತಿಯ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜೇಂದ್ರಕುಮಾರ್, ಕಾರ್ಕಳ ಶ್ರೀಜೈನ ಮಠದ ರಾಜಗುರು ಧ್ಯಾನಯೋಜಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಭಟ್ಟಾಚಾರ್ಯ ಮಹಾಸ್ವಾಮೀಜಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಮಹಾಮಸ್ತಕಾಭಿಷೇಕದ ಯಶಸ್ಸಿಗೆ ಸಮಿತಿ ಹಾಗೂ ಉಪ ಸಮಿತಿಗಳು ಹಗಲಿರುಳು ದುಡಿಯುತ್ತಿವೆ ಎಂದರು.

ಮಹಾಮಸ್ತಕಾಭಿಷೇಕಕ್ಕೆ ಸಂಬಂಧಿಸಿದಂತೆ ಕಾರ್ಕಳದ ಎಲ್ಲಾ 18 ಬಸದಿಗಳಲ್ಲೂ ವಿವಿಧ ಆರಾಧನೆಗಳು ಪ್ರತಿದಿನ ನಡೆಯುತ್ತಿವೆ. ವಿಶ್ವಶಾಂತಿಗಾಗಿ ಅಹಿಂಸೆ ಹಾಗೂ ತ್ಯಾಗಕ್ಕೆ ಒತ್ತು ಕೊಡುವ ದೃಷ್ಟಿಯಿಂದ ತ್ಯಾಗದ ಸಂದೇಶವನ್ನು ಜಗತ್ತಿಗೆ ಸಾರಿ ಹೇಳುವ ಮಹಾಮಸ್ತಕಾಭಿಷೇಕವನ್ನು ವಿಶೇಷ ರೀತಿಯಲ್ಲಿ ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನೂ ಕೈಗೊಳ್ಳಲಾಗಿದೆ ಎಂದು ಅವರು ನುಡಿದರು.

Karkala_gomata_siddate_2

ಮಹಾಮಸ್ತಕಾಭಿಷೇಕದ ನೆಪದಲ್ಲಿ ನಗರದ ಸುಂದರೀಕರಣ ಹಾಗೂ ಸುಮಾರು 13.5 ಕೋಟಿ ರೂ.ಗಳ ವೆಚ್ಚದಲ್ಲಿ ಕಾರ್ಕಳ ಪುರಸಭಾ ವ್ಯಾಪ್ತಿಯ 18 ರಸ್ತೆಗಳ ಅಗಲೀಕರಣ, ಡಾಮರೀಕರಣ ಮುಕ್ತಾಯಗೊಂಡಿದೆ. 42 ಅಡಿ ಎತ್ತರದ ಬಾಹುಬಲಿ ಮೂರ್ತಿಯ ಮಹಾಮಜ್ಜನಕ್ಕಾಗಿ ಇದೇ ಮೊದಲ ಬಾರಿಗೆ, ಸುರಕ್ಷತೆಯ ದೃಷ್ಟಿಯಿಂದ ಕಬ್ಬಿಣದ ಅಟ್ಟಳಿಗೆಯನ್ನು ನಿರ್ಮಿಸಲಾಗಿದೆ. ಐದು ಅಂತಸ್ತುಗಳ ಈ ಅಟ್ಟಳಿಗೆಯಲ್ಲಿ ಒಮ್ಮೆಗೆ 400ರಿಂದ 500 ಮಂದಿ ನಿಂತು ಅಭಿಷೇಕ ನೆರವೇರಿಸಬಹುದಾಗಿದೆ.

3,000ಮಂದಿಗೆ ಅವಕಾಶ: ಬೆಟ್ಟದ ಹೊರಗಿನ ಆವರಣದಲ್ಲಿ ಆರು ಅಡಿ ಎತ್ತರದ ವೇದಿಕೆಯನ್ನು ನಿರ್ಮಿಸಿ ಒಮ್ಮೆಗೆ ಸುಮಾರು 3,000 ಮಂದಿ ಮಹಾಮಸ್ತಕಾಭಿಷೇಕ ವೀಕ್ಷಿಸಲು ಅವಕಾಶ ಕಲ್ಪಿಸಲಾಗುವುದು. ವಾಹನಗಳ ಪಾರ್ಕಿಂಗ್‌ಗಾಗಿ ಒಟ್ಟು ಐದು ಕಡೆಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಭದ್ರತೆಗಾಗಿ ಇಲ್ಲಿ ಎಲ್ಲಾ ಕಡೆಗಳಲ್ಲೂ ಸಿಸಿಟಿವಿ ಅಳವಡಿಸಲಾಗಿದೆ ಎಂದು ರಾಜೇಂದ್ರಕುಮಾರ್ ನುಡಿದರು.

ಪಟ್ಟಣಶೆಟ್ಟಿ ಮೈದಾನದಲ್ಲಿ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಟ್ಟದ ಬುಡದ ಸುಮಾರು ಮೂರುವರೆ ಎಕರೆ ಜಾಗದಲ್ಲಿ ಆಕರ್ಷಕ ವಸ್ತುಪ್ರದರ್ಶನವನ್ನು ಆಯೋಜಿಸಲಾಗಿದೆ. ವಿವಿಧ ಸರಕಾರಿ ಇಲಾಖೆಗಳೊಂದಿಗೆ ಸುಮಾರು 350 ವೈವಿಧ್ಯಮಯ ಮಳಿಗೆಗಳು ಇದರಲ್ಲಿ ಇರಲಿವೆ. ಮಕ್ಕಳ ಮನೋರಂಜನೆಗೆ ಅಮ್ಯೂಸ್‌ಮೆಂಟ್ ಪಾರ್ಕ್ ಇದ್ದು, ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ವ್ಯವಸ್ಥೆಗೊಳಿಸಲಾಗುವುದು. ಇದರೊಂದಿಗೆ ಕೃಷಿ ಮೇಳವೂ ಇರಲಿದೆ ಎಂದರು.

ವಸತಿ ವ್ಯವಸ್ಥೆ: ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ನಗರದ ಎಲ್ಲಾ ಶಾಲಾ-ಕಾಲೇಜುಗಳಿಗೆ, ಸ್ಥಳೀಯ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಶಾಲಾ-ಕಾಲೇಜುಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ನಗರದ ಎಲ್ಲಾ ಸಮಾಜದ ಮಂದಿ ಇದನ್ನು ನಾಡಹಬ್ಬದ ರೀತಿಯಲ್ಲಿ ಆಚರಿಸಬೇಕೆಂಬುದು ಸಮಿತಿಯ ಆಶಯವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎಂ.ಕೆ.ವಿಜಯಕುಮಾರ್, ಕೋಶಾಧಿಕಾರಿ ಜೀವಂದರ ಬಲ್ಲಾಳ್, ಕಾರ್ಯದರ್ಶಿ ಕೆ.ಗುಣಪಾಲ ಕಡಂಬ, ಉಪಾಧ್ಯಕ್ಷರಾದ ಜೀವಂಧರ್ ಕುಮಾರ್, ಎಸ್.ಡಿ.ಸಂಪತ್ ಸಾಮ್ರಾಜ್ಯ, ಪ್ರಭಾತ್‌ಕುಮಾರ್, ಪುಷ್ಪರಾಜ ಜೈನ್,ಎಂ.ಕೆ.ಸುವೃತ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Write A Comment